ಮೈಸೂರು/ಮಂಡ್ಯ/ರಾಮನಗರ: ಬೆಂಗಳೂರು-ಮೈಸೂರು ನಡುವಿನ ಆರು ಪಥದ ಎಕ್ಸ್‌ಪ್ರೆಸ್ ವೇಗೆ ಸಮನಾಂತರವಾಗಿ ಅಷ್ಟೇ ಉದ್ದದ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ಆರು ಪಥಕ್ಕೆ ಕೊಟ್ಟಷ್ಟು ಆದ್ಯತೆ ನೀಡಿಲ್ಲ. ಅಲ್ಲಲ್ಲಿ ನಿರ್ಮಾಣ ನಡೆದಿರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಸರ್ವೀಸ್ ರಸ್ತೆ ಬದಿಯಲ್ಲಿರುವ ಚರಂಡಿ ರಸ್ತೆಗಿಂತ ಎತ್ತರದಲ್ಲಿದ್ದು, ಮಳೆ ನೀರು ಕೆಳಸೇತುವೆಯತ್ತ ನುಗ್ಗುವ ಆತಂಕ ಗ್ರಾಮಸ್ಥರಲ್ಲಿದೆ. ‘ಇದು ದಶಪಥ ಹೆದ್ದಾರಿಯಲ್ಲ, ಆರೇ ಪಥದ ರಸ್ತೆ. ಸರ್ವೀಸ್ ರಸ್ತೆ ಲೆಕ್ಕಕ್ಕಿಲ್ಲ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾತಿಗೆ ತಕ್ಕಂತೆಯೇ ಕಾಮಗಾರಿಗಳು ನಡೆದಿವೆ.
ಬೆಂಗಳೂರು ಕಡೆಯಿಂದ ಬರುವವರು ಕಣಮಿಣಕಿ ಟೋಲ್ ದಾಟಿ ಮುಂದೆ ಬಂದರೆ ಸರ್ವೀಸ್ ರಸ್ತೆಯೇ ಇಲ್ಲ. ಅದಕ್ಕೆ ಭೂವಿವಾದ ಕಾರಣ. ಹೀಗಾಗಿ ಮತ್ತೆ ಈ ರಸ್ತೆ ಎಕ್ಸ್‌ಪ್ರೆಸ್ ವೇ ಜೊತೆ ಕೂಡಿಕೊಳ್ಳುತ್ತದೆ. ಟೋಲ್ ಕಟ್ಟಿದವರು, ಕಟ್ಟದವರೆಲ್ಲರೂ ಒಂದೇ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ರಾಮನಗರ ಜಿಲ್ಲೆಯ ಹೆಜ್ಜಾಲ, ಶೇಷಗಿರಿಹಳ್ಳಿ, ತಿಟ್ಟಮಾರನಹಳ್ಳಿಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಗಳು ಅಪೂರ್ಣವಾಗಿವೆ.
ಸರ್ವೀಸ್ ರಸ್ತೆಗಳಲ್ಲಿ ಬಸ್ ತಂಗುದಾಣ, ಶಾಲೆಗಳಿರುವೆಡೆ ಸ್ಕೈವಾಕ್ ಸೌಕರ್ಯವಿಲ್ಲ. ಬೈಪಾಸ್ ರಸ್ತೆಗಳಲ್ಲಿ ಶೌಚಾಲಯವಿಲ್ಲ. ಇಡೀ ಹೆದ್ದಾರಿಗೆ ಎರಡು ಆಂಬುಲೆನ್ಸ್ ಸೇವೆ ಒದಗಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಹೈವೆ ಗಸ್ತು ಆರಂಭವಾಗಿಲ್ಲ. ಅಪಘಾತಕ್ಕೀಡಾದರೆ ತುರ್ತು ಸ್ಪಂದನೆಗೆ ಬಹಳ ಸಮಯ ಕಾಯಬೇಕು!
ಚರಂಡಿ ನಿರ್ಮಾಣ ಅವೈಜ್ಞಾನಿಕವಾಗಿದ್ದು ನೀರು ರಸ್ತೆಯಲ್ಲೇ ಹರಿದು ಕೆಳಸೇತುವೆಯಲ್ಲಿ ನಿಲ್ಲುವ ಅಪಾಯವಿದೆ. ‘ರಸ್ತೆಗೂ ಮೊದಲೇ ಚರಂಡಿ ನಿರ್ಮಿಸಿದ್ದು ಅವಾಂತರಕ್ಕೆ ಕಾರಣ’ ಎನ್ನುತ್ತಾರೆ ಸ್ಥಳೀಯರು.
ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಕೆಳಸೇತುವೆಗಿಂತ ರಸ್ತೆಯೇ ಎತ್ತರದಲ್ಲಿದ್ದು, ರಸ್ತೆಗಿಂತಲೂ ಚರಂಡಿ ಎತ್ತರದಲ್ಲಿದೆ. ನೀರು ಎಲ್ಲಿ ಹರಿಯಬೇಕೆಂಬ ಪ್ರಶ್ನೆಗೆ ಉತ್ತರವಿಲ್ಲ.
‘ಬೂದನೂರು ಬಳಿ ಎರಡು ಕೆಳ ಸೇತುವೆಗಳು ಸರ್ವೀಸ್ ರಸ್ತೆಗಿಂತಲೂ ಕೆಳಮಟ್ಟದಲ್ಲಿವೆ. ಪಕ್ಕದ ಚರಂಡಿ ರಸ್ತೆಗಿಂತ ಎತ್ತರದಲ್ಲಿದೆ. ಮಳೆ ನೀರು ಕೆಳ ಸೇತುವೆಯಲ್ಲಿ ತುಂಬಿಕೊಂಡು ಹಳ್ಳಿಗಳ ಸಂಪರ್ಕ ತಪ್ಪುವ ಅಪಾಯವಿದೆ’ ಎಂದು ಗ್ರಾಮಸ್ಥರು ದೂರಿದ ಬಳಿಕ, ರಸ್ತೆಯ ಮಣ್ಣು ತೆಗೆದು ಎತ್ತರ ತಗ್ಗಿಸುವ ಪ್ರಯತ್ನ ನಡೆದಿದೆ. ಚರಂಡಿ ಮಾತ್ರ ಮೇಲ್ಮಟ್ಟದಲ್ಲೇ ಇದೆ.
‘ಬೆಂಗಳೂರಿನಿಂದ ಮೈಸೂರಿನವರೆಗೂ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪೂರ್ವ ಮುಂಗಾರು ಸಮೀಪಿಸುತ್ತಿದ್ದು ಚರಂಡಿ ಅವ್ಯವಸ್ಥೆ ಆಗ ಗೊತ್ತಾಗುತ್ತದೆ. ಅಕ್ಟೋಬರ್‌ನಲ್ಲಿ ಮಳೆ ಸುರಿದಾಗಲೇ ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಈಗ ಹೆದ್ದಾರಿಗೆ ತೊಂದರೆಯಾಗದು. ಆದರೆ, ಮಳೆಗಾಲದಲ್ಲಿ ಸರ್ವೀಸ್ ರಸ್ತೆ ಜಲಾವೃತಗೊಳ್ಳುತ್ತದೆ’ ಎಂದು ಗ್ರಾಮಸ್ಥ ರಮೇಶ್ ಆತಂಕ ವ್ಯಕ್ತಪಡಿಸಿದರು.
ಹೆದ್ದಾರಿಯುದ್ದಕ್ಕೂ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು ಆರಂಭ, ಅಂತ್ಯವೇ ಇಲ್ಲ. ಕೆಲ ಚರಂಡಿಗಳನ್ನು ನಾಲೆಗೆ ಸಂಪರ್ಕಿಸಿರುವುದೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಪೂರ್ಣ ಹೆದ್ದಾರಿಯಲ್ಲೇ ಪ್ರಧಾನಿ ಪ್ರಯಾಣ
ಮಾರ್ಚ್ 12ರಂದು ದಶಪಥ ಉದ್ಘಾಟನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಮಂಡ್ಯ ಜಿಲ್ಲೆಯ ಬೂದನೂರು ಗ್ರಾಮದ ಬಳಿ ಅಪೂರ್ಣ ಹೆದ್ದಾರಿಯಲ್ಲೇ ಪ್ರಯಾಣಿಸಿದ್ದರು. ರಾತ್ರೋರಾತ್ರಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಡಾಂಬರು ಹಾಕಲಾಗಿತ್ತು. ಒಂದು ಬದಿಯಷ್ಟೇ ಕಾಮಗಾರಿ ಮುಗಿಸಿ ಬಲಭಾಗದ ಕೆಲಸವನ್ನು ಬಾಕಿ ಉಳಿಸಲಾಗಿತ್ತು.
‘ಈಗ ಸಿಮೆಂಟ್ ಬ್ಲಾಕ್‌ಗಳು ಕುಸಿದು ಬೀಳುತ್ತಿವೆ. ಬ್ಲಾಕ್‌ಗಳ ನಡುವೆ ದೊಡ್ಡ ಬಿರುಕುಗಳು ಕಾಣಿಸುತ್ತಿದ್ದು ಕಳಪೆ ಕಾಮಗಾರಿ ಮಾಡಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆಯಲ್ಲಿ ಮೋರಿ ನೀರು!
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಮತ್ತು ನಾಗನಹಳ್ಳಿಯಲ್ಲಿ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ, ಸರ್ವೀಸ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ.
ಸಿದ್ದಲಿಂಗಪುರದಲ್ಲಿ ಚರಂಡಿ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ. ಸರ್ವಿಸ್ ರಸ್ತೆಯೂ ಸಮರ್ಪಕವಾಗಿಲ್ಲ.
ಸರ್ವಿಸ್ ರಸ್ತೆಯು ಚಿಕ್ಕದಾಗಿರುವುದರಿಂದ ಸುರಕ್ಷತೆ ಇಲ್ಲ. ಸಮೀಪದಲ್ಲಿಯೇ ಗದ್ದೆಗಳಿದ್ದು, ವಾಹನಗಳು ವೇಗ ತಗ್ಗಿಸುವ ಭರದಲ್ಲಿ ಅಪಘಾತಕ್ಕೀಡಾಗುವ ಸಾಧ್ಯತೆಯೂ ಇದೆ.
‘ನಾಗನಗಳ್ಳಿ ಬಳಿ ಅವೈಜ್ಞಾನಿಕವಾಗಿರುವ ಕೆಳಸೇತುವೆಯಲ್ಲಿ ಮಳೆ ನೀರು ನಿಂತು, ಸೇವಾ ರಸ್ತೆ ಬಳಸುವವರಿಗೆ ತೊಂದರೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಸ್ಥಳೀಯರು.
***
ಇನ್ನೆರಡು ತಿಂಗಳಲ್ಲಿ
ಎಕ್ಸ್‌ಪ್ರೆಸ್ ವೇನ ಮೂಲ ಯೋಜನೆಯಲ್ಲಿ ಇಲ್ಲದಿದ್ದರೂ ಬೈಪಾಸ್‌ಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಅವ್ಯವಸ್ಥೆ ಸರಿಪಡಿಸಲಾಗುವುದು.
–ಶ್ರೀಧರ್, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
***
ಅನಾನುಕೂಲವೇ ಹೆಚ್ಚು
ಬೆಂಗಳೂರು- ಮೈಸೂರು ನಡುವೆ ಓಡಾಡುವವರನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಈ ಹೆದ್ದಾರಿ ಮಾಡಲಾಗಿದೆ. ಸರ್ವೀಸ್ ರಸ್ತೆ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಸ್ಥಳೀಯರಿಗೆ ಇದರಿಂದ ಅನಾನುಕೂಲವೇ ಹೆಚ್ಚು.
–ವೆಂಕಟೇಶ್, ರಾಮನಗರ ನಿವಾಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.