ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣ ಭ್ರಷ್ಟಾಚಾರ ಆರೋಪ: ಬಹಿರಂಗ ಚರ್ಚೆಗೆ ಸವಾಲೆಸೆದ ಲಕ್ಷ್ಮಣ

ಕೇಂದ್ರ ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಹಾಕಿದ ಮಂಜುಳಾ ಮಾನಸ
Last Updated 11 ಜುಲೈ 2020, 12:30 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್ ನಿಯಂತ್ರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ಕೋವಿಡ್ ನಿಯಂತ್ರಣಕ್ಕೆ ₹ 550 ಕೋಟಿ ಮಾತ್ರವೇ ಖರ್ಚಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸುಳ್ಳು ಹೇಳುತ್ತಿದ್ದಾರೆ. ಅವರು ಬಹಿರಂಗ ಸಭೆ ಕರೆದು ಚರ್ಚಿಸಲಿ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.

‌₹ 10 ಲಕ್ಷ ‘ಎನ್-95’ ಮಾಸ್ಕ್ ಖರೀದಿಸಲು ₹ 29.5 ಕೋಟಿ ಹಣ ನೀಡಲು ತೀರ್ಮಾನಿಸಿದ್ದರೂ, ದಿಢೀರನೆ ₹ 46 ಕೋಟಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಸುಮಾರು ₹ 16 ಕೋಟಿಯಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಒಂದು ‘ಎನ್-95’ ಮಾಸ್ಕ್ ಮಾರುಕಟ್ಟೆ ಬೆಲೆ ₹ 65. ಆದರೆ, ಒಂದು ಮಾಸ್ಕ್‌ಗೆ ₹ 460 ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

‘ಮಾರುಕಟ್ಟೆ ದರಕ್ಕಿಂತ 8 ಪಟ್ಟು ಹೆಚ್ಚಿನ ಬೆಲೆ ನೀಡಿ ಖರೀದಿಸಿರುವುದೇ ಭ್ರಷ್ಟಾಚಾರ ಆಗಿರುವುದಕ್ಕೆ ಸಾಕ್ಷಿ’ ಎಂದು ಅವರು ಆರೋಪಿಸಿದರು.

ಮೊದಲು ₹ 464.81 ಕೋಟಿ ಮೊತ್ತದ ಸಾಮಗ್ರಿ, ಉಪಕರಣಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಅನಂತರ ₹ 815.85 ಕೋಟಿ ಮೊತ್ತ ನೀಡಿ ಉಪಕರಣಗಳನ್ನು ಖರೀದಿಸಲು ಮುಂದಾಯಿತು ಎಂದರು.

ಇದೇ ರೀತಿ ₹ 78 ಬೆಲೆಯ 500 ಎಂ‌.ಎಲ್ ಸ್ಯಾನಿಟೈಸರ್‌ನ್ನು ₹ 600ಕ್ಕೆ, ₹ 3,500 ಬೆಲೆಯ ಒಂದು ಥರ್ಮಲ್ ಸ್ಕ್ಯಾನರ್‌ನ್ನು ₹ 9 ಸಾವಿರಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಿದರು.

ಮುರುಗೇಶ್ ನಿರಾಣಿ ಮೇ 28ರಂದು ನಡೆದ ಸಭೆಯೊಂದರಲ್ಲಿ ‘ಕೊರೊನಾ ಸಂಬಂಧಿ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿರುವ 125 ಪುಟಗಳ ಫೈಲ್ ಇರುವ ಪೆನ್‌ಡ್ರೈವ್ ಇದೆ’ ಎಂದಿದ್ದರು. ಇದು ಸಭೆಯ ನಡುವಳಿಯಲ್ಲಿಯೂ ದಾಖಲಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ‘ಸಾರ್ವಜನಿಕರು ಮತ್ತು ಚೀನಾ ಕಂಪನಿಗಳಿಂದ ಪಡೆದಿರುವ ಒಂದು ಲಕ್ಷ ಕೋಟಿ ರೂಪಾಯಿಯಷ್ಟು ದೇಣಿಗೆಯ ವಿವರಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

ವಿವೇಕಾನಂದ ಫೌಂಡೇಷನ್, ಇಂಡಿಯಾ ಫೌಂಡೇಷನ್ ಬಗ್ಗೆಯೂ ತನಿಖೆಗೆ ಆದೇಶಿಸುವಿರಾ, ಓವರ್ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಎಂಬ ಸಂಸ್ಥೆಗೆ ಯಾರು ಎಷ್ಟು ಹಣ ನೀಡಿದ್ದಾರೆ, ಚೀನಾ ದೇಶದಿಂದ ಎಷ್ಟು ದೇಣಿಗೆ ಬಂದಿದೆ ಮತ್ತು ಏತಕ್ಕಾಗಿ ಉಪಯೋಗಿಸಲಾಗಿದೆ ಎಂಬುದನ್ನು ಬಹಿರಂಗ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT