ಬುಧವಾರ, ಜೂನ್ 23, 2021
30 °C
ಪಾಲಿಕೆಯ 22ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ನಮ್ರತಾ ರಮೇಶ್ ಜನ್ಮದಿನದ ಉಡುಗೊರೆ

ಮೈಸೂರು | ಪೌರ ಕಾರ್ಮಿಕರಿಗೆ ‘ಬೆಳ್ಳಿ ಗಣೇಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಂಕ್ರಾಂತಿ, ಯುಗಾದಿ, ಗೌರಿ, ದೀಪಾವಳಿ ಹಬ್ಬಕ್ಕೆ ನಮ್ಮ ಕಾರ್ಪೊರೇಟರ್‌ ತಪ್ಪದೇ ಉಡುಗೊರೆ ಕೊಡ್ತ್ವಾರೆ. ಆದರೆ ಗುರುವಾರ ಅವರ ಹುಟ್ಟಿದ ಹಬ್ಬಕ್ಕೆ ನಮ್ಮೆಲ್ಲರಿಗೂ ಬೆಳ್ಳಿ ಗಣೇಶ ಕೊಟ್ಟಿದ್ದಾರೆ. ಇದರಿಂದ ನಾವೆಲ್ಲರೂ ಖುಷಿಯಾಗಿದ್ದೇವೆ...’

ಮೈಸೂರು ಮಹಾನಗರ ಪಾಲಿಕೆಯ 22ನೇ ವಾರ್ಡ್‌ನ ಜೆಡಿಎಸ್‌ ಸದಸ್ಯೆ ನಮ್ರತಾ ರಮೇಶ್‌ ತಮ್ಮ 43ನೇ ಜನ್ಮ ದಿನ ಆಚರಿಸಿಕೊಂಡಾಗ, ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು, ತೋಟಗಾರಿಕೆ ಹಾಗೂ ಒಳಚರಂಡಿ ಸಿಬ್ಬಂದಿ, ಸಿವಿಲ್ ಕೆಲಸಗಾರರು ಸೇರಿದಂತೆ ನೀರಗಂಟಿಗಳಿಗೆ ತಲಾ ₹ 2 ಸಾವಿರ ಮೌಲ್ಯದ ಬೆಳ್ಳಿಯ ಗಣಪತಿಯ ಚಿಕ್ಕ ಮೂರ್ತಿಯನ್ನು ಉಡುಗೊರೆಯಾಗಿ ಕೊಟ್ಟಾಗ, ಪೌರ ಕಾರ್ಮಿಕರ ಮೇಸ್ತ್ರಿ ರಘು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಪಾಲಿಕೆಯ ಸದಸ್ಯೆಯಾಗಿ ಆಯ್ಕೆಯಾದಾಗಿನಿಂದಲೂ ವಾರ್ಡ್‌ನಲ್ಲಿರುವ ಸಿಬ್ಬಂದಿ ಜೊತೆ ಆತ್ಮೀಯವಾಗಿರುವೆ. ಪ್ರತಿ ಹಬ್ಬಕ್ಕೂ ಉಡುಗೊರೆ ಕೊಡುತ್ತಿದ್ದೆ. ವಾರ ಕಳೆದರೆ ಗಣೇಶ ಚತುರ್ಥಿ. ನಮ್ಮ ಎಲ್ಲ ಕೆಲಸಗಾರರು ಗಣಪನ ಹಬ್ಬದಂದು ಬೆಳ್ಳಿಯ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಲಿ ಎಂದು ಹಾಗೂ ನನ್ನ ಜನ್ಮ ದಿನದ ಸವಿ ನೆನಪಿಗಾಗಿ 50 ಜನರಿಗೆ ಕೊಡುಗೆ ಕೊಟ್ಟೆ‘ ಎಂದು ಸದಸ್ಯೆ ನಮ್ರತಾ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಸದಸ್ಯೆಯಾಗಿ 2018ರ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದೆ. ಪ್ರತಿ ತಿಂಗಳ ಗೌರವಧನ ₹ 6 ಸಾವಿರವನ್ನು ಬಳಸಿರಲಿಲ್ಲ. ಈ ಹಣದಿಂದಲೇ ಬೆಳ್ಳಿಯ ಗಣಪನ ಮೂರ್ತಿಯನ್ನು ಖರೀದಿಸಿ ಕೊಟ್ಟೆ’ ಎಂದು ಅವರು ಹೇಳಿದರು.

‘ಬೆಳ್ಳಿ ಗಣಪನ ಜೊತೆ ಸಿಹಿ ತಿನಿಸು, ಅರ್ಧ ಕೆ.ಜಿ. ಒಣಹಣ್ಣು, 10 ಕೆ.ಜಿ. ವಿವಿಧ ಹಣ್ಣುಗಳು, ಮೂರ್ನಾಲ್ಕು ತರಹದ ಕಾಳುಗಳು, ಅಕ್ಕಿ, ಗೋಧಿ, ರಾಗಿ ಹಿಟ್ಟು, ಎಣ್ಣೆ, ಸಕ್ಕರೆ, ಉಪ್ಪು, ಟೀ ಸೊಪ್ಪಿನ ಕಿಟ್‌ ಸಹ ವಿತರಿಸಿದೆವು. ಖುಷಿಯಿಂದ ಪೌರ ಕಾರ್ಮಿಕರು ನನಗೆ ಹಾರೈಸಿದರು. ಕೇಕ್‌ ತಿನ್ನಿಸಿ ಸಂಭ್ರಮಿಸಿದರು’ ಎಂದರು.

‘ವಾರ್ಡ್‌ ವ್ಯಾಪ್ತಿಯಲ್ಲಿನ 600 ಬಡವರಿಗೂ ಸಹ ಇದೇ ಸಂದರ್ಭ ಆಹಾರ ಸಾಮಗ್ರಿಯ ಕಿಟ್‌ ವಿತರಿಸಿದೆವು. ಗೌರವಧನ ಬೆಳ್ಳಿಯ ಗಣಪನಿಗೆ ಸರಿಯಾಯ್ತು. ಉಳಿದ ಮೊತ್ತವನ್ನು ವೈಯಕ್ತಿಕವಾಗಿ ಭರಿಸಿದೆ’ ಎಂದು ನಮ್ರತಾ ಪತಿ ರಮೇಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು