ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಅರಣ್ಯ: ಆನೆ ಕಾರ್ಯಪಡೆ ರಚನೆ

ಸಚಿವ ಈಶ್ವರ ಖಂಡ್ರೆ ಅಭಿಮತ; ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ ಕಾಮಗಾರಿ ಪರಿಶೀಲನೆ
Published 23 ಜನವರಿ 2024, 22:00 IST
Last Updated 23 ಜನವರಿ 2024, 22:00 IST
ಅಕ್ಷರ ಗಾತ್ರ

ನಂಜನಗೂಡು (ಮೈಸೂರು ಜಿಲ್ಲೆ): ‘ಬಂಡೀಪುರ ಅರಣ್ಯದಲ್ಲಿ ಅತಿ ಹೆಚ್ಚು ಆನೆಗಳಿದ್ದು, ಕಾಡಂಚಿನ ಗ್ರಾಮಗಳಲ್ಲಿ ಬೆಳೆ ನಾಶ ಹಾಗೂ ಜನರ ಪ್ರಾಣ ಹಾನಿ ತಪ್ಪಿಸಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಹೆಡಿಯಾಲ ಸಮೀಪದ ಓಂಕಾರ ಅರಣ್ಯ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವರು ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್‌ಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.

‘ರಾಜ್ಯದಲ್ಲಿ ಪ್ರತಿವರ್ಷ 50ರಿಂದ 60 ಮಂದಿ ಕಾಡುಪ್ರಾಣಿಗಳ ದಾಳಿಯಿಂದ ಮೃತಪಡುತ್ತಿದ್ದಾರೆ. ಆನೆ, ಹುಲಿ ಮುಂತಾದ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬರದಂತೆ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗುವುದು. 660 ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ ಅಳವಡಿಸಬೇಕಾಗಿದ್ದು, ಈಗಾಗಲೇ 312 ಕಿ.ಮೀ ವ್ಯಾಪ್ತಿಯಲ್ಲಿ ಅಳವಡಿಕೆ ಕಾರ್ಯ ಮುಗಿದಿದೆ. 120 ಕಿ.ಮೀ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಉಳಿದ 220 ಕಿ.ಮೀ ವ್ಯಾಪ್ತಿಯಲ್ಲಿ ರೈಲು ಕಂಬಿಗಳ ತಡೆಗೋಡೆ ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ₹200 ಕೋಟಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ವನ್ಯಜೀವಿ– ಮಾನವ ಸಂಘರ್ಷ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಹೆಡಿಯಾಲ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಚಿವರ ಗಮನ ಸೆಳೆದ ಗ್ರಾಮಸ್ಥರು, ‘ಆನೆ ದಾಳಿಯಿಂದ ಬೆಳೆ ಹಾನಿಯಾದರೆ ಪರಿಹಾರ ದೊರಕುತ್ತದೆ. ಆದರೆ, ಜಿಂಕೆ, ಕಾಡುಹಂದಿಗಳಿಂದ ಹೆಚ್ಚಿನ ಬೆಳೆ ನಾಶವಾದರೂ ಅರಣ್ಯಾಧಿಕಾರಿಗಳು ಕಡಿಮೆ ಪ್ರಮಾಣದ ಹಾನಿ ತೋರಿಸಿ ವಂಚಿಸುತ್ತಿದ್ದಾರೆ’ ಎಂದು ದೂರಿದರು.

ಪ್ರತಿಕ್ರಿಯಿಸಿದ ಸಚಿವರು, ‘ನಿಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು ಬಗೆಹರಿಸಲಾಗುವುದು’ ಎಂದರು.

‘ಆರ್.ಧ್ರುವನಾರಾಯಣ ಹಾಗೂ ಮಹದೇವ ಪ್ರಸಾದ್ ಬದುಕಿದ್ದರೆ ಸಂಪುಟ ದರ್ಜೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಮಕ್ಕಳಾದ, ಶಾಸಕರಾದ ದರ್ಶನ್‌ ಧ್ರುವನಾರಾಯಣ ಹಾಗೂ ಗಣೇಶ್‌ ಪ್ರಸಾದ್‌ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ. ಈ ಇಬ್ಬರ ಆಶಯದಂತೆ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ದೊರಕಿಸಲಾಗುತ್ತಿದೆ’ ಎಂದು ಹೇಳಿದರು.

ತಾಲ್ಲೂಕಿನ ಬಳ್ಳೂರು ಹುಂಡಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಮೃತಪಟ್ಟ ರತ್ನಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶಾಸಕರಾದ ದರ್ಶನ್ ಧ್ರುವನಾರಾಯಣ, ಗಣೇಶ್ ಪ್ರಸಾದ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕೇಡ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್, ಕಾಂಗ್ರೆಸ ಮುಖಂಡ ಕಳಲೆ ಕೇಶವಮೂರ್ತಿ ಉಪಸ್ಥಿತರಿದ್ದರು.

ನಂಜನಗೂಡು ತಾಲ್ಲೂಕಿನ ಹೆಡಿಯಾಲ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕಾಡಂಚಿನ ಗ್ರಾಮಗಳ ರೈತರ ಆಹವಾಲು ಆಲಿಸಿದರು
ನಂಜನಗೂಡು ತಾಲ್ಲೂಕಿನ ಹೆಡಿಯಾಲ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕಾಡಂಚಿನ ಗ್ರಾಮಗಳ ರೈತರ ಆಹವಾಲು ಆಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT