ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಶಾಲೆಗಳಿಗೆ ಶಿಕ್ಷಕರು ಇಂದಿನಿಂದ

ಶಾಲೆಯ ಬಾಗಿಲು ತೆರೆಯುವಿಕೆ: ಶಾಲಾ ಹಂತದ ಚಟುವಟಿಕೆಗೆ ಚಾಲನೆ
Last Updated 2 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳು ಸೋಮವಾರದಿಂದ (ಆ.3) ಶುರುವಾಗಲಿವೆ. ಜಿಲ್ಲೆಯಲ್ಲಿರುವ 3400ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢಶಾಲೆಗಳು ಬಾಗಿಲು ತೆರೆಯಲಿವೆ.

ಕೋವಿಡ್‌–19ನಿಂದಾಗಿ ಶೈಕ್ಷಣಿಕ ವರ್ಷ ಇದೂವರೆಗೂ ಆರಂಭವಾಗಿರಲಿಲ್ಲ. ಇದೀಗ ಶಿಕ್ಷಕರಷ್ಟೇ ಶಾಲೆಗೆ ಬರಲಿದ್ದು, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘2019–20ನೇ ಸಾಲಿನ ಪರೀಕ್ಷಾ ಫಲಿತಾಂಶ ಘೋಷಣೆಗೂ ಮುನ್ನವೇ, ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲಿಕ್ಕಾಗಿ ಶಾಲೆಗಳಿಗೆ ಮಾರ್ಚ್‌ ಕೊನೆ ವಾರದಿಂದಲೇ ರಜೆ ಘೋಷಿಸಲಾಗಿತ್ತು. ವಿದ್ಯಾರ್ಥಿಗಳ ಹಿಂದಿನ ಸಾಧನೆ ಆಧರಿಸಿ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು. ಇದೀಗ ಅಧಿಕೃತವಾಗಿ ಬಡ್ತಿ ನೀಡುವ ಕೆಲಸ ನಡೆಯಲಿದೆ’ ಎಂದು ಮೈಸೂರು ಉತ್ತರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಡಿ.ಉದಯ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ತರಗತಿಗೆ ಬಡ್ತಿ ನೀಡುವ ಪ್ರಕ್ರಿಯೆ ಮುಗಿದ ಬೆನ್ನಿಗೆ, 1ನೇ ತರಗತಿಗೆ ಹೊಸ ಪ್ರವೇಶ ದಾಖಲಾತಿ ಆರಂಭಿಸಲಾಗುವುದು. ಇದರ ಜೊತೆಗೆ ಈಗಾಗಲೇ ಶಾಲೆಗಳಿಗೆ ಎಲ್ಲ ಪಠ್ಯ ಪುಸ್ತಕ ತಲುಪಿದ್ದು, ಇವುಗಳನ್ನು ಪೋಷಕರ ಮೂಲಕ ಮಕ್ಕಳಿಗೆ ತಲುಪಿಸುವ ಕೆಲಸಕ್ಕೂ ಚಾಲನೆ ನೀಡುವಂತೆ ಪ್ರತಿ ಶಾಲೆಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಆರ್‌ಟಿಇನಡಿ ಸೀಟು ಪ್ರಕಟಗೊಂಡಿವೆ. ಆಯ್ಕೆಯಾದ ಮಕ್ಕಳ ಪೋಷಕರ ಮೊಬೈಲ್‌ ನಂಬರ್‌ಗೆ ಸಂದೇಶ ಕಳುಹಿಸಲಾಗಿದೆ. ಆ.10ರೊಳಗೆ ಪ್ರಥಮ ಸುತ್ತಿನ ಪ್ರವೇಶಾತಿ ನಡೆಯಲಿದೆ. ಇದರ ಜೊತೆಗೆ ಈಗಾಗಲೇ ಶಾಲೆಗೆ ದಾಖಲಾಗಿರುವ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ಪಡಿತರ ನೀಡಲಾಗುವುದು’ ಎಂದು ಉದಯ್‌ಕುಮಾರ್ ಮಾಹಿತಿ ನೀಡಿದರು.

‘ಜೂನ್, ಜುಲೈ ತಿಂಗಳಲ್ಲಿ 37 ದಿನ ಪರಿಗಣಿಸಲಾಗಿದೆ. 1ರಿಂದ 5ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗೆ ದಿನವೊಂದಕ್ಕೆ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ ನೀಡಿದರೆ, 6ರಿಂದ ಎಸ್ಸೆಸ್ಸೆಲ್ಸಿಯವರೆಗಿನ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ, 75 ಗ್ರಾಂ ಬೇಳೆ ಕೊಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT