ಮೈಸೂರು: ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಯ 2ನೇ ಆನೆಗಳ ತಂಡಕ್ಕೆ ಬುಧವಾರ ಅರಮನೆಯಲ್ಲಿ ಸರಳ ಸ್ವಾಗತ ದೊರೆಯಿತು.
ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಕಾರಣ ಸ್ವಾಗತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ಹೀಗಾಗಿಐದೂ ಆನೆಗಳನ್ನು ಲಾರಿಗಳಲ್ಲಿ ನೇರವಾಗಿ ಅರಮನೆ ಆವರಣಕ್ಕೆ ಕರೆತರಲಾಯಿತು. ಕಬ್ಬು, ಬೆಲ್ಲ ತಿನ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗರು ಕೈಮುಗಿದರು.
ಬಂಡೀಪುರ ಅರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಿಂದ ಅತಿ ಕಿರಿಯ ಆನೆ ಪಾರ್ಥಸಾರಥಿ (18) ಮಧ್ಯಾಹ್ನ ಆಗಮಿಸಿದರೆ, ಕೊಡಗಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ದುಬಾರೆ ಆನೆ ಶಿಬಿರದಿಂದ ಗೋಪಿ (41), ಶ್ರೀರಾಮ (40), ಸುಗ್ರೀವ (40) ಹಾಗೂ ವಿಜಯಾ (63) ಗಜಪಡೆಯನ್ನು ಸೇರಿಕೊಂಡವು.
‘ಶೋಕಾಚರಣೆ ಹಿನ್ನೆಲೆಯಲ್ಲಿ ಆನೆಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಿಲ್ಲ.ತಿಂಗಳ ಹಿಂದೆ ಆ.7ರಂದು ಉಮೇಶ್ ಕತ್ತಿ ವೀರನ ಹೊಸಹಳ್ಳಿಯಲ್ಲಿ ಪೂಜೆ ಸಲ್ಲಿಸಿ ದಸರಾ ಪಯಣಕ್ಕೆ ಮುನ್ನಡಿ ಬರೆದಿದ್ದರು’ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ಸ್ಮರಿಸಿದರು.
‘ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡದ 9 ಆನೆಗಳು ತಾಲೀಮಿನ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿವೆ. ಹೊಸ ಆನೆಗಳು ಮೊದಲ ತಂಡದೊಂದಿಗೆ ಬೆರೆಯಬೇಕಿದೆ. ಗೋಪಿ ಹಾಗೂ ವಿಜಯಾ ದಸರಾದಲ್ಲಿ ಭಾಗವಹಿಸಿರುವ ಅನುಭವವಿದೆ. ನಮ್ಮ 14 ಆನೆಗಳೂ ಎಂದಿನಂತೆ ತಾಲೀಮು ನಡೆಸಲಿವೆ’ ಎಂದರು.
3 ಹೊಸ ಆನೆಗಳಿಗೆ ಚೊಚ್ಚಲ ದಸರೆ: ಎರಡನೇ ತಂಡದಲ್ಲಿನ 5 ಆನೆಗಳಲ್ಲಿ ಶ್ರೀರಾಮ, ಸುಗ್ರೀವ ಹಾಗೂ ಪಾರ್ಥಸಾರಥಿ ಇದೇ ಚೊಚ್ಚಲ ದಸರಾ. ಮೊದಲ ತಂಡದ ಬಳ್ಳೆ ಆನೆ ಶಿಬಿರದ ಮಹೇಂದ್ರನಿಗೂ (39) ಮೊದಲ ದಸರೆ.
ಆನೆಗಳಿಗೆ ತೂಕ ಪರೀಕ್ಷೆ: ‘ಗಜಪಡೆಯ 2ನೇ ತಂಡದ ಆನೆಗಳು ಸೇರಿದಂತೆ 14 ಆನೆಗಳ ತೂಕ ಪರೀಕ್ಷೆ ಸೆ.9 ಅಥವಾ 10ರಂದು ನಡೆಸಲಾಗುವುದು. ವಿಶೇಷ ಆಹಾರ ಮತ್ತು ತಾಲೀಮನ್ನು ಆನೆಗಳಿಗೆ ನೀಡುತ್ತಿರುವುದರಿಂದ ತೂಕಪರೀಕ್ಷೆಯು ಆನೆಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಸಹಾಯವಾಗಲಿದೆ’ ಎಂದು ಡಾ.ವಿ.ಕರಿಕಾಳನ್ ಹೇಳಿದರು.
‘ಮೊದಲ ತಂಡದ 9 ಆನೆಗಳಿಗೆ ವಿಶೇಷ ಆಹಾರ ನೀಡುತ್ತಿರುವುದರಿಂದ 200ರಿಂದ 300 ಕೆ.ಜಿ ತೂಕ ಹೆಚ್ಚಿಸಿಕೊಂಡಿವೆ. ಮರದ ಅಂಬಾರಿ ತಾಲೀಮನ್ನು ಗೋಪಾಲಸ್ವಾಮಿ, ಧನಂಜಯನಿಗೂ ನೀಡಲಾಗುವುದು’ ಎಂದರು.
12ಕ್ಕೆ ಕುಶಾಲ ತೋಪು:ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಅಶ್ವಾರೋಹಿ ದಳದ ಕುದುರೆಗಳು ಶಬ್ದಕ್ಕೆ ಬೆದರದಂತೆ ನೋಡಿಕೊಳ್ಳುವ ಉದ್ದೇಶದಿಂದ ಕುಶಾಲತೋಪು ಸಿಡಿಸುವ ತಾಲೀಮು ಸೆ.12ಕ್ಕೆ ನಡೆಯಲಿದೆ.
‘ಆನೆಗಳಿಗೆ ದೊಡ್ಡ ಪ್ರಮಾಣದ ಶಬ್ದ ಕೇಳಿಸುವ ಚಟುವಟಿಕೆ ಇದಾಗಿದ್ದು, ಜಂಬೂಸವಾರಿಗೂ ಮುನ್ನ 3 ಬಾರಿ ಅಭ್ಯಾಸ ಮಾಡಿಸಲಾಗುವುದು’ ಎಂದು ಕರಿಕಾಳನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.