ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಬಾಲರಾಮನಿಗೆ ಭರತನಾಟ್ಯ ಸೇವೆ

25ರಂದು ಅಯೋಧ್ಯೆಯಲ್ಲಿ ವಸುಂಧರಾ ದೊರೆಸ್ವಾಮಿ ಮತ್ತು ಶಿಷ್ಯರಿಂದ ಕಾರ್ಯಕ್ರಮ
Published 22 ಜನವರಿ 2024, 5:51 IST
Last Updated 22 ಜನವರಿ 2024, 5:51 IST
ಅಕ್ಷರ ಗಾತ್ರ

ಮೈಸೂರು: ‘ಅಯೋಧ್ಯೆಯ ಶ್ರೀರಾಮಮಂದಿರದ ಆವರಣದಲ್ಲಿ ನೃತ್ಯ ಸೇವೆ ನೀಡುವ ಅವಕಾಶ ಒದಗಿಬಂದಿದೆ. ನನ್ನ ಆರು ಮಂದಿ ಶಿಷ್ಯರೊಂದಿಗೆ ಜ.25ರ ಸಂಜೆ 45 ನಿಮಿಷ ಪ್ರದರ್ಶನ ನೀಡಲಿದ್ದೇನೆ. ಭರತನಾಟ್ಯದೊಂದಿಗೆ ಬಾಲರಾಮನನ್ನು ನೋಡುವ ಭಾಗ್ಯ ನನ್ನದಾಗಿದೆ...’

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ಕಲಾವಿದೆ, ನಗರದ ವಸುಂಧರಾ ದೊರೆಸ್ವಾಮಿ ಅವರ ನುಡಿಗಳಿವು.

ಬೆಂಗಳೂರಿನಲ್ಲಿರುವ ಆರು ಶಿಷ್ಯರೊಂದಿಗೆ ನೃತ್ಯ ಪ್ರದರ್ಶನಕ್ಕೆ ಸಿದ್ಧತೆಯನ್ನು ನಡೆಸಿರುವ ಅವರು, ನಿತ್ಯ 6 ಗಂಟೆ ಅಭ್ಯಾಸ ಮಾಡುತ್ತಿದ್ದಾರೆ. 24ರಂದು ಅಯೋಧ್ಯೆಗೆ ಹೋಗಲಿದ್ದು, ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ಜ.22ರಂದು ಮಂದಿರದ ಪ್ರಾಣಪ್ರತಿಷ್ಠಾಪನೆ ನಂತರ ಜ.28ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇಶದ ಶಾಸ್ತ್ರೀಯ ನೃತ್ಯ ಕಲೆಯಾದ ಭರತನಾಟ್ಯ ಪ್ರದರ್ಶನ ನೀಡುವ ಅವಕಾಶ, ರಾಜ್ಯದಿಂದ ನನಗೆ ಬಂದಿರುವುದನ್ನು ನೆನೆದರೆ ಈಗಲೂ ನಂಬಲಿಕ್ಕಾಗದು. ಕೋಟ್ಯಂತರ ಜನರು ಬೆರಗುಗಣ್ಣಿನಿಂದ ನೋಡುತ್ತಿರುವ ಅಪೂರ್ವ ಸಂದರ್ಭದಲ್ಲಿ ರಾಮನಿಗೆ ನೃತ್ಯಾಂಜಲಿ ಸಮರ್ಪಿಸುತ್ತಿದ್ದೇನೆ. ಇದು ಗುರು–ಹಿರಿಯರ ಆಶೀರ್ವಾದದ ಫಲ. ಜನ್ಮ ಸಾರ್ಥಕವೆನಿಸಿದೆ’ ಎಂದರು.

‘ಜ.1ರಂದೇ ಮನೆಗೆ ಕರೆ ಬಂದಿತ್ತು. ಆಸ್ಟ್ರೇಲಿಯಾದ ಸಿಡ್ನಿಗೆ ಕಾರ್ಯಕ್ರಮ ನೀಡಲು ಹೋಗಿದ್ದೆ. ನಂತರ ವಾಪಸು ಬಂದಾಗ ವಾದ್ಯಕಾರರೊಂದಿಗೆ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡುವಂತೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯವರು ಸಂಪರ್ಕಿಸಿದ್ದರು. ನಾನು ಮಾತ್ರ ರಾಮನ ಎದುರು ನೃತ್ಯ ಮಾಡುವುದಕ್ಕಿಂತಲೂ, ವಾದ್ಯಕಾರರ ಬದಲು, ಆಡಿಯೊ ಸಹಾಯದಿಂದ ನನ್ನ 6 ಶಿಷ್ಯರೊಂದಿಗೆ ಮಾಡುತ್ತೇನೆಂದೆ. ಅದಕ್ಕೆ ಒಪ್ಪಿದರು’ ಎಂದು ಹೇಳಿದರು. 

‘ಮೊದಲು ಮೇಳಪ್ರಾಪ್ತಿಯಲ್ಲಿ ‘ಸಂಪೂರ್ಣ ರಾಮಾಯಣ’ದ ಏಕೀಶ್ಲೋಕ ರಾಮಾಯಣ, ಯೋಗಾಸನಗಳನ್ನು ಸೇರಿಸಿಕೊಂಡು ರಾಮಾಯಣದ ಬಾಲಕಾಂಡ‌ದಿಂದ ‘ರಾಮನಾಮ ಯೋಗ ನೃತ್ಯಾಂಜಲಿ’ ಮಾಡುತ್ತಿದ್ದೇವೆ. ನಂತರ ಯೋಗನರಸಿಂಹ ಅವರ ಕೃತಿ ‘ಬರುತಿಹನೆ ನೋಡೆ ಶ್ರೀರಾಮ’, ಮಂಗಳಕ್ಕೆ ರಾಮದಾಸರ ‘ರಾಮಚಂದ್ರ ಜನಕರಾಜ’ ಕೃತಿಗೆ ನೃತ್ಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. 

ವಸುಂಧರಾ ದೊರೆಸ್ವಾಮಿ
ವಸುಂಧರಾ ದೊರೆಸ್ವಾಮಿ

‘ಶಿಷ್ಯೆ ಡಾ.ಲಕ್ಷ್ಮಿರೇಖಾ ಅರುಣ್‌ 35 ವರ್ಷಗಳಿಂದ ನನ್ನಲ್ಲಿ ಕಲಿಯುತ್ತಿದ್ದಾಳೆ. ದಂತವೈದ್ಯೆಯಾಗಿರುವ ಆಕೆ ನಾಟ್ಯ ಸ್ಕೂಲ್ ಆಫ್‌ ಡ್ಯಾನ್ಸ್‌ ಸ್ಥಾಪಿಸಿದ್ದಾರೆ. ವಿಭಾ ದಿವಾಕರ್, ದೀಪ್ತಿ ಆದಿಶೇಷ್‌, ಮೈತ್ರೇಯಿ ಗುರುರಾಜ್ ಎಂಜಿನಿಯರುಗಳಾಗಿದ್ದು, ಬೆಂಗಳೂರಿನಲ್ಲಿ ನೃತ್ಯ ಶಾಲೆಗಳನ್ನೂ ನಡೆಸುತ್ತಿದ್ದಾರೆ. ಸಿ.ಸುಜಯ್‌ ಶಾನಭಾಗ್‌ ಹುಬ್ಬಳಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. ಮೈಸೂರಿನ ಎಸ್‌.ಪಿ.ಸೌಂದರ್ಯ ನನ್ನ ಸೋದರ ಸೊಸೆ. 18 ವರ್ಷಗಳಿಂದ ನನ್ನಲ್ಲಿ ಕಲಿಯುತ್ತಿದ್ದಾರೆ’ ಎಂದರು.

‘ವಸುಂಧರಾ ಬಾನಿ ಶೈಲಿಯಲ್ಲಿಯೇ ನೃತ್ಯ ಪ್ರಸ್ತುತ ಪಡಿಸುತ್ತಿರುವೆ. ಶಿಷ್ಯರು ಬೆಂಗಳೂರಿನಲ್ಲಿದ್ದರಿಂದ ಅಲ್ಲಿಗೇ ಹೋಗಿ ಅವರೊಂದಿಗೆ ಅಭ್ಯಾಸ ನಡೆಸಿದ್ದೇನೆ. ಎಲ್ಲ ತಯಾರಿಯೂ ಮುಗಿದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT