ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ ಕಾಡಿನಿಂದ ಹೊರಬಂದು ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಂಡುಕೊಂಡ ಗಿರಿಜನರು

24ನೇ ವಸಂತಕ್ಕೆ ಕಾಲಿಟ್ಟ ನಾಗಾಪುರ ಗಿರಿಜನರ ಕೃಷಿ ಬದುಕು
Last Updated 10 ಅಕ್ಟೋಬರ್ 2020, 2:18 IST
ಅಕ್ಷರ ಗಾತ್ರ

ಹುಣಸೂರು: ನಾಗರಹೊಳೆ ಉದ್ಯಾನದಿಂದ ಹೊರಬಂದ ನಾಗಾಪುರ ಪುನರ್ವಸತಿ ಕೇಂದ್ರದ ಗಿರಿಜನರು 24 ವರ್ಷ ಪೂರೈಸಿ ಸ್ವಾವಲಂಬಿ ಬದುಕಿಗೆ ‘ಕೃಷಿ ಆಶ್ರಯಿಸಿ’ ಉತ್ತಮ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ಹೌದು...! 1997ರಲ್ಲಿ ನಾಗರಹೊಳೆಯಿಂದ ಪುನರ್ವಸತಿ ಕೇಂದ್ರಕ್ಕೆ ಬಂದ ಗಿರಿಜನರು ಹೊರಪ್ರಪಂಚಕ್ಕೆ ಹೊಂದಿಕೊಳ್ಳಲು 2 ದಶಕ ತೆಗೆದುಕೊಂಡು ಈಗ ತಮ್ಮದೇ ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಯಶಸ್ಸು ಕಂಡಿದ್ದಾರೆ.

ನಾಗಾಪುರ ಪುನರ್ವಸತಿ ಕೇಂದ್ರದ 730 ಹೆಕ್ಟೇರ್ ಪ್ರದೇಶದಲ್ಲಿ 5 ಘಟಕದಲ್ಲಿ ತಳವೂರಿದ್ದ 180 ಗಿರಿಜನ ಕುಟುಂಬಗಳಲ್ಲಿ 120 ಕುಟುಂಬ ಕೃಷಿ ಆಧರಿಸಿ ಸ್ವಾವಲಂಬಿ ಜೀವನ ನಡೆಸಿ ಮಾದರಿಯಾಗಿದೆ. ಸರ್ಕಾರ ಪುನರ್ವಸತಿ ಕೇಂದ್ರದ ಗಿರಿಜನರಿಗೆ ಆರಂಭದಲ್ಲಿ ನೀಡಿದ ವಿವಿಧ ಯೋಜನೆ ಸಕಾರಾತ್ಮಕವಾಗಿ ಬಳಸಿಕೊಳ್ಳಲು ತಿಳಿಯದೆ ಏಳುಬೀಳು ಕಂಡು ಈಗ ಉತ್ತಮ ಕೃಷಿಕರಾಗಿ ಹೊರಹೊಮ್ಮಿದ್ದು ವಾಣಿಜ್ಯ ಬೆಳೆ ಮುಸುಕಿನಜೋಳ ಮತ್ತು ಶುಂಠಿ ಬೆಳೆದು ಆರ್ಥಿಕ ಸದೃಢತೆ ಹೊಂದಿದ್ದು, ಕೃಷಿಕರಾಗಿ ಭಾರಿ ಬದಲಾವಣೆ ಕಂಡುಕೊಂಡಿದ್ದಾರೆ.

ನಾಗಾಪುರ ಬ್ಲಾಕ್ 2 ರ ಜೆ.ಕೆ.ಬಸಪ್ಪ ಮಾತನಾಡಿ, ‘ಸರ್ಕಾರ ನೀಡಿದ ಭೂಮಿಯಲ್ಲಿ ಕಳೆದ 10 ವರ್ಷದಿಂದ ಬೇಸಾಯ ಮಾಡುತ್ತಿದ್ದೇವೆ. ಆದರೆ, ಭೂ ದಾಖಲೆ ಇಲ್ಲದೆ ಗಿರಿಜನರಿಗೆ ಕೃಷಿ ಬ್ಯಾಂಕ್ ಸಾಲ ಇಲ್ಲವಾಗಿದೆ. ದಲ್ಲಾಳಿಯಿಂದ ಕೈ ಸಾಲ ‍ಪಡೆದು ಬೇಸಾಯ ಮಾಡಿ ಅವರಿಗೆ ಮಾರಾಟ ಮಾಡಬೇಕಾಗಿದೆ. ಇದರಿಂದ ಲಾಭಾಂಶ ಕಡಿಮೆ’ ಎಂದು ಹೇಳಿದರು.

ಕೈ ಹಿಡಿದ ಜೋಳ: ಮಳೆ ಆಶ್ರಯದಲ್ಲಿ ಮುಸುಕಿನಜೋಳ ಬೆಳೆಯುವ ಗಿರಿಜನರು 6 ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗುವರು. ಕಟಾವು ಮುಗಿಯುತ್ತಿದ್ದಂತೆ ದುಡಿಮೆಗಾಗಿ ಕೊಡಗಿನ ಕಾಫಿ ತೋಟಕ್ಕೆ ಮುಖ ಮಾಡುವರು.

ಆರ್ಥಿಕ ಸ್ಥಿತಿ ಸುಧಾರಣೆ: ನಾಗಾಪುರ ಗಿರಿಜನರ ಆರ್ಥಿಕ ಸ್ಥಿತಿಗತಿ ಇತ್ತೀಚೆಗೆ ಉತ್ತಮವಾಗಿದ್ದು, 180 ಕುಟುಂಬಗಳಲ್ಲಿ 70 ಕುಟುಂಬಗಳು ದ್ವಿಚಕ್ರ ವಾಹನ, 10 ರಿಂದ 15 ಕುಟುಂಬ ಜೀಪ್ ಹೊಂದಿದ್ದಾರೆ. ಇದಲ್ಲದೆ ಬಹುತೇಕ ಯುವಕರೂ ಸ್ಮಾರ್ಟ್‌ಫೋನ್ ಬಳಸುವ ಹಂತಕ್ಕೆ ತಲುಪಿದ್ದಾರೆ ಎನ್ನುವರು ಜೆ.ಕೆ.ಮಣಿ.

‘ಸರ್ಕಾರ ಗಿರಿಜನ ಕೃಷಿಕರ ಅಭಿವೃದ್ಧಿಗೆ ‘ರೈತ ಉತ್ಪಾದಕರ ಸಂಘ’ ಸ್ಥಾಪನೆಗೆ ಯೋಜನೆಯಾಗಿದ್ದು, ಈ ಯೋಜನೆ ಬಾಗಲಕೋಟೆ ತೋಟಗಾರಿಕೆ ವಿ.ವಿ. ನಿರ್ದೇಶಕ ಡಾ.ಅಶೋಕ್ ಆಲೂರು ಮತ್ತು ತಂಡದ ಮಾರ್ಗದರ್ಶನದಲ್ಲಿ ಅನುಷ್ಠಾನಕ್ಕೆ ಸಿದ್ಧಗೊಂಡಿದೆ’ ಎಂದು ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ಬಿ.ಪ್ರಭು ಹೇಳಿದರು.

‘ಸಮಗ್ರ ಗುಂಪು ಬೇಸಾಯ ಪದ್ಧತಿಗೆ ಒತ್ತು ನೀಡಿ ಎಲ್ಲವೂ ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡುವ ತರಬೇತಿ ನೀಡಲಿದ್ದಾರೆ. ಗಿರಿಜನ ಕಲ್ಯಾಣ ಸಚಿವಾಲಯ ಹಸಿರು ನಿಶಾನೆ ನೀಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT