ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಸಮಾನತೆ ನೀಡಿದ ಅಂಬೇಡ್ಕರ್‌

‘ಭೀಮರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹದೇವ
Published 24 ಏಪ್ರಿಲ್ 2024, 16:21 IST
Last Updated 24 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಹೆಣ್ಣು ಮಕ್ಕಳ ಸ್ಥಿತಿಯನ್ನು ಕಂಡು ಮರುಗಿದ್ದರು. ಹಾಗಾಗಿಯೇ ಸಂವಿಧಾನದ ಮೂಲಕ ಎಲ್ಲ ವರ್ಗದವರಿಗೂ ಸಮಾನತೆ ನೀಡಿದರು’ ಎಂದು ಒಡಿಶಾ ಭುವನೇಶ್ವರದ ಎಎಸ್‌ಬಿಎಂ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಹಾದೇವ ಸ್ಮರಿಸಿದರು.

ಜನಪರ ಸಾಹಿತ್ಯ ಪರಿಷತ್ತು, ನಟರಾಜ ಪ್ರತಿಷ್ಠಾನ ಹಾಗೂ ವಾತ್ಸಲ್ಯ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಇಲ್ಲಿನ ನಟರಾಜ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಬಿ.ಆರ್‌. ಅಂಬೇಡ್ಕರ್‌ ಜಯಂತಿ ಮತ್ತು ಭೀಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರ ಚಿಂತನೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ಚಿಂತನೆಯನ್ನು ರಾಜಕಾರಣಿಗಳು, ವಿದ್ಯಾವಂತರು ಮತ್ತು ಅವಿದ್ಯಾವಂತರೆಲ್ಲರೂ ನೆನೆಯಬೇಕು. ಏಕೆಂದರೆ ಜಾತ್ಯತೀತವಾಗಿ ಎಲ್ಲರೂ ಈಗ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುತ್ತಿದ್ದಾರೆ’ ಎಂದರು.

‘ಅಂಬೇಡ್ಕರ್ ಜನ್ಮದಿನವನ್ನು ಎಲ್ಲ ವರ್ಗದವರೂ ಜಾತ್ಯತೀತವಾಗಿ ಆಚರಿಸಬೇಕು. ಮಹಿಳೆಯರು ಸೇರಿದಂತೆ ನೊಂದವರ ಪರವಾಗಿ ನಿಂತವರು ಅವರಷ್ಟೆ. ಹೀಗಾಗಿ ಅವರ ಚಿಂತನೆಗಳನ್ನು ನಾವು ಪ್ರಚಾರ ಮಾಡಬೇಕೇ ಹೊರತು ತಿರಸ್ಕರಿಸಬಾರದು’ ಎಂದು ತಿಳಿಸಿದರು.

ಸಾಧಕರನ್ನು ಅಭಿನಂದಿಸಿದ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಬಸಪ್ಪ ಮಾತನಾಡಿ, ‘ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ನೀಡಿದ್ದು ಅಂಬೇಡ್ಕರ್‌. ಬಡತನ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಧೀಮಂತ ನಾಯಕ’ ಎಂದು ಸ್ಮರಿಸಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಬೆಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಮಾತನಾಡಿ, ‘ನಾವು ಜಾತಿ–ಧರ್ಮವನ್ನು ಮೀರಿ ಬದುಕಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದಲ್ಲಿ ಬದುಕಲು ನಾವು ಅನರ್ಹರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್‌. ಶಿವರಾಜಪ್ಪ, ಜನಪರ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬಿ. ರವಿ ಮಾತನಾಡಿದರು.

ಯಶಸ್ವಿನಿ ಗಿರೀಶ್‌ (ಯುವ ಪ್ರತಿಭೆ), ಚಂದ್ರಕಲಾ (ಸಂಘಟನೆ), ಪದ ದೇವರಾಜ್ (ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ) ಅವರನ್ನು ಸನ್ಮಾನಿಸಲಾಯಿತು.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಪ್ರಶಸ್ತಿ ಪ್ರದಾನ ಮಾಡಿದರು. ಜನಪರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ. ಮಹೇಶ್‌ ಚಿಕ್ಕಲ್ಲೂರು, ವಾತ್ಸಲ್ಯ ಬಿ.ಇಡಿ. ಕಾಲೇಜು ಪ್ರಾಂಶುಪಾಲ ಮಹೇಶ್‌ ದಳಪತಿ ಮುಖ್ಯ ಅತಿಥಿಯಾಗಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಸ್ಪಂದನಾ ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ, ಹರದನಹಳ್ಳಿ ನಂಜುಂಡಸ್ವಾಮಿ, ಮಾದಪ್ಪ, ಬಸವರಾಜು, ಜನಪರ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT