ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಮಾನತು ಖಂಡಿಸಿ ಸಾಮೂಹಿಕ ರಾಜೀನಾಮೆಗೆ ನಿರ್ಧಾರ

Last Updated 19 ಮಾರ್ಚ್ 2021, 20:06 IST
ಅಕ್ಷರ ಗಾತ್ರ

ಮೈಸೂರು: ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪದಲ್ಲಿ, ಕಾಂಗ್ರೆಸ್‌ನ ಮೂವರು ಸ್ಥಳೀಯ ನಾಯ
ಕರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಜೀಜ್‌ ಸೇಠ್‌ ಬ್ಲಾಕ್‌ನ ಎಲ್ಲ 9 ವಾರ್ಡ್ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

‘ನಿಜವಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಬಿಟ್ಟು, ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಿದವರನ್ನು ಅಮಾನತು ಮಾಡಿದ್ದು ಸರಿಯಲ್ಲ. ಇವರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿಲ್ಲ. ಅಮಾನತು ಆದೇಶವನ್ನು ವಾಪಸ್ ಪಡೆಯದೇ ಹೋದರೆ ಸಾಮೂಹಿಕ ರಾಜೀನಾಮೆ ನೀಡಲಾಗುವುದು’ಎಂದು ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್‌ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಿಸಾರ್ ಅಹಮದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಅಮಾನತುಗೊಂಡಿರುವ ಕೆಪಿಸಿಸಿ ಸದಸ್ಯ ಪಿ.ರಾಜು ಮಾತನಾಡಿ, ‘ಗೆದ್ದಲು ಹುಳಗಳಂತೆ ಕಾಂಗ್ರೆಸ್‌ ಕಟ್ಟಿದ್ದೇವೆ. ಇದರಲ್ಲಿ ವಿಷಸರ್ಪವೊಂದು ಸೇರಿಕೊಂಡು ದಲಿತರು ಮತ್ತು ಅಲ್ಪಸಂಖ್ಯಾತರನ್ನು ತುಳಿದಿದೆ. ಅಹಿಂದ ಎಂದು ಹೇಳಿಕೊಂಡು ಬಂದ ಈ ಸರ್ಪವು ‘ಅ’ (ಅಲ್ಪಸಂಖ್ಯಾತರು), ‘ದ’ (ದಲಿತರು) ವನ್ನು ತ್ಯಜಿಸಿದೆ’ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ತಾವು ಯಾವುದೇ ಪಕ್ಷ ವಿರೋಧಿ ಕೃತ್ಯ ನಡೆಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಅವರ ತಂದೆ ಜೆಡಿಎಸ್‌ನಲ್ಲಿದ್ದರೆ, ಸೋದರ ಬಿಜೆಪಿಯಲ್ಲಿದ್ದಾರೆ. ನಮ್ಮ ಅಮಾನತಿಗೆ ಶಿಫಾರಸು ಮಾಡುವ ನೈತಿಕತೆ ಇವರಿಗಿಲ್ಲ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ರೆಹಮಾನ್‌ಖಾನ್ ಮಾತನಾಡಿ, ‘ಶಾಸಕ ತನ್ವೀರ್‌ ಸೇಠ್‌ ವಿರುದ್ಧ ಅಯೂಬ್‌ ಖಾನ್‌ ಮತ್ತು ಆರಿಫ್‌ಹುಸೇನ್ ಮಾತನಾಡಿದ್ದಾರೆ. ಇವರ ವಿರುದ್ಧ ಕ್ರಮ ಏಕಿಲ್ಲ’ ಎಂದು ಪ್ರಶ್ನಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆ ಸಂದರ್ಭದಲ್ಲಿ ಮಾಡಿಕೊಂಡ ಮೈತ್ರಿಯ ನಂತರ ಬೆಳವಣಿಗೆಯಲ್ಲಿ, ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಅಜೀಜ್‌ ಸೇಠ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಖಾದರ್‌ ಶಾಹಿದ್‌, ಮೈಸೂರು ನಗರ ಕಾಂಗ್ರೆಸ್‌ ಉಪಾಧ್ಯಕ್ಷ ಅನ್ವರ್‌ ಪಾಷಾ, ಕೆಪಿಸಿಸಿ ಸದಸ್ಯ ಪಿ.ರಾಜು ಅವರು ಗುರುವಾರಷ್ಟೇ ಅಮಾನತುಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT