ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಪುಸ್ತಕ, ಕೃತಿ ಸ್ವಾಮ್ಯ ದಿನ: ಪುಸ್ತಕ ಪರಿಚಾರಕ ಚಿತ್ತಣ್ಣನವರ್

ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಗೆ 18 ವರ್ಷದ ಪಯಣ
Published 23 ಏಪ್ರಿಲ್ 2024, 4:27 IST
Last Updated 23 ಏಪ್ರಿಲ್ 2024, 4:27 IST
ಅಕ್ಷರ ಗಾತ್ರ

ಮೈಸೂರು: ಸಾಹಿತ್ಯ ಮೇಳಗಳ ಆಯೋಜನೆ ಸುದ್ದಿ ಕಿವಿಗೆ ಬಿದ್ದೊಡನೆ ಪುಸ್ತಕಗಳ ಗಂಟು ಹೊತ್ತು ಸಾಗುವ ಪ್ರಕಾಶಕ, ಮಾರಾಟಗಾರ ನಿಂಗರಾಜು ಚಿತ್ತಣ್ಣನವರ್, ಜನರಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ‘ಪುಸ್ತಕ ಓದು ವಿಮರ್ಶೆ’ ಎಂಬ ಅಪರೂಪದ ಕಾರ್ಯಕ್ರಮವನ್ನು ಸಂಘಟಿಸಿ ದಾಖಲೆ ನಿರ್ಮಿಸಿದವರು.

2006 ಏ.23ರಂದು, ವಿಶ್ವ ಪುಸ್ತಕ ದಿನಾಚರಣೆಯಂದೇ ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆ ಮೂಲಕ ನಗರದಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾದ ಅವರದ್ದು, ಇಂದಿಗೆ 18 ವರ್ಷಗಳ ಸಾರ್ಥಕ ಪಯಣ.

ಹಲವು ಸಾಹಿತಿಗಳನ್ನು ‘ಬನ್ನಿ ಸರ್‌, ಮೇಡಂ.. ಕನ್ನಡ ಪುಸ್ತಕಗಳನ್ನು ಜನರಿಗೆ ಪರಿಚಯಿಸಿ ಬದುಕು ಕಟ್ಟಿಕೊಳ್ಳುವ ನನ್ನ ಪ್ರಯತ್ನಕ್ಕೆ ಸಹಕರಿಸಿ’ ಎಂದು ಕರೆಯುತ್ತಾ, ತಮ್ಮ ಮಳಿಗೆಗೆ ಅನೇಕ ಪ್ರಮುಖರನ್ನು ಬರಮಾಡಿಕೊಂಡು, ಅವರ ಓದುಗರನ್ನು, ಅಭಿಮಾನಿಗಳನ್ನು ಮಳಿಗೆಯತ್ತ ನೋಡುವಂತೆ ಮಾಡಿ ಸಾವಿರಾರು ಜನರ ಕೈಗೆ ಪುಸ್ತಕಗಳು ಸೇರಲು ಕಾರಣರಾಗಿದ್ದಾರೆ.

ಪುಸ್ತಕ ಕೊಳ್ಳುವಂತೆ ಪ್ರೇರೇಪಿಸಲು ‘ಪುಸ್ತಕ ಸಂಚಯ’ ಎಂಬ ಮಾಸಿಕ ಹಣ ಜಮೆ ಯೋಜನೆ ರೂಪಿಸಿ, ಪುಸ್ತಕ ಮಾರುಕಟ್ಟೆಯ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿ ಯಶಸ್ವಿಯೂ ಆಗಿದ್ದಾರೆ. ಹೊಸ ಸಾಹಿತಿ, ಲೇಖಕರ ಪುಸ್ತಕಗಳಿಗೆ ತಮ್ಮ ಅಂಗಡಿಯ ರ್‍ಯಾಕ್‌ನಲ್ಲಿ ಆತ್ಮೀಯವಾಗಿ ಸ್ಥಳ ಒದಗಿಸುವುದಲ್ಲದೇ, 2015ರಲ್ಲಿ ‘ಚಿಂತನ ಚಿತ್ತಾರ ಪ್ರಕಾಶನ’ ಸ್ಥಾಪಿಸಿ, ಈವರೆಗೂ 50 ಪುಸ್ತಕಗಳನ್ನು ಪ್ರಕಾಶಿಸುವ ಮೂಲಕ ಸಾಹಿತ್ಯ ಸೇವೆ ಮಾಡಿದ್ದಾರೆ.

‘ಎಂ.ಎ ಪತ್ರಿಕೋದ್ಯಮ ಪೂರೈಸಿ ಸರ್ಕಾರಿ ಕೆಲಸಕ್ಕೂ ಪ್ರಯತ್ನ ಪಟ್ಟಿದ್ದೆ. ಆದರೆ, ಸಿಗಲಿಲ್ಲ. ಬಾಲ್ಯದಲ್ಲಿ ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದೆ. ಸಾಹಿತ್ಯದ ಒಲವು, ಪುಸ್ತಕಗಳ ಕುರಿತ ಅಭಿಮಾನ ಈ ಕ್ಷೇತ್ರದಲ್ಲೇ ಬದುಕು ಕಟ್ಟಿಕೊಳ್ಳುವಂತೆ ಮಾಡಿತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲೇಖಕ ಎಸ್.ಜಿ.ಸಿದ್ದರಾಮಯ್ಯ ಅವರು 2006ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ, ಪ್ರಾಧಿಕಾರದ ನೆರವಿನಿಂದ ಸುಮಾರು 162 ರೀತಿಯ ಪುಸ್ತಕಗಳೊಂದಿಗೆ ಕುವೆಂಪು ನಗರದದಲ್ಲಿ ಮಳಿಗೆ ಆರಂಭಿಸಿದೆ. ಸ್ನೇಹಿತರ ಸಹಕಾರವೂ ಇತ್ತು. ಪ್ರಾರಂಭದಲ್ಲಿ ಅಂಗಡಿಗೆ ಜನ ಬರುವುದೇ ಅಪರೂಪ ಎಂಬಂತಾಗಿತ್ತು. ಸೈಕಲ್‌ನಲ್ಲಿ ಪುಸ್ತಕಗಳನ್ನು ಸಾಗಿಸಿ ಮಾರಾಟ ಮಾಡಿದ್ದು ಇದೆ. ಅನೇಕ ಏಳು ಬೀಳುಗಳನ್ನು ದಾಟಿದ್ದು, ಇಂದು ಅಂಗಡಿಯಲ್ಲಿ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ನಿಯಮಿತವಾಗಿ ಅನೇಕರು ಬರುತ್ತಾರೆ’ ಎಂದು ಅನುಭವ ಹಂಚಿಕೊಂಡರು.

‘ಯು.ಆರ್.ಅನಂತಮೂರ್ತಿ, ದೇವನೂರ ಮಹಾದೇವ, ಓ.ಎಲ್.ನಾಗಭೂಷಣ ಸ್ವಾಮಿ, ಗೋವಿಂದಯ್ಯ, ವಡ್ಡಗೆರೆ ನಾಗರಾಜಯ್ಯ. ಹಿ.ಶಿ.ರಾಮಚಂದ್ರೇಗೌಡ, ಅರವಿಂದ ಮಾಲಗತ್ತಿ, ಗೌರಿ ಲಂಕೇಶ್‌ ಸೇರಿದಂತೆ ಬಹಳಷ್ಟು ಪ್ರಮುಖರು ಮಳಿಗೆಗೆ ಬಂದು, ಜನರಿಗೆ ಪುಸ್ತಕಗಳನ್ನು ಕೊಳ್ಳಬೇಕಾದ ಅಗತ್ಯ ತಿಳಿಸಿದ್ದರು. ಪುಸ್ತಕ ದಿನಾಚರಣೆಯಲ್ಲಿ ತಳ್ಳು ಗಾಡಿಗಳಲ್ಲಿ ಪುಸ್ತಕ ಇರಿಸಿ ಮಾರಾಟ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಿದ್ದೆವು’ ಎಂದರು.

ಪುಸ್ತಕ ಸಂಚಯ: ‘ಪ್ರತಿ ತಿಂಗಳು ₹100 ನೀಡಿ, 10ತಿಂಗಳಿಗೊಮ್ಮೆ ₹1150 ಮೊತ್ತದ ಪುಸ್ತಕ ಖರೀದಿಸುವ ಯೋಜನೆಯಿದೆ. ಆಸಕ್ತರು ರಾಮಕೃಷ್ಣನಗರದ ಆಂದೋಲನ ಸರ್ಕಲ್‌ ಬಳಿಯ ಮುಡಾ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆ ಭೇಟಿ ನೀಡಿ ಭಾಗಿಯಾಗಬಹುದು’ ಎಂದರು.

ಶತಕದತ್ತ ‘ಪುಸ್ತಕ ವಿಮರ್ಶೆ’

‘ಪುಸ್ತಕ ಮಾರಾಟ ಹೆಚ್ಚಿಸಬೇಕೆಂದರೆ ಜನರಲ್ಲಿ ಓದುವ ಅಭಿರುಚಿ ಪ್ರವೃತ್ತಿ ಹೆಚ್ಚಿಸಬೇಕು ಎಂಬ ಸ್ನೇಹಿತರ ಸಲಹೆಯಂತೆ ಚಿಂತನ ಚಿತ್ತಾರ ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ‘ಪುಸ್ತಕ ಓದು ವಿಮರ್ಶೆ’ ಎಂಬ ತಿಂಗಳ ಕಾರ್ಯಕ್ರಮ ಆಯೋಜಿಸಿದೆ. ಇಂದು ಶತಕದ ಸನಿಹಕ್ಕೆ ಬಂದಿದೆ’ ಎಂದು ಚಿತ್ತಣ್ಣನವರ್‌ ತಿಳಿಸಿದರು. ‘ಪ್ರಮುಖ ಸಾಹಿತಿ ವಿಮರ್ಶಕರನ್ನು ಕರೆಸಿ ಪ್ರತಿ ತಿಂಗಳು ಒಂದು ಪುಸ್ತಕದ ಕುರಿತು ವಿಮರ್ಶೆ ಕಾರ್ಯಕ್ರಮ ನಡೆಸಿದೆವು. ಓದುಗರು ಪುಸ್ತಕ ಕೊಳ್ಳುವವರ ಸಂಖ್ಯೆಯು ಹೆಚ್ಚಿತು. ಇಂದು 97 ಪುಸ್ತಕಗಳ ವಿಮರ್ಶೆ ನಡೆದಿದ್ದು ಕೋವಿಡ್‌ನಲ್ಲಿ ಸ್ಥಗಿತಗೊಂಡಿತು. ಶತಕ ತಲುಪಿಸುವ ಯೋಜನೆಯಿದೆ. ಪುಸ್ತಕಗಳನ್ನು ಜನರತ್ತ ತಲುಪಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಶೀಘ್ರದಲ್ಲೇ ಕಾರ್ಯಗತಗೊಳಿಸುತ್ತೇನೆ’ ಎಂದು ಉತ್ಸಾಹ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT