ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎರಡೇ ತಿಂಗಳಲ್ಲಿ 3.5 ಲಕ್ಷ ಸಸಿ ಮಾರಾಟ

ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಯೋಜನೆ
Last Updated 9 ಜುಲೈ 2020, 6:46 IST
ಅಕ್ಷರ ಗಾತ್ರ

ಮೈಸೂರು: ಅರಣ್ಯ ಇಲಾಖೆಯ ವತಿಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನಡೆಸುತ್ತಿರುವ ಸಸಿಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೇ ತಿಂಗಳಿನಲ್ಲಿ 3.5 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ಮಾರಾಟ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 8.36 ಲಕ್ಷ ಸಸಿಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಇಲ್ಲಿನ ನಾಗವಾಲ, ಕುಕ್ಕರಹಳ್ಳಿ ಕೆರೆ, ಕೆಎಸ್‌ಡಿಎಲ್‌, ತಿ.ನರಸೀಪುರದ ನೀಲಸೋಗೆ, ನಂಜನಗೂಡಿನ ಬಸವೇಶ್ವರ ಸಸ್ಯಕ್ಷೇತ್ರ, ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಸ್ಯಕ್ಷೇತ್ರಗಳಲ್ಲಿ ಸಸಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳು ಮಾರಾಟವಾಗುತ್ತಿವೆ.

ತೇಗ, ಸಿಲ್ವರ್, ಹೆಬ್ಬೇವು, ಶ್ರೀಗಂಧ, ರಾಮಪತ್ರೆ, ಮಹಾಗನಿ, ಬೀಟೆ, ಶಿವನಿ, ನಿಂಬೆ, ಹಲಸು, ಕರಿಬೇವು ,ಪಪ್ಪಾಯ ಮುಂತಾದ ಅರಣ್ಯ ಮತ್ತು ತೋಟಗಾರಿಕೆಯ ಸಸಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

ಬೇರೆ ನರ್ಸರಿಗಳಿಗೆ ಹೋಲಿಸಿದರೆ ಹೆಚ್ಚಿನ ದರ ಇಲ್ಲಿಲ್ಲ. ₹ 1ರಿಂದಲೇ ಸಸಿಗಳ ಮಾರಾಟ ಆರಂಭವಾಗುತ್ತದೆ. ಅವುಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿಗದಿಯಾಗಿದೆ. ಗರಿಷ್ಠ ದರ ₹ 3.

ಕಳೆದ ವರ್ಷ 9 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷ ಕೊರೊನಾ ಸಂಕಷ್ಟ ಹಾಗೂ ಲಾಕ್‌ಡೌನ್‌ ಮಧ್ಯೆಯೂ ಮೂರು ಲಕ್ಷಕ್ಕೂ ಅಧಿಕ ಸಸಿಗಳು ಮಾರಾಟವಾಗಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಪಹಣಿ ಕೊಟ್ಟರೆ ಮುಂದಿನ 3 ವರ್ಷಗಳವರೆಗೆ ಈ ಸಸಿಗಳು ಬದುಕು ಉಳಿದಿದ್ದರೆ ಕನಿಷ್ಠ ₹ 100 ಪ್ರೋತ್ಸಾಹಧನವನ್ನು ಇಲಾಖೆ ನೀಡುತ್ತದೆ. ಪಹಣಿ ಇಲ್ಲದೆಯೂ ಖರೀದಿಸಬಹುದು. ಆದರೆ, ಪ್ರೋತ್ಸಾಹ ಧನ ಸಿಗುವುದಿಲ್ಲ.

‘ಇಂತಹ ಸಸಿಗಳನ್ನು ನೆಡುವುದಕ್ಕೆ ಮುಂಗಾರು ಸೂಕ್ತ ಸಮುಯ. ದಿನ ಬಿಟ್ಟು ದಿನ, ಆಗಿಂದಾಗ್ಗೆ ಸುರಿಯುವ ಮಳೆಯಿಂದ ಗಿಡಗಳು ಬದುಕುಳಿಯುತ್ತವೆ. ನಿರ್ವಹಣೆಯ ವೆಚ್ಚವೂ ಇರುವುದಿಲ್ಲ. ಬೇಸಿಗೆಯಲ್ಲಿ ಒಂದಿಷ್ಟು ನೀರು ಹಾಕಿ ಸಲಹಿದರೆ ಮರವಾಗಿ ಮುಂದೆ ದೊಡ್ಡ ಆಸ್ತಿಯಾಗುವುದು ಖಚಿತ’ ಎಂದು ಡಿಸಿಎಫ್ ಪ್ರಶಾಂತಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT