ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಊರ ಹೊರಗೆ ತೃತೀಯ ಲಿಂಗಿ ಜೀವನ

30 ವರ್ಷಗಳಿಂದ ಮುಂಬೈನಲ್ಲಿ ನೆಲೆ: ಕೋವಿಡ್‌ ಗೆದ್ದ ‘ಮಧುರಾ’
Last Updated 12 ಜುಲೈ 2020, 21:18 IST
ಅಕ್ಷರ ಗಾತ್ರ

ಮೈಸೂರು: ‘ತೃತೀಯ ಲಿಂಗಿಗೆ ಮಾತ್ರವೇ ಕೋವಿಡ್‌ ಬಂದಿದೆಯಾ? ಇರಲಿ, ನಮ್ಮ ಬಗ್ಗೆ ಕೆಲವರಿಗೆ ಅನುಮಾನ ಇರಬಹುದೇನೋ, ಯಾರಿಗೂ ತೊಂದರೆ ಕೊಡಲ್ಲ, ಯಾರನ್ನೂ ದೂರುವುದಿಲ್ಲ. ಮತ್ತೆ ಮುಂಬೈಗೆ ಹೊರಡುತ್ತೇನೆ. ಅಲ್ಲೇ ದುಡಿದು ಬದುಕುತ್ತೇನೆ’

–ಹೀಗೆಂದು ಗದ್ಗದಿತ ದನಿಯಲ್ಲಿ ನುಡಿದಿದ್ದು ಕೋವಿಡ್‌ನಿಂದ ಗುಣಮುಖರಾಗಿರುವ ತೃತೀಯ ಲಿಂಗಿ ಮಧುರಾ (ಹೆಸರು ಬದಲಾಯಿಸಲಾಗಿದೆ).

ಕಳೆದ ತಿಂಗಳು ಮುಂಬೈನಿಂದ ಬಂದಿದ್ದ ಇವರು ಎಚ್‌.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಬಳಿಯ ತಮ್ಮ ಗ್ರಾಮದ ಪರಿಚಯಸ್ಥರ ಹೊಲದ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಊರಿನೊಳಗೆ ಬಿಟ್ಟುಕೊಳ್ಳಲು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ಗ್ರಾಮದಲ್ಲಿ ಇವರ ತಾಯಿ ನೆಲೆಸಿದ್ದಾರೆ.

30 ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದ ಮಧುರಾ, ಅಲ್ಲಿ ಮದುವೆ, ಮಗು ಜನಿಸಿದಾಗ ಹಾಗೂ ಇತರ ಶುಭ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿದ್ದರಿಂದ ತಮ್ಮೂರಿಗೆ ವಾಪಸಾಗಿದ್ದಾರೆ.

‘ಆರು ಜನ ತೃತೀಯ ಲಿಂಗಿಗಳು ಮುಂಬೈನಿಂದ ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದೆವು. ಬೆಂಗಳೂರಿನಲ್ಲಿ ನಮ್ಮನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದರು. ನನಗೆ ಪಾಸಿಟಿವ್‌ ಇರುವುದು ಗೊತ್ತಾಯಿತು. ಮೈಸೂರಿಗೆ ಬಂದು ಕೋವಿಡ್‌ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆದೆ. ಆರಂಭದಲ್ಲಿ ತುಸು ಭಯವಿತ್ತು. ವೈದ್ಯರು ಧೈರ್ಯ ತುಂಬಿ ಚೆನ್ನಾಗಿ ನೋಡಿಕೊಂಡರು. ಆತ್ಮವಿಶ್ವಾಸವಿದ್ದರೆ ಈ ಕಾಯಿಲೆಯಿಂದ ಬೇಗನೇ ಚೇತರಿಸಿಕೊಳ್ಳಬಹುದು’ ಎಂದು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ನಮ್ಮನ್ನು ಕೆಲವರು ನೋಡುವುದೇ ಹೀಗೆ. ನಾವೇನು ತಪ್ಪು ಮಾಡಿದ್ದೇವೆ? ಗೊಣಗಿ ಪ್ರಯೋಜನವಿಲ್ಲ. ಇಷ್ಟು ದಿನ ಬದುಕಿದ್ದೇನೆ, ಹಾಗೆಯೇ ಬದುಕುತ್ತೇನೆ.
-ಮಧುರಾ, ತೃತೀಯ ಲಿಂಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT