ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಗರಿಗೆದರಲಿದೆ ಪಾರಂಪರಿಕ ಸಂಗೀತೋತ್ಸವ

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌: ನಾಳೆಯಿಂದ ನಾದಲೋಕ ಅನಾವರಣ
Published : 6 ಸೆಪ್ಟೆಂಬರ್ 2024, 5:31 IST
Last Updated : 6 ಸೆಪ್ಟೆಂಬರ್ 2024, 5:31 IST
ಫಾಲೋ ಮಾಡಿ
Comments

ಮೈಸೂರು: ದಸರೆಯಲ್ಲಿ ಅರಮನೆಯ ಮುಂಬೆಳಗಲ್ಲಿ ಸಂಗೀತ ಕಛೇರಿ ನೀಡುವುದು ಎಷ್ಟು ಸಂಭ್ರಮವೋ, ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನ ಪುಟ್ಟ ಬೀದಿಯಲ್ಲಿ ಗಣೇಶನ ಮುಂದೆ ತನ್ಮಯರಾಗಿ ಹಾಡುವುದು ದೇಶದ ಪ್ರತಿಯೊಬ್ಬ ಸಂಗೀತಗಾರನ ಕನಸು!

ಕಳೆದ 6 ದಶಕದಿಂದ ‘ಪಾರಂಪರಿಕ ಸಂಗೀತೋತ್ಸವ’ ನಡೆಯುತ್ತಿರುವ ಮೈಸೂರಿನ ಈ ಪುಟ್ಟ ಬೀದಿ ಮಾಡುವ ಕೆಲಸವನ್ನು ಯಾವ ಸಂಗೀತ ವಿಶ್ವವಿದ್ಯಾಲಯವೂ ಮಾಡದೆಂದು ಸರೋದ್‌ ವಾದಕ ದಿವಂಗತ ಪಂಡಿತ್ ರಾಜೀವ್ ತಾರಾನಾಥ ದಶಕದ ಹಿಂದೆ ಪ್ರಶಂಸಿಸಿದ್ದರು. ಅದು ಈ ಬೀದಿಗೆ ನೀಡಿದ ನುಡಿಹಾರ.

ಶ್ರೀಪ್ರಸನ್ನ ವಿದ್ಯಾ ಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ (ಎಸ್‌ಪಿವಿಜಿಎಂಸಿ ಟ್ರಸ್ಟ್‌) 63ನೇ ಪಾರಂಪರಿಕ ಸಂಗೀತೋತ್ಸವ ಸೆ.7ರಿಂದ ಸೆ.18ರ ವರೆಗೆ ಆಯೋಜಿಸಿದ್ದು, 10 ದಿನ ನಿತ್ಯ ಭಾರತೀಯ ಸಂಗೀತದ ಉತ್ಸವ ನಡೆಯಲಿದೆ. ರಸದೌತಣ ಸವಿಯಲು ಸಹೃದಯರು ಕಾದು ಕುಳಿತಿದ್ದರೆ, ಇಲ್ಲಿ ಸಿಗುವ ಸಮ್ಮಾನಕ್ಕೆ, ಚಪ್ಪಾಳೆ, ನುಡಿಹಾರಕ್ಕೆ ದೇಶದ ಸಂಗೀತತಜ್ಞರು ತುದಿಗಾಲಿನಲ್ಲಿ ನಿಂತಿದ್ದಾರೆ. 

ಉತ್ಸವದಲ್ಲಿ 30ಕ್ಕೂ ಹೆಚ್ಚು ಕಛೇರಿ ನೀಡಿರುವ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ವಿದ್ವಾನ್ ಟಿ.ಎಂ.ಕೃಷ್ಣ ಪ್ರಧಾನ ಆಕರ್ಷಣೆ. ಅವರು 16 ವರ್ಷದ ಬಾಲಕನಾಗಿದ್ದಾಗಿನಿಂದಲೂ ಇಲ್ಲಿ ಕಛೇರಿಗಳನ್ನು ನೀಡಿದ್ದಾರೆ. ಉತ್ಸವದ ಕೊನೇ ದಿನ ಅವರಿಗೆ ಸನ್ಮಾನವನ್ನು ಟ್ರಸ್ಟ್ ಮಾಡಲಿದೆ. ತಿರುವಾಯೂರು ಗಿರೀಶ್‌, ವಿಘ್ನೇಶ್‌ ಈಶ್ವರ್, ಕುನ್ನಕ್ಕುಡಿ ಬಾಲಮುರಳೀಕೃಷ್ಣ ಅವರ ಗಾಯನ ಸುಧೆ ಹರಿಯಲಿದೆ.

ಸೂರ್ಯಗಾಯತ್ರಿ
ಸೂರ್ಯಗಾಯತ್ರಿ

ಕರ್ನಾಟಿಕ್, ಹಿಂದೂಸ್ಥಾನಿ ಗಾಯನ, ವಾದನದ ನಾದದ ಅಲೆಗಳು ಉತ್ಸವದಲ್ಲಿ ಏಳಲಿವೆ. ಇದೇ ಮೊದಲು ಕಛೇರಿ ನೀಡುತ್ತಿರುವವರು ಹಲವರು. 8ರಂದು ಬಾಲಪ್ರತಿಭೆ ಸೂರ್ಯಗಾಯತ್ರಿ ಅವರ ಗಾಯನವಿದೆ. ಭಾವಪೂರ್ಣ ಪ್ರಸ್ತುತಿಯು ಎಂ.ಎಸ್‌.ಸುಬ್ಬಲಕ್ಷ್ಮಿ ಅವರನ್ನು ಹೋಲುತ್ತದೆಂದು ಸಂಗೀತ ವಲಯದಲ್ಲಿ ಮಾತಿದೆ. ಅವರ ಹಾಡುಗಾರಿಕೆಯ ಜನಪ್ರಿಯತೆಯು ಎಷ್ಟಿದೆಯೆಂದರೆ ಯೂಟ್ಯೂಬ್ ಚಾನಲ್‌ಗೆ 15 ಕೋಟಿ ವೀಕ್ಷಕರಿದ್ದಾರೆ.

ಕೇರಳದ ‘ಅಗಂ’ ಬ್ಯಾಂಡ್‌ನ ಗಾಯಕ ವಿದ್ವಾನ್ ಹರೀಶ್‌ ಶಿವರಾಮಕೃಷ್ಣನ್ ಉತ್ಸವದಲ್ಲಿ ಇದೇ ಮೊದಲ ಬಾರಿ ಕಛೇರಿ ನೀಡುತ್ತಿದ್ದು, ಯುವ ಸಮೂಹ ಅವರ ಗಾಯನಕ್ಕೆ ತಲೆದೂಗಲಿದೆ. ಕಲ್ಯಾಣಪುರಂ ಎಸ್‌.ಅರವಿಂದ್, ಸ್ಫೂರ್ತಿರಾವ್‌ ಕಛೇರಿ ನೀಡುತ್ತಿರುವ ಯುವ ಕಲಾವಿದರು.

ಜುಗಲ್‌ಬಂದಿ ಝಲಕ್‌: ಸಹೃದಯರ ಮೈ ನವಿರೇಳಿಸುವ ಜುಗಲ್‌ಬಂದಿ, ದಂದ್ವ ವಯೊಲಿನ್ ವಾದನ ಈ ಬಾರಿಯ ಉತ್ಸವದಲ್ಲಿವೆ. ವಿದ್ವಾನ್‌ ಶ್ರುತಿಸಾಗರ್, ವಿದುಷಿ ಚಾರುಮತಿ ರಘುರಾಮನ್ ಅವರ ಕೊಳಲು– ವಯೊಲಿನ್‌ ಮೋಡಿ ಇರಲಿದ್ದು, ಅಕ್ಕರೈ ಸಹೋದರಿಯರಾದ ಶುಭಲಕ್ಷ್ಮಿ– ಸ್ವರ್ಣಲತಾ ಅವರ ದ್ವಂದ್ವ ವಯೊಲಿನ್ ವಾದನವು ಮೈ ನವಿರೇಳಿಸಲಿದೆ.   

ಕುನ್ನಕ್ಕುಡಿ ಎಂ.ಬಾಲಮುರಳೀಕೃಷ್ಣ
ಕುನ್ನಕ್ಕುಡಿ ಎಂ.ಬಾಲಮುರಳೀಕೃಷ್ಣ

ವೈವಿಧ್ಯಮಯ: ಸಂಗೀತಕಟ್ಟಿ ಅವರ ಹಿಂದೂಸ್ಥಾನಿ ಗಾಯನವಿದ್ದು, ಮಾಲಿನಿ ಅವರ ‘ಹರಿಕಥೆ’ ಈ ಬಾರಿಯ ‍ಪ್ರಮುಖ ಆಕರ್ಷಣೆ. ಇದಲ್ಲದೆ ಭೀಮಾಶಂಕರ್ ಬಿದನೂರು ಅವರ ವಿದ್ಯಾರ್ಥಿಗಳಿಂದ ‘ಸಮೂಹ ತಬಲಾ’,  ಕಿರಗಸೂರು ರಾಜಣ್ಣ ಅವರ ರಂಗಗೀತೆಗಳ ಗಾಯನವಿದೆ. ಐತಿಹಾಸಿಕ ಸಾಹಿತ್ಯಕ ಕೃತಿಗಳಾದ ರಘುವಂಶ, ಆದಿಪುರಾಣದ ಭರತ ಬಾಹುಬಲಿ ಯುದ್ಧ, ಗಣೇಶ ಪುರಾಣ, ಕನ್ನಡ ಭಾಗವತ, ಶಿವತತ್ವ ಚಿಂತಾಮಣಿ ಕಾವ್ಯಾವಾಚನ, ಗಮಕ ಪ್ರಸ್ತುತಿಯೂ ಇರಲಿವೆ. 

ಗರಿ ಸಂಗ್ರಹಿಸುತ್ತಿದ್ದೆ: ‘ಮೊಹಲ್ಲಾದ ಮಹಾಲಿಂಗು, ರಘೋತ್ತಮ ದಾಸ, ಜಿ.ಟಿ.ಸುಬ್ಬರಾವು, ಶ್ರೀರಾಮ ಅಯ್ಯಂಗಾರ್‌, ನಂಜಪ್ಪ, ಸೌಂದರ್ಯಮ್ಮ ವೆಂಕಟೇಶ್‌, ನಾಗಮ್ಮ 1962ರಲ್ಲಿ ಮೊದಲ ಗಣೇಶ ಉತ್ಸವ ನಡೆಸಲು ನಿರ್ಧರಿಸಿದ್ದರು. ಇವರಲ್ಲಿ ನನ್ನ ತಾಯಿ ರಾಜಮ್ಮ ಸಿ.ಆರ್‌.ಗೌಡ ಕೂಡ ಇದ್ದರು. ಉತ್ಸವದ ಚಪ್ಪರ ಹಾಕಲು ಗರಿ ತೆಗೆದುಕೊಂಡು ಬರಲು ತಾಯಿ ಹೇಳಿದ್ದರು. ಎಲ್ಲರ ಮನೆಗೂ ಹೋಗುತ್ತಿದ್ದೆ. ಆಗ ನನಗೆ 10 ವರ್ಷ’ ಎಂದು ಟ್ರಸ್ಟ್ ಕಾರ್ಯದರ್ಶಿ ಸಿ.ಆರ್‌.ಹಿಮಾಂಶು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಗೀತ ಕಟ್ಟಿ
ಸಂಗೀತ ಕಟ್ಟಿ

‘1985ರಲ್ಲಿ ಟ್ರಸ್ಟ್‌ ರಚನೆಯಾಯಿತು. ಸರೋಜಾ ತುಳಸಿದಾಸಪ್ಪ, ಕೆ.ವಿ.ಮೂರ್ತಿ, ಆರ್‌.ವಾಸುದೇವಮೂರ್ತಿ, ಸೀತಾರಾಮ ರಾವ್, ಅಧಿಕಾರಿಗಳಾದ ಚಿರಂಜೀವಿ ಸಿಂಗ್‌, ಕೃಷ್ಣಕುಮಾರ್‌, ವಿಕ್ರಾಂತ್‌, ಡಿ.ಎನ್.ಮುನಿಕೃಷ್ಣ, ಕೆ.ಆರ್‌.ಶ್ರೀನಿವಾಸನ್‌, ಸಿದ್ದಯ್ಯ ನಿರಂತರ ಪ್ರೋತ್ಸಾಹ ನೀಡಿದ್ದರಿಂದ ಉತ್ಸವ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರಾಯಿತು’ ಎಂದು ಸ್ಮರಿಸಿದರು.    

ಕಲ್ಯಾಣಪುರಂ ಎಸ್‌.ಅರವಿಂದ್‌
ಕಲ್ಯಾಣಪುರಂ ಎಸ್‌.ಅರವಿಂದ್‌
ಸ್ಫೂರ್ತಿರಾವ್
ಸ್ಫೂರ್ತಿರಾವ್
ಅಕ್ಕರೈ ಶುಭಲಕ್ಷ್ಮಿ ಅಕ್ಕರೈ ಸ್ವರ್ಣಲತಾ
ಅಕ್ಕರೈ ಶುಭಲಕ್ಷ್ಮಿ ಅಕ್ಕರೈ ಸ್ವರ್ಣಲತಾ
ಹರೀಶ್‌ ಶಿವರಾಮಕೃಷ್ಣನ್
ಹರೀಶ್‌ ಶಿವರಾಮಕೃಷ್ಣನ್
ವಿಘ್ನೇಶ್‌ ಈಶ್ವರ್
ವಿಘ್ನೇಶ್‌ ಈಶ್ವರ್
ಸಿ.ಆರ್.ಹಿಮಾಂಶು
ಸಿ.ಆರ್.ಹಿಮಾಂಶು
ಶ್ರುತಿಸಾಗರ್
ಶ್ರುತಿಸಾಗರ್
ತಿರುವಾರೂರು ಗಿರೀಶ್
ತಿರುವಾರೂರು ಗಿರೀಶ್
ಎಲ್ಲರ ಸಹಕಾರದಿಂದ ಉತ್ಸವ ನಡೆದುಕೊಂಡು ಬಂದಿದೆ. ಹೆಚ್ಚು ಯುವಜನರು ಕಛೇರಿಗಳನ್ನು ಕೇಳಬೇಕು. ಈ ಪರಂಪರೆಯನ್ನು ಮುಂದುವರಿಸಬೇಕು
ಸಿ.ಆರ್.ಹಿಮಾಂಶು ಕಾರ್ಯದರ್ಶಿ
‘ಪ್ರಜಾವಾಣಿ’ ಸಹಯೋಗ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ 63ನೇ ಪಾರಂಪರಿಕ ಸಂಗೀತೋತ್ಸವ ನಡೆಯಲಿದೆ.  ಗೌರಿ–ಗಣೇಶ ಹಬ್ಬದ ದಿನವಾದ ಸೆ.7ರಂದು ಗಣೇಶ ಮೂರ್ತಿಗೆ ಪೂಜೆ ನಂತರ ಉತ್ಸವ ಕಳೆಗಟ್ಟಲಿದೆ.  ಸೆ.8ರಂದು ಸಂಜೆ 6ಕ್ಕೆ ಶಾಸಕ ಕೆ.ಹರೀಶ್‌ಗೌಡ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ಉದ್ಯಮಿ ಜಗನ್ನಾಥ ಶೆಣೈ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿರುವರು. ಸೆ.14ರಂದು ಬೆಳಿಗ್ಗೆ 10ಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಸೆ.15ರ ಬೆಳಿಗ್ಗೆ 8ಕ್ಕೆ ಚಳ್ಳಕೆರೆ ಸಹೋದರರಿಂದ ಗಣಪತಿ ಮತ್ತು ಭೂ ಸೂಕ್ತ ಹೋಮ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ್ಯ ಪರಕಾಲ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT