ಗುರುವಾರ , ಆಗಸ್ಟ್ 11, 2022
24 °C
2ನೇ ಪತಿ, ತಾಯಿಯೊಂದಿಗೆ ಸೇರಿದ ಕುಕೃತ್ಯ

ಹೆತ್ತ ಮಗುವನ್ನೇ ಕೊಂದ ಮಹಿಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತನ್ನ 6 ವರ್ಷದ ಹೆಣ್ಣು ಮಗುವನ್ನೇ ತಾಯಿಯೊಬ್ಬಳು ಕೊಂದು ಹಾಕಿದ್ದು, ಆಕೆಯೂ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಶ್ಯಾದನಹಳ್ಳಿ ಗ್ರಾಮದ ಪವಿತ್ರಾ (23), ಈಕೆಯ 2ನೇ ಗಂಡ ಎಸ್.ಆರ್.ಸೂರ್ಯ (23) ಹಾಗೂ ಪವಿತ್ರಾಳ ತಾಯಿ ಗೌರಮ್ಮ (55) ಬಂಧಿತರು. ಜಯಲಕ್ಷ್ಮೀ ಕೊಲೆಯಾದ ಬಾಲಕಿ. ಹೂತಿದ್ದ ಈಕೆಯ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಘಟನೆ ವಿವರ: ನಂಜನಗೂಡಿನ ಸಿಂಗಾರಿಪುರದ ಪವಿತ್ರಾ ತನ್ನ ಮೊದಲ ಪತಿ ಮಂಡ್ಯದ ಅರಕೆರೆಯ ಸಿದ್ದೇಶ್ (35)ನನ್ನು ತ್ಯಜಿಸಿ ತನ್ನೊಂದಿಗೆ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೂರ್ಯ ಎಂಬಾತನನ್ನು ಒಂದೂವರೆ ವರ್ಷದ ಹಿಂದೆ 2ನೇ ಮದುವೆಯಾಗುತ್ತಾಳೆ. ಮೊದಲ ಪತಿಗೆ ಜನಿಸಿದ ಜಯಲಕ್ಷ್ಮೀಯನ್ನು ಇಲ್ಲಿನ ಶ್ಯಾದನಹಳ್ಳಿಯಲ್ಲಿ ವಾಸವಿದ್ದ ತನ್ನ ತಾಯಿ ಗೌರಮ್ಮ ಬಳಿ ಬಿಟ್ಟು, 2ನೇ ಪತಿಯ ಮನೆಯವರಿಗೆ ತನಗೆ ಮೊದಲೇ ವಿವಾಹವಾಗಿತ್ತು ಎಂಬ ಅಂಶವನ್ನು ಮುಚ್ಚಿಡುತ್ತಾಳೆ. ನಂತರ, 2ನೇ ಮಗುವಿಗೆ ತಾಯಿಯಾದ ಈಕೆ ಬಾಣಂತನಕ್ಕೆಂದು ತವರಿಗೆ ಬರುತ್ತಾಳೆ.

ಮೊದಲಿನಿಂದಲೂ ಮಲಮಗಳ ಬಗ್ಗೆ ವಿಪರೀತ ದ್ವೇಷ ಹೊಂದಿದ್ದ ಸೂರ್ಯ ಜಯಲಕ್ಷ್ಮೀಯನ್ನು ವಿಪರೀತ ಹೊಡೆಯುತ್ತಿದ್ದ. ಮಲತಂದೆ ಬಂದಾಗ ಆತ ಇರುವಷ್ಟು ದಿನ ಜಯಲಕ್ಷ್ಮೀ ಪಕ್ಕದ ಮನೆಯಲ್ಲೇ ಇರುತ್ತಿದ್ದಳು.

‌ಮೊದಲ ಪತಿಗೆ ಜನಿಸಿದ ಜಯಲಕ್ಷ್ಮೀ ತಮಗೆ ಹೊರೆ ಎಂದು ಭಾವಿಸಿದ ಪವಿತ್ರಾ, ಸೂರ್ಯ ಹಾಗೂ ಗೌರಮ್ಮ ಜತೆ ಸೇರಿ ಕೊಲೆ ಮಾಡಲು ನಿರ್ಧರಿಸುತ್ತಾಳೆ. ಆಗಸ್ಟ್ 25ರಂದು ಬೆಳಿಗ್ಗೆ 5.30ರ ಸಮಯದಲ್ಲಿ ಮಲಗಿದ್ದ ಮಗಳ ಕೈಗಳನ್ನು ತಾಯಿ ಪವಿತ್ರಾ ಕಾಲುಗಳನ್ನು ಅಜ್ಜಿ ಗೌರಮ್ಮ ಹಿಡಿದುಕೊಳ್ಳುತ್ತಾರೆ. ದಿಂಬನ್ನು ಮೂಗು ಮತ್ತು ಬಾಯಿಗೆ ಹಿಡಿದು ಉಸಿರುಗಟ್ಟಿಸಿ, ಕುತ್ತಿಗೆ ಹಿಸುಕಿ ಮಲತಂದೆ ಸೂರ್ಯ ಕೊಲೆ ಮಾಡುತ್ತಾನೆ. ನಂತರ, ಅನಾರೋಗ್ಯದಿಂದ ಮೃತಪಟ್ಟಳು ಎಂದು ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.

ಇದನ್ನು ತಿಳಿದು ಅನುಮಾನಗೊಂಡ ಪವಿತ್ರಾಳ ಮೊದಲ ಪತಿ ಸಿದ್ದೇಶ್, ಪೊಲೀಸರಿಗೆ ದೂರು ನೀಡುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಮೇಟಗಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು