ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‘ಬಸ್ಸಿಗೆ ದುಪ್ಪಟ್ಟು ದರ, ರೈಲಿಗೂ ಟಿಕೆಟ್, ಇನ್ನೆಲ್ಲಿ ಉಳಿಗಾಲ?’

ಶ್ರಮಿಕ್ ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದವರ ಪ್ರಶ್ನೆ
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ಮೈಸೂರು: ‘ಒಂದೆಡೆ ಬಸ್‌ ಪ್ರಯಾಣಕ್ಕೆ ಎರಡು ಪಟ್ಟು ದರ, ಮತ್ತೊಂದೆಡೆ ರೈಲಿಗೆ ₹ 895 ಟಿಕೆಟ್‌ ದರ. ಹೀಗಾದರೆ, ನಮ್ಮಂತಹವರು ಉಳಿಯುವುದು ಹೇಗೆ’ ಎಂದು ನೂರಾರು ವಲಸೆ ಕಾರ್ಮಿಕರು ಪ್ರಶ್ನಿಸಿದರು.

ಇಲ್ಲಿನ ಅಶೋಕಪುರಂ ರೈಲು ನಿಲ್ದಾಣದಿಂದ ಭಾನುವಾರ ಹೊರಟ ‘ಶ್ರಮಿಕ್ ವಿಶೇಷ ಎಕ್ಸ್‌ಪ್ರೆಸ್‌’ ರೈಲಿನಲ್ಲಿ ಪ್ರಯಾಣಿಸಿದ್ದವರ ಪೈಕಿ 800ಕ್ಕೂ ಅಧಿಕ ಮಂದಿ ಹೊರ ಜಿಲ್ಲೆಯವರು. ಇವರನ್ನು ಇಲ್ಲಿಗೆ ಕರೆತರಲು ಕೆಎಸ್‌ಆರ್‌ಟಿಸಿ ದುಪ್ಪಟ್ಟು ದರ (ಹೋಗುವ ಮತ್ತು ಬರುವ ಎರಡೂ ಕಡೆಯ ದರ) ವಸೂಲು ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು.

ಉತ್ತರಪ್ರದೇಶದ ಮಥುರಾದಿಂದ ಬಂದಿದ್ದ ಬ್ರಹ್ಮದೇವ, ‘ಎರಡು ತಿಂಗಳುಗಳಿಂದ ಕೆಲಸ ಇಲ್ಲದೇ ಸುಮ್ಮನೆ ಕುಳಿತಿದ್ದ ನಮ್ಮಿಂದ ಬಸ್ಸಿಗೆ ಎರಡುಪಟ್ಟು ಟಿಕೆಟ್‌ ದರ, ಮತ್ತೊಂದು ಕಡೆ ರೈಲಿಗೂ ದರ ವಸೂಲು ಮಾಡುತ್ತಿದ್ದಾರೆ. ಕೈಯಲ್ಲಿರುವ ಹಣ ಸಾಕಾಗದೆ ಸಾಲ ಮಾಡಿ ಹೋಗುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.‌

ರೈಲು ಹತ್ತಿದವರಲ್ಲಿ ಬಹುತೇಕ ಮಂದಿ ಪೇಂಟಿಂಗ್ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ರಸ್ತೆಬದಿ ಬಾಂಬೆ ಮಿಠಾಯಿ, ಪಾನಿಪೂರಿ, ಮೊಬೈಲ್‌ ಪರಿಕರಗಳ ಮಾರಾಟ ಮಾಡುವವರೇ ಇದ್ದರು.

ಗೋರಖ್‌ಪುರದ ಶಾಂತಿಲಾಲ್‌ ಪ್ರತಿಕ್ರಿಯಿಸಿ, ‘ನಾವು ಸಾಮಾನ್ಯದರ್ಜೆಯಲ್ಲಿ ₹ 300ರಿಂದ 400 ದರ ಪಾವತಿಸಿ ರೈಲಿನಲ್ಲಿ ಪ್ರಯಾಣಿಸುವವರು. ಇವರು ₹ 895 ದರ ವಿಧಿಸಿ, ಸ್ಲೀಪರ್‌ ಕ್ಲಾಸ್ ನೀಡಿದ್ದಾರೆ. ಸಾಮಾನ್ಯ ದರ್ಜೆಯೇ ಸಾಕಿತ್ತು. ದರ ಕಡಿಮೆ ಮಾಡಬೇಕಿತ್ತು’ ಎಂದು ತಿಳಿಸಿದರು.

18 ಬೋಗಿಗಳು ಸ್ಲೀಪರ್‌ ದರ್ಜೆ, 2 ಸಾಮಾನ್ಯ ದರ್ಜೆ, 2 ಸರಕು ಸಾಗಣೆ ಬೋಗಿಗಳನ್ನೊಳಗೊಂಡ ರೈಲಿನಲ್ಲಿ 1,391 ಮಂದಿ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ತೆರಳಿದರು.

ಬಾಳೆಹಣ್ಣು, ನೀರು ವಿತರಣೆ:ರೋಟರಿ ಹೆರಿಟೇಜ್ ಕ್ಲಬ್‌ ವತಿಯಿಂದ ಭಾನುವಾರ ಪ್ರಯಾಣಿಕರಿಗೆ ಬಾಳೆಹಣ್ಣು, ಬಿಸ್ಕತ್ತು ಹಾಗೂ 2 ಲೀಟರ್‌ ನೀರನ್ನು ಉಚಿತವಾಗಿ ವಿತರಿಸಲಾಯಿತು. ರೈಲನ್ನೇರಿದ ಎಲ್ಲರಿಗೂ ಇವರು ವಿತರಣೆ ಮಾಡಿ ಶುಭ ಕೋರಿದರು.

ಕ್ಲಬ್‌ನ ಅಧ್ಯಕ್ಷ ತಲಕಾಡು ಮಂಜುನಾಥ್, ಚಾರ್ಟರ್ ಅಧ್ಯಕ್ಷ ಕೆ.ಮಂಜುನಾಥ್, ಕಾರ್ಯದರ್ಶಿ ಸುರೇಶ್, ನಿಯೋಜಿತ ಅಧ್ಯಕ್ಷ ಸುರೇಂದ್ರ, ನಿಯೋಜಿತ ಉಪಾಧ್ಯಕ್ಷ ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT