ಮೈಸೂರು: ವಿಜಯನಗರದ ಕನ್ನಡ ಭವನದಲ್ಲಿ ‘ಅಕ್ಷರ ನಾದ ಪ್ರಕಾಶನ’ ಹೊರತಂದಿರುವ ವಿವಿಧ ಲೇಖಕರು ಬರೆದಿರುವ 38 ಕೃತಿಗಳನ್ನು ಲೇಖಕ ಪ್ರೊ.ಅರವಿಂದ ಮಾಲಗತ್ತಿ ಭಾನುವಾರ ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ‘ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು, ಸಾಧನೆ ಬಗ್ಗೆ ಪುರುಷ ಸಮಾಜ ವ್ಯಂಗ್ಯವಾಡಬಾರದು. ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು’ ಎಂದರು.
‘ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೊಸ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಾಮಾನ್ಯ ಕೆಲಸವಲ್ಲ. ಅಕ್ಷರನಾದ ಪ್ರಕಾಶನವು 38 ಲೇಖಕರ ಕೃತಿಗಳನ್ನು ಹೊರತಂದಿದೆ. ಪ್ರಕಾಶನದ ಶ್ರುತಿ ಮಧುಸೂದನ್ ಉತ್ತಮ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
‘ರನ್ನನ ಅಜಿತನಾಥ ಪುರಾಣವನ್ನು ಅತ್ತಿಮಬ್ಬೆ ಅನೇಕ ಪ್ರತಿಗಳನ್ನು ಅಚ್ಚು ಹಾಕಿಸಿ ಹಂಚಿದ್ದರು. ಮಹಿಳೆಯರು ಕೃತಿ ಪ್ರಕಟಣೆಯ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇಂಥ ಕೆಲಸ ಮಾಡುವುದು ಧಾರ್ಮಿಕ ಸೇವೆಯೆಂದು ಅತ್ತಿಮಬ್ಬೆ ತಿಳಿದಿದ್ದಳು. ಅಂತಹ ಪರಂಪರೆಯನ್ನು ಶ್ರುತಿ ಮುಂದುವರಿಸಿದ್ದಾರೆ’ ಎಂದರು.
‘ಜಗತ್ತು ತಂತ್ರಜ್ಞಾನ ಅವಲಂಬಿಸಿದೆ. ಈ ಮೊಬೈಲ್ ಕಾಲದಲ್ಲಿ ಲೇಖಕರೇ ಆಗುತ್ತಿದ್ದಾರೆ. ಪ್ರತಿಯೊಬ್ಬರೂ ಸಾಮಾನ್ಯ ಜನತೆಯ ನೋವು, ಅನಿಸಿಕೆ, ಅಭಿಪ್ರಾಯ ಹಂಚಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಕ್ಷರನಾದ ಪ್ರಕಾಶನದ ಶ್ರುತಿ ಮಧುಸೂದನ್, ಉಪಾಧ್ಯಕ್ಷ ಕೆ.ಮಧುಸೂದನ್ ಆಚಾರ್, ನಟ ಶಿವಕುಮಾರ್, ಲೇಖಕರಾದ ಮಂಜುಳಾ ಪಾವಗಡ, ಸಿದ್ದನಕೊಪ್ಪಲು ಕುಮಾರ್, ಟಿ.ತ್ಯಾಗರಾಜು ಹಾಜರಿದ್ದರು.