ಶುಕ್ರವಾರ, ಆಗಸ್ಟ್ 12, 2022
27 °C
ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮ

ಮೈಸೂರು: ಸಿದ್ಧಲಿಂಗಯ್ಯ ಅವರಿಗೆ ನುಡಿನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕವಿ ಸಿದ್ಧಲಿಂಗಯ್ಯ ಅವರಿಗೆ ಇಲ್ಲಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು.‌

ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ವಿಮರ್ಶಕ ಪ್ರೊ.ಸಿ.ನಾಗಣ್ಣ, ‘ಸಿದ್ಧಲಿಂಗಯ್ಯ ಅವರ ಹೆಚ್ಚಿನ ಕೃತಿಗಳು ಇಂಗ್ಲೀಷ್‌ಗೆ ಭಾಷಾಂತರ ಆಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಇವರ ಆಯ್ದ ಕವನಗಳನ್ನು ಭಾಷಾಂತರಿಸುವ ಕೆಲಸ ನಡೆಯುತ್ತಿದೆ. ಇದು ಬಿಡುಗಡೆಯಾಗುವ ಮುನ್ನವೇ ಇವರು ನಿಧನರಾದರು ಎಂದು ಹೇಳಿದರು.

ತಮ್ಮ ಕಾವ್ಯಗಳ ಮೂಲಕ ದಲಿತ ಲೋಕದಲ್ಲಿ ಇವರು ಜಾಗೃತಿ ಮೂಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರ್ಮಿಸಿದ ರಥವನ್ನು ಮುಂದಕ್ಕೆ ತಳ್ಳಿದವರು ಇವರು ಎಂದು ಅವರು ಶ್ಲಾಘಿಸಿದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ‘ಸಿದ್ಧಲಿಂಗಯ್ಯ ಅವರು ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂದು ಹೇಳುವ ಮೂಲಕ ಜನರನ್ನು ಬಡಿದೆಬ್ಬಿಸಿದರು’ ಎಂದು ಹೇಳಿದರು.

ಇವರು ಯಾರನ್ನೂ ನೋಯಿಸುತ್ತಿರಲಿಲ್ಲ. ದಲಿತ ಸಾಹಿತ್ಯದ ಮುಖ್ಯ ಕವಿ ಮಾತ್ರವಲ್ಲ ಸಾಂಸ್ಕೃತಿಕ ಕವಿಯೂ ಹೌದು ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ‘ಸಿದ್ಧಲಿಂಗಯ್ಯ ಅವರ ಕವಿತೆಗಳು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ದೊಡ್ಡ ಅಸ್ತ್ರಗಳಾಗಿದ್ದವು. ಅವರ ಕವಿತೆಗಳು ಇಂದಿಗೂ ಹೋರಾಟದ ಕಿಚ್ಚನ್ನು ಹೊತ್ತಿಸುತ್ತವೆ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ವೆಂಕಟೇಶ್, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಮುಖಂಡ ಲೋಕೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು