ಮಂಗಳವಾರ, ಅಕ್ಟೋಬರ್ 27, 2020
22 °C
ಸರಳ ದಸರೆ ಎಂದು ಊರೆಲ್ಲ ದೀಪಾಲಂಕಾರ ಮಾಡಿದ್ದಾರೆ–ತನ್ವೀರ್‌ ಬೇಸರ

ದಸರೆಗೆ ಒಪ್ಪಿಗೆ ನೀಡಿದ್ದು ಯಾರು: ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಒಪ್ಪಿಗೆ ಪಡೆಯದೇ ದಸರಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇವರಿಗೆ ಅಧಿಕಾರ ನೀಡಿದ್ದು ಯಾರು? ಯಾರನ್ನು ಕೇಳಿ ಊರು ತುಂಬಾ ದೀಪಾಲಂಕಾರ ಮಾಡಿದ್ದಾರೆ? ಆರೋಗ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದಿದ್ದಾರೆಯೇ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಬುಧವಾರ ಇಲ್ಲಿ ಪ್ರಶ್ನಿಸಿದರು.

‘ಏನಾದರೂ ಅನಾಹುತವಾದರೆ ನಾಳೆ ಯಾರು ಜವಾಬ್ದಾರಿ? ದಸರೆ ಆಚರಣೆಗೆ ಏಕೆ ಇಷ್ಟೊಂದು ಹಟಕ್ಕೆ ಬಿದ್ದಿದ್ದಾರೆ ಎಂಬುದು ನನಗೆ ಗೊತ್ತಾ ಗುತ್ತಿಲ್ಲ. ದಸರೆ ಜೊತೆಗೆ ಮೈಸೂರಿಗೂ ಕಳಂಕ ಬರಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರಜಾಪ್ರಭುತ್ವದಲ್ಲಿ ಜನರ ದನಿಗೆ ಅವಕಾಶ ಕೊಡಬೇಕು. ಅವರ ಮಾತನ್ನು ಧಿಕ್ಕರಿಸಬಾರದು. ಅನಾಹುತ ಉಂಟಾದರೆ ಜನರೇ ಜಿಲ್ಲಾಡಳಿತರದ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ, ವಿಜಯದಶಮಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡಿದರೆ ಸಾಕು’ ಎಂದು ಸಲಹೆ ನೀಡಿದರು.

ಮೈಸೂರಿನವರೇ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ. ಸರಳವಾಗಿ ದಸರಾ ಆಚರಿಸುವಂತೆ ಹೇಳಿದ್ದಾರೆ. ಅವರ ಮಾತನ್ನೂ ಆಲಿಸಿ ಎಂದು ನುಡಿದರು.

ದೀಪಾಲಂಕಾರ ಏಕೆ: ‘ಸರಳ ದಸರೆ ಎಂದು ಹೇಳಿ ಊರೆಲ್ಲಾ ದೀಪ ಹಾಕಿಕೊಂಡಿದ್ದಾರೆ. ಅದರ ಅಗತ್ಯವಿತ್ತೇ? ದಸರಾ ವಿಚಾರದಲ್ಲಿ ಅಪಸ್ವರ ಎತ್ತಲ್ಲ. ಏಕೆಂದರೆ ಇದು ಚಾಮುಂಡೇಶ್ವರಿ ತಾಯಿಯ ಪೂಜಾ ಕಾರ್ಯಕ್ರಮ. ನಾಡಿನ ಸಮಸ್ತರಿಗೆ ಒಳ್ಳೆಯದಾಗಲಿ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.

ದಸರೆಯ ಉದ್ಘಾಟನೆಯನ್ನು ಚಾಮುಂಡಿಬೆಟ್ಟದಲ್ಲಿ ಮಾಡಿ, ಅರಮನೆಯಲ್ಲಿ ಮಾತ್ರ ಕೆಲ ಕಾರ್ಯಕ್ರಮ ಮಾಡೋಣವೆಂದು ನಾನು ನೀಡಿದ್ದ ಸಲಹೆಗೆ ಉನ್ನತಮಟ್ಟದ ಸಮಿತಿ ಒಪ್ಪಿತ್ತು. ಆದರೆ, ಈಗ ಎಲ್ಲಾ ಕಡೆ ದೀಪಾಲಂಕಾರ ಮಾಡಿದ್ದಾರೆ. ಇವೆಲ್ಲಾ ಬೇಕಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‌

ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾ ಸೋದ್ಯಮ ಸಚಿವರು ಮಾಡಬೇಕಾದ ಕೆಲಸಗಳನ್ನು ಈಗ ಆರೋಗ್ಯ ಸಚಿವರು ಮಾಡುತ್ತಿದ್ದಾರೆ ಎಂದರು.

ನನ್ನೊಬ್ಬನ ತೀರ್ಮಾನವಲ್ಲ: ಎಸ್‌ಟಿಎಸ್‌

‘ದಸರಾವನ್ನು ಹೇಗೆ ಆಚರಿಸಬೇಕು ಎಂಬುದು ನನ್ನೊಬ್ಬನ ನಿರ್ಧಾರವಲ್ಲ. ಇದಕ್ಕೆಂದು ಉನ್ನತಮಟ್ಟದ ಸಮಿತಿ ಇದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗುತ್ತದೆ. ಆ ಬಳಿಕ ನಿರ್ಧಾರವನ್ನು ಹೇಳಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

‘ಇಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗದು. 27ಕ್ಕೂ ಹೆಚ್ಚು ಮಂದಿ ಸಮಿತಿಯಲ್ಲಿರುತ್ತಾರೆ. ಇಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಅನುಷ್ಠಾನ ಮಾಡುವ ಹೊಣೆ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವನಾಗಿ ನನ್ನದಾಗಿರುತ್ತದೆ. ಇಲ್ಲಿ ಯಾವುದೇ ಗೊಂದಲವನ್ನು ಮಾಡಿಕೊಳ್ಳುವುದು ಬೇಡ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು