ಮಂಗಳವಾರ, ಅಕ್ಟೋಬರ್ 26, 2021
21 °C
ನಾಲ್ಕು ಕೃತಿಗಳ ಲೋಕಾರ್ಪಣೆ

ಕಲೆ, ವಿಜ್ಞಾನದ ಸಮನ್ವಯದಿಂದ ಜೀವನ ಸಾರ್ಥಕ: ಕಬ್ಬಿನಾಲೆ ವಸಂತ ಭಾರದ್ವಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕಲೆ ಮತ್ತು ವಿಜ್ಞಾನದ ಸಮನ್ವಯದಲ್ಲೇ ಜೀವನದ ಸಾರ್ಥಕತೆ ಅಡಗಿದೆ’ ಎಂದು ಚಿಂತಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌ ಹೇಳಿದರು.

ಕನ್ನಡ ಸಾಹಿತ್ಯ ಕಲಾಕೂಟ ಮೈಸೂರು, ಇನೋವೇಟಿವ್‌, ಮಹಿಮಾ ಪ್ರಕಾಶನದಿಂದ ನಗರದ ವಿದ್ಯಾರಣ್ಯಪುರಂನ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿ.ಎಸ್‌.ಭಟ್ಟ ಅವರ ‘ಕನ್ನಡ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ’, ‘ಹಸಲರು ಸಾಂಸ್ಕೃತಿಕ ಅಧ್ಯಯನ’ ಹಾಗೂ ಡಾ.ಎಸ್‌.ಎನ್‌.ಹೆಗಡೆ ಅವರ ‘ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪುರಸ್ಕೃತರು’, ‘ಭಾರತೀಯ ಸರ್ಪ ಸಂದೀಪ್ತಿ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಗಳ ಕುರಿತು ಮಾತನಾಡಿದರು.

‘ಜಿ.ಎಸ್‌.ಭಟ್ಟರು ಯಕ್ಷಗಾನ ಕುರಿತು ಪರಿಚಯಾತ್ಮಕ ಮಾಹಿತಿಯನ್ನು ತಮ್ಮ ಕೃತಿಯಲ್ಲಿ ನೀಡಿದ್ದಾರೆ. ಉತ್ತರ ಕರ್ನಾಟಕದ ಬುಡಕಟ್ಟು ಸಮುದಾಯವಾದ ಹಸಲರ ಜೀವನ ವಿಧಾನ, ಸಂಸ್ಕೃತಿ, ಆಹಾರ ಪದ್ಧತಿ, ಹಬ್ಬ– ಆಚರಣೆಗಳ ಬಗ್ಗೆ ‘ಹಸಲರು ಸಾಂಸ್ಕೃತಿಕ ಅಧ್ಯಯನ’ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ’ ಎಂದರು.

‘ಎಸ್‌.ಎನ್‌. ಹೆಗಡೆ ಅವರು ದೇಶದಲ್ಲಿರುವ ಹಾವುಗಳ ಪ್ರಭೇದಗಳು, ಅವುಗಳ ಗಾತ್ರ, ಬಣ್ಣ, ಉದ್ದ, ಆಯಸ್ಸು, ಆಹಾರ ಕ್ರಮ ಸೇರಿದಂತೆ ಅನೇಕ ಅಂಶಗಳನ್ನು ‘ಭಾರತೀಯ ಸರ್ಪ ಸಂದೀಪ್ತಿ’ ಕೃತಿಯಲ್ಲಿ ವೈಜ್ಞಾನಿಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾವುಗಳಿಗೆ ಕಿವಿಯಿಲ್ಲದ ಕಾರಣ ಪುಂಗಿಯ ನಾದಕ್ಕೆ ಸ್ಪಂದಿಸುವುದಿಲ್ಲ. ಜನರು ನಾಗರಪಂಚಮಿ ದಿನ ಹಾವಿನ ಹುತ್ತಕ್ಕೆ ತನಿ ಎರೆಯುತ್ತಾರೆ. ಆದರೆ, ಹಾವುಗಳು ಹಾಲು ಕುಡಿಯುವುದಿಲ್ಲ. ಅವುಗಳ ಆಹಾರವೇ ಬೇರೆ. ಜನರ ಮೌಢ್ಯಾಚರಣೆಗಳ ಕುರಿತೂ ಈ ಕೃತಿ ಬೆಳಕು ಚೆಲ್ಲುತ್ತದೆ’ ಎಂದು ತಿಳಿಸಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ನೊಬೆಲ್‌ ಪ್ರಶಸ್ತಿ ಪಡೆದ ಪುರಸ್ಕೃತರ ವೈಯಕ್ತಿಕ ಜೀವನ, ಸಾಧನೆ, ಹವ್ಯಾಸ ಹಾಗೂ ಅವರ ಜೀವನದಲ್ಲಿ ಘಟಿಸಿದ ಆಸಕ್ತಿಕರ ಸಂಗತಿಗಳ ಬಗ್ಗೆ ಹೆಗಡೆಯವರು ಮನಮುಟ್ಟುವಂತೆ ಚಿತ್ರಿಸಿದ್ದಾರೆ’ ಎಂದರು.

ಕೃತಿಗಳನ್ನು ಬಿಡುಗಡೆಗೊಳಿಸಿದ ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ‘ಕೆ.ಆರ್‌. ಕ್ಷೇತ್ರದಲ್ಲಿ ಐದು ಗ್ರಂಥಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪುಸ್ತಕಗಳನ್ನು ಒದಗಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಜಿ.ಎಸ್‌.ಭಟ್ಟ, ಡಾ.ಎಸ್‌.ಎನ್‌. ಹೆಗಡೆ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್‌, ಇನೋವೇಟಿವ್‌ ಕಾರ್ಯದರ್ಶಿ ಹೇರಂಬ ಆರ್‌. ಭಟ್ಟ, ಶ್ರೀನಿವಾಸ್‌ ಇದ್ದರು.

ಕೆ.ಆರ್‌.ಕ್ಷೇತ್ರದ ಶಾಲಾ–ಕಾಲೇಜುಗಳಿಗೆ ಪುಸ್ತಕ
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್‌ ಹಂಚೆ ಮಾತನಾಡಿ, ‘ಕೆ.ಆರ್‌. ಕ್ಷೇತ್ರದ ಎಲ್ಲಾ ಶಾಲಾ–ಕಾಲೇಜುಗಳ ಗ್ರಂಥಾಲಯಗಳಿಗೆ ಪುಸ್ತಕ ನೀಡುವಂತೆ ಶಾಸಕರು ಮನವಿ ಮಾಡಿದ್ದರು. ಹೀಗಾಗಿ ಎಲ್ಲಾ ಶಾಲಾ–ಕಾಲೇಜುಗಳಿಗೆ ತಲಾ ₹25 ಸಾವಿರ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು