ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day: ಆಮ್ಲಜನಕ ಮರುಪೂರಣದ ಕಣಜ ಜ್ಞಾನಭಾರತಿ

ವರ್ಷದಲ್ಲಿ ಈ ಬಯೋಪಾರ್ಕ್‌ ಉತ್ಪಾದಿಸುವ ಆಮ್ಲಜನಕದ ಮೌಲ್ಯ ₹ 16,725 ಕೋಟಿ * ಕಿರುಕಾನನ ಸಂರಕ್ಷಣೆಗೆ ಜೀವವೈವಿಧ್ಯ ಸಮಿತಿ ಶಿಫಾರಸು
Last Updated 5 ಜೂನ್ 2021, 0:24 IST
ಅಕ್ಷರ ಗಾತ್ರ

ಬೆಂಗಳೂರು: ಪರಾಕಾಷ್ಠೆ ತಲುಪಿರುವ ಪರಿಸರ ಮಾಲಿನ್ಯದಿಂದ ನಗರದ ಜನ ನಲುಗುತ್ತಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಪ್ರಾಂಗಣವು ವಾತಾವರಣದ ಆಮ್ಲಜನಕ ಮರು‍ಪೂರಣದ ಕಣಜವಾಗಿ ಅವರನ್ನು ಪೊರೆಯುತ್ತಿದೆ. ಈ ಜೈವಿಕ ಉದ್ಯಾನವು (ಬಯೋ ಪಾರ್ಕ್‌)ಪ್ರತಿ ಹೆಕ್ಟೇರ್‌ಗೆ 64 ಟನ್‌ ಇಂಗಾಲವನ್ನು ಸ್ಥಿರೀಕರಿಸಿ, ವರ್ಷದಲ್ಲಿ 7.07 ಕೋಟಿ ಲೀ. ಆಮ್ಲಜನಕವನ್ನು ಬಿಟ್ಟುಕೊಡುವ ಮೂಲಕ ಹಸಿರು ತಾಣ ಮಾತ್ರವಲ್ಲ ಜನರ ಪಾಲಿನ ‘ಉಸಿರು ತಾಣ’ವಾಗಿಯೂ ಗುರುತಿಸಿಕೊಂಡಿದೆ.

ಈ ಸಮೃದ್ಧ ಹಸಿರಿನ ಕಣಜವಾಗಿರುವ, ಅಸಂಖ್ಯಾತ ಜೀವವೈವಿಧ್ಯದ ನೆಲೆಯಾಗಿರುವ ಈ ಕಿರು ಕಾನನವನ್ನು ಸಂರಕ್ಷಿಸಬೇಕು. ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಒತ್ತುವರಿಗೆ ಅವಕಾಶ ಕಲ್ಪಿಸಬಾರದು ಎಂದು ಬಿಬಿಎಂಪಿ ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜೀವವೈವಿಧ್ಯ ನಿರ್ವಹಣೆ ಸಮಿತಿ ಸದಸ್ಯ ಎನ್‌.ರಂಗನಾಥ ಸ್ವಾಮಿ ಮೇ 28ರಂದು ಶಿಫಾರಸು ಮಾಡಿದ್ದಾರೆ.

ನಗರದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡಿ ಆಮ್ಲಜನಕ ಪೂರೈಕೆಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಇದು ಹಸಿರನ್ನು ಉಳಿಸುವ ಕಾಳಜಿಯನ್ನು ಹೆಚ್ಚಿಸುವುದಕ್ಕೂ ಕಾರಣವಾಗಿದೆ. ಜ್ಞಾನಭಾರತಿ ಪ್ರಾಂಗಣದ ಹಸಿರಿನ ಮಹತ್ವ ಎಷ್ಟು ಎಂಬುದನ್ನು ಮನವರಿಕೆ ಮಾಡುವ ಸಲುವಾಗಿ ಬಿಬಿಎಂಪಿಯ ಜೀವವೈವಿಧ್ಯ ನಿರ್ವಹಣೆ ಸಮಿತಿ (ಬಿಎಂಸಿ) ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕದ ಆರ್ಥಿಕ ಲೆಕ್ಕಾಚಾರವನ್ನು ವಿಶ್ಲೇಷಿಸಿದೆ. ವರ್ಷದಲ್ಲಿ ಉತ್ಪಾದನೆಯಾಗುವ ಆಮ್ಲಜನಕದ ಬೆಲೆ₹ 16,725 ಕೋಟಿಗಳಷ್ಟಾಗುತ್ತದೆ ಎನ್ನುತ್ತದೆ ಬಿಎಂಸಿ.

‘3 ಸಾವಿರಕ್ಕೂ ಅಧಿಕ ಪ್ರಭೇದಗಳ 6 ಲಕ್ಷಕ್ಕೂ ಅಧಿಕ ಮರಗಳನ್ನು ಒಳಗೊಂಡಿರುವಸಾಮರ್ಥ್ಯ ಈ ಕಿರು ಅರಣ್ಯವು ಹೊಂದಿದೆ. 2012ಕ್ಕೆ ಹೋಲಿಸಿದರೆ ಇಂಗಾಲದ ಸ್ಥಿರೀಕರಣ ಸಾಮರ್ಥ್ಯವು ಪ್ರತಿ ಹೆಕ್ಟೇರ್‌ಗೆ 6 ಟನ್‌ಗಳಷ್ಟು ಹೆಚ್ಚಳ ಕಂಡಿದೆ. ಇಲ್ಲಿನ ಪ್ರತಿ ಮರವು ವರ್ಷಕ್ಕೆ ಸರಾಸರಿ 117.934 ಲೀ ಆಮ್ಲಜನಕ ಉತ್ಪತ್ತಿ ಮಾಡುತ್ತದೆ. ಅದರ ಪ್ರಕಾರ ಇಲ್ಲಿ ವರ್ಷದಲ್ಲಿ ಉತ್ಪಾದಿಸುವ ಆಮ್ಲಜನಕದ ಪ್ರಮಾಣ 7.07 ಕೋಟಿ ಲೀಟರ್‌ಗಳಷ್ಟಾಗುತ್ತದೆ. 2.75 ಲೀ ಸಾಮರ್ಥ್ಯದ ಆಮ್ಲಜನಕ ಸಿಲಿಂಡರ್‌ಗೆ ತಲಾ ₹ 6,500 ದರ ಇದೆ. ಈ ಪ್ರಕಾರ ಲೆಕ್ಕಹಾಕಿದರೆ ಈ ಬಯೊ ಪಾರ್ಕ್‌ನಲ್ಲಿ ವರ್ಷದಲ್ಲಿ ಉತ್ಪಾದನೆಯಾಗುವ ಆಮ್ಲಜನಕದ ಮೌಲ್ಯ ₹ 16,725 ಕೋಟಿ’ ಎಂದು ವಿಶ್ಲೇಷಿಸುತ್ತಾರೆ ಬಿಎಂಸಿ ಸದಸ್ಯೆ ಪ್ರೊ.ಎನ್‌.ನಂದಿನಿ.

‘ಈ ಕಿರುಕಾನನವು ಸ್ಥಳೀಯ ಪರಿಸರದ ಮೇಲೆ, ಇಂಗಾಲದ ಚಕ್ರದ ಮೇಲೆ, ಇಂಧನ ಬಳಕೆ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಮಣ್ಣಿನ ಜೀವವೈವಿಧ್ಯವನ್ನು ಹಾಗೂ ಗುಣಮಟ್ಟವನ್ನು ಸಮೃದ್ಧಗೊಳಿಸುತ್ತಿದೆ. ಹವಾಮಾನ ವೈಪರೀತ್ಯವನ್ನು ತಿಳಿಗೊಳಿಸುತ್ತಿದೆ. ಇಲ್ಲಿನ ಮಣ್ಣು ಕೂಡಾ ಇಂಗಾಲವನ್ನು ಹೀರಿಕೊಳ್ಳಬಲ್ಲದು. ಇಲ್ಲಿ ಮರಗಳು ಬೆಳಕನ್ನು ಬಳಸಿ ಆಹಾರ ತಯಾರಿಸುವ ಕ್ರಿಯೆಯ (ದ್ಯುತಿಸಂಶ್ಲೇಷಣೆ) ವೇಳೆ ಇಂಗಾಲದ ಡಯಾಕ್ಸೈಡ್‌ ಅನ್ನು ಹೀರಿಕೊಳ್ಳುವ ಮೂಲಕ ಅದನ್ನು ಜೈವಿಕ ಸಾರವನ್ನಾಗಿ ಪರಿವರ್ತಿಸುತ್ತಾ ಬಂದಿವೆ. ತನ್ಮೂಲಕ ವಾತಾವರಣದಲ್ಲಿ ಇಂಗಾಲ ಸಮತೊಲನ ಕಾಯಲು ನೆರವಾಗುತ್ತಾ ಬಂದಿವೆ’ ಎಂದು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿಯೂ ಆಗಿರುವ ನಂದಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT