ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಲಪಂಥೀಯತೆ ಅಲ್ಪಕಾಲಿಕ: ನಟ ಪ‍್ರಕಾಶ್‌ರಾಜ್‌

ಭೀಮಾ ಕೋರೆಗಾಂವ್‌ ವಿಜಯೋತ್ಸವ, ದಲಿತರ ಸ್ವಾಭಿಮಾನ ಜಾಗೃತಿ ದಿನಾಚರಣೆ
Published : 1 ಜನವರಿ 2023, 16:32 IST
ಫಾಲೋ ಮಾಡಿ
Comments

ಮೈಸೂರು: ‘ಬಲಪಂಥೀಯ ದೌರ್ಜನ್ಯಗಳು ಅಲ್ಪಕಾಲಿಕ. ಇಂಥ ಆಳ್ವಿಕೆಗಳು ಆಗಾಗ ಬಂದು ಹೋಗುತ್ತಿರುತ್ತವೆ. ಭೀಮಾ ಚೈತನ್ಯದ ಮುಂದೆ ಅದು ನಿಲ್ಲದು’ ಎಂದು ನಟ ಪ್ರಕಾಶ್‌ರಾಜ್‌ ಹೇಳಿದರು.

ಜೈಭೀಮ್‌ ಸ್ಪೋರ್ಟ್ಸ್‌ ಕ್ಲಬ್‌, ಡ್ರೀಮ್‌ ಬಾಯ್ಸ್‌ ಸ್ಪೋರ್ಟ್ಸ್‌ ಕ್ಲಬ್‌, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಹಲವು ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಜಯನಗರ ರೈಲ್ವೆ ಗೇಟ್‌ ಬಳಿ ಜೈ ಭೀಮಾ ಕೋರೆಗಾಂವ್‌ ವಿಜಯೋತ್ಸವ ಸಮಿತಿ ಭಾನುವಾರ ಆಯೋಜಿಸಿದ್ದ ವಿಜಯೋತ್ಸವ, ದಲಿತರ ಸ್ವಾಭಿಮಾನ ಜಾಗೃತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇತಿಹಾಸ ಅರಿತವರಿಗಷ್ಟೇ ಇತಿಹಾಸ ಸೃಷ್ಟಿಸಲು ಸಾಧ್ಯ. ದೇಶದಲ್ಲೀಗ ಇತಿಹಾಸವಿಲ್ಲದವರು, ಇತಿಹಾಸ ಅರಿತು, ಅದನ್ನು ತಿರುಚುತ್ತಿದ್ದಾರೆ. ಸ್ವಾಭಿಮಾನದ ಪ್ರತೀಕವಾದ ಕೋರೆಗಾಂವ್‌ ವಿಜಯದ ಇತಿಹಾಸವನ್ನು ತಿರುಚಿದರು. ಜೈಲಿಗೆ ಹಾಕಿದರು. ಆದರೆ, ಅದೆಲ್ಲ ಸುಳ್ಳು ಎಂಬುದು ಈಗ ಸಾಬೀತಾಗಿದೆ. ಸುಳ್ಳನ್ನು ಸಾವಿರ ಬಾರಿ ಹೇಳಿ, ಸತ್ಯವಾಗಿಸುವ ಹುನ್ನಾರವು ಗೂಬೆಯ ಮೇಲೆ ಕುಳಿತು ಸಾವರ್ಕರ್‌ ಜೈಲಿನಿಂದ ಲೋಕ ಸುತ್ತಿದ ಸುಳ್ಳಿನಂತೆ ಎಲ್ಲವೂ ಕಳಚಿಕೊಳ್ಳಲಿದೆ. ಆದರೆ, ಭೀಮಾ ಚೈತನ್ಯದ ಚರಿತ್ರೆಯನ್ನು ಯಾರಿಂದಲೂ ತಿರುಚಲಾಗದು’ ಎಂದರು.

‘ಇವರೆಲ್ಲ ಸೆಲ್ಫಿ ಪಕ್ಷಗಳು. ಈ ಬಲಪಂಥೀಯರನ್ನು ವಲ್ಲಭಭಾಯ್‌ ಪಟೇಲರು ಬಹಿಷ್ಕರಿಸಿ, ಗಡೀಪಾರು ಮಾಡಿದ್ದರು. ಆದರೂ ಅವರು ಸುಳ್ಳು ಹೇಳುತ್ತಾ, ಜನರ ತೆರಿಗೆಯ ₹3ಸಾವಿರ ಕೋಟಿ ವೆಚ್ಚದಲ್ಲಿ ಪಟೇಲ್ ಭವ್ಯ ಪ್ರತಿಮೆ ಸ್ಥಾಪಿಸಿ ಸೆಲ್ಫಿ ತೆಗೆದುಕೊಂಡು ಸಮಾಧಾನಪಟ್ಟುಕೊಂಡರು’ ಎಂದು ಟೀಕಿಸಿದರು.

‘ನೀನು ಸಿನಿಮಾ ನಟ, ಬೇಕಾದ್ದೆಲ್ಲ ಇದೆ, ನಿನಗೆ ಇದೆಲ್ಲ ಯಾಕೆ, ನಿನ್ನ ಸಿನಿಮಾ, ಹಾಡು ಕಡಿಮೆ ಮಾಡುತ್ತಿದ್ದಾರೆ ಎಂದು ಅನೇಕರು ಕೇಳುತ್ತಾರೆ. ತ್ಯಾಗಕ್ಕೆ ಹೆದರದ ಶ್ರೀಮಂತ ನಾನು. ಅಂಬೇಡ್ಕರ್‌ ನನ್ನ ಶ್ರೀಮಂತಿಕೆ. ಲಂಕೇಶ್‌, ಕುವೆಂಪು, ತೇಜಸ್ವಿ ಇವರೇ ನನ್ನ ಶ್ರೀಮಂತಿಕೆ. ಇಂಥ ಸ್ವಾಭಿಮಾನದ ಕಾರ್ಯಕ್ರಮ, ಭೀಮಾ ಚೈತನ್ಯದಲ್ಲಿ ಪಾಲ್ಗೊಳ್ಳುವುದೇ ಶ್ರೀಮಂತಿಕೆ’ ಎಂದು ಪ್ರತಿಪಾದಿಸಿದರು.

ಮುಖಂಡ ಪುರುಷೋತ್ತಮ್‌ ಮಾತನಾಡಿ, ‘ಪರಿಶಿಷ್ಟರು ಮುಂದಿನ ಚುನಾವಣೆಯಲ್ಲಿ, ಹಿಂದೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು’ ಎಂದರು.

ಲೇಖಕ ಓ.ಎಲ್‌.ನಾಗಭೂಷಣ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ನಳಂದಾ ಬೌದ್ಧಪೀಠದ ಬೋಧಿಬಂತೇಜಿ, ಚಿಂತಕ ಪ್ರೊ.ಕಾಳೇಗೌಡ ನಾಗವಾರ, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್‌.ಉಮೇಶ್‌, ಸಮಾಜ ಸೇವಕ ಆರ್‌.ಸಿ.ಮಹೇಶ್‌, ನಿವೃತ್ತ ಪೊಲೀಸ್‌ ಅಧಿಕಾರಿ ಪಿ.ಎಂ.ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT