ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ತಂದೆ ನೆನಪಿನಲ್ಲಿ ಶಾಲೆಗೆ ಸಹಾಯ

Published 11 ಜುಲೈ 2024, 5:00 IST
Last Updated 11 ಜುಲೈ 2024, 5:00 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ತಂದೆಯ ಮೇಲಿನ ಮಗಳ ಪ್ರೀತಿ, ಗೌರವವು, ಅದೇ ಶಾಲೆಯ ಮಕ್ಕಳೆಡೆಗೆ ಸಹಾಯಹಸ್ತ ಚಾಚುವಂತೆ ಮಾಡಿದೆ. 

ಇಲ್ಲಿನ ಅಶೋಕಪುರಂನ ರೈಲ್ವೆ ಕಾರ್ಯಾಗಾರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ತಿರುಮಲೆ ಗೌಡ ಅವರ ಮಗಳು ಪ್ರೊ.ಶರ್ಮಿಳಾ ತಿರುಮಲೆ ಅವರು, ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯ ಸಾಮಗ್ರಿ ಮತ್ತು ಕ್ರೀಡಾ ಸಮವಸ್ತ್ರಗಳನ್ನು ನೀಡಲು ನಿರ್ಧರಿಸಿದ್ದಾರೆ. ವಿತರಣೆ ಕಾರ್ಯಕ್ರಮ ಗುರುವಾರ (ಜುಲೈ 11) ನಡೆಯಲಿದೆ.

ಶರ್ಮಿಳಾ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ. ತಿರುಮಲೆ ಗೌಡರು ಸರಗೂರು, ಹ್ಯಾಂಡ್‌ಪೋಸ್ಟ್, ಸಿಂಧಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಬಳಿಕ ನಗರದ ದಕ್ಷಿಣ ವಲಯದ ಸರ್ಕಾರಿ ರೈಲ್ವೆ ಕಾರ್ಯಾಗಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಶಾಲೆಯಲ್ಲಿದ್ದಷ್ಟು ಸಮಯ ಅಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದರು.

ಅವರು ನಿವೃತ್ತರಾಗಿ 28 ವರ್ಷಗಳಾಗಿವೆ. ಹತ್ತು ವರ್ಷದ ಹಿಂದೆ ನಿಧನರಾದಾಗ ಅವರ ನೆನಪಿನಲ್ಲಿ ಶಾಲೆಗೆ ಸಹಾಯ ಮಾಡಬೇಕು ಎಂದು ಯೋಚಿಸಿದ ಶರ್ಮಿಳಾ ರೈಲ್ವೆ ಕಾರ್ಯಾಗಾರ ಶಾಲೆಗೆ ಭೇಟಿ ನೀಡಿದ್ದರು. ಕೊಠಡಿಗಳ ಸಮಸ್ಯೆ ಇರುವುದನ್ನು ಅರಿತು, ಸುಮಾರು ₹3 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಿಸಿ ಕೊಡಲು ಯೋಚಿಸಿದ್ದರು.

‘ಶಾಲೆಯು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಾಗದಲ್ಲಿರುವುದರಿಂದ, ಶಾಲೆಯ ಸ್ಥಳಾಂತರದ ವೇಳೆ ಕಟ್ಟಡವು ಪ್ರಯೋಜನಕ್ಕೆ ಬಾರದು’ ಎಂದು ಡಿಡಿಪಿಐ ಸಲಹೆ ನೀಡಿದ್ದರು.

ತಂದೆಯ ಮೇಲಿನ ಪ್ರೀತಿಯಿಂದ ಮತ್ತೆ ಅದೇ ಶಾಲೆಗೆ ತೆರಳಿದ ಅವರು, ಶಿಕ್ಷಕರಲ್ಲಿ ವಿಚಾರಿಸಿದಾಗ ಶನಿವಾರ ಧರಿಸಲು ಕ್ರೀಡಾ ಸಮವಸ್ತ್ರ (ಟ್ರ್ಯಾಕ್‌ ಸೂಟ್‌) ಅಗತ್ಯವಿರುವುದಾಗಿ ತಿಳಿಸಿದ್ದರು. ಹೀಗಾಗಿ ಅವರು ಶಾಲೆಯ 75 ಮಕ್ಕಳಿಗೆ ಕ್ರೀಡಾ ಸಮವಸ್ತ್ರ, ಬ್ಯಾಗ್‌, ಪುಸ್ತಕ ಹಾಗೂ ಸ್ಟೇಷನರಿ ವಸ್ತುಗಳನ್ನು ವಿತರಿಸಲು ನಿರ್ಧರಿಸಿದರು.

‘ಖಾಸಗಿ ಶಾಲೆಗಳು ಹೆಚ್ಚಿನ ಪೈಪೋಟಿ ನೀಡುತ್ತಿವೆ. ಸರ್ಕಾರಿ ಶಾಲೆಯ ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಶರ್ಮಿಳಾ ಅವರ ನೆರವಿನಿಂದ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಹೆಚ್ಚುವ ನಿರೀಕ್ಷೆ ಇದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆಯೊಡ್ಡಲು ಸಹಾಯವಾಗಲಿದೆ. ಈ ಹಿಂದೆಯೂ ಅವರು ಪೀಠೋಪಕರಣ ನೀಡಿದ್ದರು’ ಎಂದು ಮುಖ್ಯಶಿಕ್ಷಕಿ ಕಲ್ಪನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಗೆ ನೆರವು ನೀಡುತ್ತಿರುವ ಬಗ್ಗೆ ಹೆಮ್ಮೆ ಇದೆ. ಸ್ಥಳಾಂತರಿಸಬಹುದಾದ ವೇದಿಕೆ ನಿರ್ಮಿಸಿಕೊಡುವ ಆಲೋಚನೆ ಇದೆ
–ಪ್ರೊ.ಶರ್ಮಿಳಾ ತಿರುಮಲೆ ಗೌಡ ಅವರ ಮಗಳು

ಮಕ್ಕಳ ಕೌಶಲ ವೃದ್ಧಿಗೆ ಶ್ರಮಿಸಿದ್ದ ಶಿಕ್ಷಕ

ಬಿ.ಇಡಿ ಪದವೀಧರರಾಗಿದ್ದ ತಿರುಮಲೆ ಗೌಡರಿಗೆ ಪ್ರೌಢಶಾಲೆಗೆ ಬಡ್ತಿ ದೊರಕದೆ ಪ್ರಾಥಮಿಕ ಶಾಲೆಯಲ್ಲೇ ಸುಧಾರಣೆಗೆ ಶ್ರಮಿಸಿದ್ದರು. ಓದು ಬರಹ ಲೆಕ್ಕದ ಕೌಶಲಗಳೇ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬುನಾದಿ  ಎಂದು ನಂಬಿದ್ದರು. ನಿವೃತ್ತಿ ಬಳಿಕ ಪ್ರಾಥಮಿಕ ಶಾಲೆಗಳಿಗೆ ಮೇಲ್ವಿಚಾರಕರಾಗಿ ಭೇಟಿ ನೀಡಿ ಅನೇಕ ತರಗತಿಗಳಲ್ಲಿ ಮೂಲಭೂತ ಕಲಿಕೆಯ (ಓದು ಬರಹ) ಸ್ಥಿತಿಗತಿ ಬಗ್ಗೆ ಇಲಾಖೆಗೆ ವರದಿ ನೀಡಿದ್ದರು.

ಮಕ್ಕಳಿಗೆ ಕನ್ನಡ ಓದು–ಬರಹವನ್ನು ಪ್ರಭಾವಯುತವಾಗಿ ಕಲಿಸುವ ಬಗ್ಗೆ ಸಂಶೋಧನೆ ಮಾಡಿ ‘ಸರಳ ಬಾಲ ಬೋಧನೆ’ ಮತ್ತು ‘ಭಾಷಾಭಾರತಿ’ ಕೃತಿಗಳನ್ನು ರಚಿಸಿದ್ದರು.  ಸರಳ ಬಾಲ ಬೋಧನೆಯನ್ನು ಬೆಂಗಳೂರು ದಕ್ಷಿಣ ವಲಯದ 20 ಶಾಲೆಗಳಲ್ಲಿ ಪ್ರಯೋಗಕ್ಕೆ ಒಳಪಡಿಸಿದಾಗ ತೃಪ್ತಿದಾಯಕ ಫಲಿತಾಂಶ ದೊರಕಿತ್ತು. ಮೈಸೂರಿನ ರೈಲ್ವೆ ಕಾಲೊನಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿದ್ದಾಗ ಶಾಲಾ ಉದ್ಯಾನ ಅಭಿವೃದ್ಧಿ ಪಡಿಸಿ ಸುಮಾರು 500 ಹಣ್ಣಿನ ಗಿಡಗಳನ್ನು ಪೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT