ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿಯಿಂದ ಲಕ್ಷ ಲಕ್ಷ ಲುಕ್ಸಾನು; ಭವಿಷ್ಯವೂ ಆತಂಕ

ತರಕಾರಿ ಬೆಳೆಗಾರರು ಕಂಗಾಲು
Last Updated 17 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಬೇಸಿಗೆಯ ಬಿರು ಬಿಸಿಲಲ್ಲೂ ಬಂಪರ್‌ ಬೆಳೆ ಬಂದಿತ್ತು. ಕೈತುಂಬಾ ಕಾಸಿನ ನಿರೀಕ್ಷೆಯಿತ್ತು. ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿ, ಲಾಭ ಮಾಡಿಕೊಳ್ಳಲಾಗದಂತೆ ‘ಕೊರೊನಾ’ ವೈರಸ್‌ ಭೀತಿ ಕಾಡುತ್ತಿದೆ. ಲಕ್ಷ ಲಕ್ಷ ರೂಪಾಯಿ ಲುಕ್ಸಾನು ಕಟ್ಟಿಟ್ಟ ಬುತ್ತಿಯಾಗಿದೆ... ಜಿಲ್ಲೆಯಲ್ಲಿನ ತರಕಾರಿ ಬೆಳೆಗಾರರ ಅಳಲಿದು.

ಹೊಲದಲ್ಲಿರೋ ಫಸಲು ಕೊಯ್ಲು ಮಾಡಿ ಮಾರಾಟ ಮಾಡಲಾಗುತ್ತಿಲ್ಲ. ಈಗಲೇ ಕೈಸುಟ್ಟುಕೊಂಡಿದ್ದೇವೆ. ಮುಂದಿನ ಎರಡ್ಮೂರು ತಿಂಗಳು ತರಕಾರಿಗೆ ಭಾರಿ ಬೇಡಿಕೆ ಇರಲಿದೆ. ಆದರೆ ಕೊರೊನಾ ಭೀತಿ, ಸಸಿ ನಾಟಿಗೂ ಹಿಂಜರಿಯುವಂತೆ ಮಾಡುತ್ತಿದೆ ಎಂಬುದು ಬೆಳೆಗಾರರ ಮಾತಾಗಿದೆ.

ಪ್ರಸ್ತುತ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ 10 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತರಕಾರಿ ಬೆಳೆಯಿದೆ. ಇವರೆಲ್ಲರೂ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದಾರೆ. ಬಹುತೇಕರು ತರಕಾರಿಯ ಸಹವಾಸವೇ ಬೇಡ ಎಂದು ಕೊಯ್ಲು ಮಾಡದೆ, ಗಿಡದಲ್ಲೇ ಬಿಟ್ಟಿದ್ದಾರೆ.

ದನ ಮೇಯಿಸಿದೆ: ‘ಆರು ಎಕರೆ ಭೂಮಿಯಿದೆ. ಕೊಳವೆಬಾವಿ ನೀರು ಸಾಕಾಗಲ್ಲ ಎಂದು ಮೂರು ಎಕರೆಯಲ್ಲಿ ₹ 1.50 ಲಕ್ಷ ಖರ್ಚು ಮಾಡಿ ಟೊಮೆಟೊ, ಬೀನ್ಸ್‌, ಸೌತೆ ಬೆಳೆದಿರುವೆ. ಬಂಪರ್ ಫಸಲು ಬಂದಿತ್ತು. 600 ಬಾಕ್ಸ್‌ ಟೊಮೆಟೊ ಮಾರಿದೆ. ₹ 50,000 ಸಿಕ್ಕಿತ್ತು. ಇನ್ನೂ ಸಾಕಷ್ಟು ಹಣ್ಣಿದ್ದರೂ, ಕೊಯ್ಲಿನ ಕಾಸು ಹುಟ್ಟಲ್ಲ ಎಂದು ಗಿಡದಲ್ಲೇ ಬಿಟ್ಟಿರುವೆ.

ಬೀನ್ಸ್ ಧಾರಣೆ ಪಾತಾಳಕ್ಕೆ ಕುಸಿದಿದೆ. ಕೊಯ್ಲಿನ ಖರ್ಚು ಗಿಟ್ಟಲ್ಲ ಎಂದು ದನಗಳನ್ನು ಬಿಟ್ಟು ಮೇಯಿಸಿದೆ. ಇದು ನನ್ನೊಬ್ಬನ ಸ್ಥಿತಿಯಲ್ಲ. ಈ ಭಾಗದ ಎಲ್ಲ ತರಕಾರಿ ಬೆಳೆಗಾರರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ಮರೇನಹುಂಡಿಯ ಮಹೇಶ್‌ ‘ಪ್ರಜಾವಾಣಿ’ ಬಳಿ ತರಕಾರಿ ಬೆಳೆಗಾರರ ಸಂಕಷ್ಟ ಬಿಚ್ಚಿಟ್ಟರು.

‘ಒಂದು ಎಕರೆಯಲ್ಲಿ ₹ 30,000 ಖರ್ಚು ಮಾಡಿ ಟೊಮೆಟೊ ಬೆಳೆದಿರುವೆ. ಐದಾರು ಕೊಯ್ಲು ನಡೆಯಬೇಕಿತ್ತು. ಈ ಬಾರಿ ಕೂಳೆ ಬೆಳೆಯಲ್ಲೇ ನನ್ನ ಖರ್ಚು ಕೈ ಸೇರುತ್ತೆ ಎಂಬ ನಿರೀಕ್ಷೆಯಿತ್ತು. ₹ 1 ಲಕ್ಷಕ್ಕೂ ಹೆಚ್ಚು ಲಾಭ ಸಿಗುವ ನಿರೀಕ್ಷೆಯಿಟ್ಟುಕೊಂಡಿದ್ದೆ. 25 ಕೆ.ಜಿ.ತೂಕದ ಒಂದು ಟ್ರೇಗೆ ₹ 60 ಸಿಕ್ಕರೆ ಪುಣ್ಯ ಎನ್ನುವಂತಹ ಸ್ಥಿತಿ ಇದೀಗ ನಿರ್ಮಾಣವಾಗಿದೆ.

ಕೊಯ್ಲಿನ ಕೂಲಿ, ಮಾರುಕಟ್ಟೆಗೆ ಕೊಂಡೊಯ್ಯುವ ಸಾಗಣೆ ಖರ್ಚು ಸಹ ಸಿಗದಾಗಿದೆ. ಮುಂದೇನು ಮಾಡಬೇಕು ? ಎಂಬುದೇ ದಿಕ್ಕು ತೋಚದಂತಾಗಿದೆ’ ಎಂದು ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿಯ ಅಂಗಡಿ ದೇವಣ್ಣ ತಿಳಿಸಿದರು.

ನಸೀಬು ಕರಾಬು ಮಾಡಿದ ಕೊರೊನಾ

‘ಹೊರಗಡೆಯೂ ವಿದೇಶಿ ತರಕಾರಿ ಕಳಿಸಲಿಕ್ಕಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಯೂ ಸಂಪೂರ್ಣ ಬಂದ್ ಆಗಿದೆ. ಶೇ 5ರಿಂದ 10ರಷ್ಟು ತರಕಾರಿಯೂ ಮಾರಾಟವಾಗ್ತಿಲ್ಲ. ಕೈಗೆ ಬಂದ ಉತ್ಪನ್ನದ್ದೇ ಈ ಹಣೆಬರಹ ಆದರೆ, ಮತ್ತೆ ನಾಟಿ ಮಾಡುವ ಧೈರ್ಯವೂ ಬರ್ತಿಲ್ಲ. ದಿನ ಕಳೆದಂತೆ ಆತಂಕವೇ ಹೆಚ್ಚುತ್ತಿದೆ. ಕೊರೊನಾ ನಮ್ಮ ನಸೀಬನ್ನು ಕರಾಬು ಮಾಡಿದೆ’ ಎನ್ನುತ್ತಾರೆ ತಳೂರಿನ ವಿದೇಶಿ ತರಕಾರಿ ಬೆಳೆಗಾರ ಯೋಗೇಶ್‌.

ಬಂಪರ್ ಬೆಳೆ; ಪ್ರವಾಸೋದ್ಯಮಕ್ಕೆ ಹೊಡೆತ

‘ನವೆಂಬರ್‌–ಡಿಸೆಂಬರ್‌ನಲ್ಲೂ ಮಳೆಯಾಗಿದ್ದು, ತರಕಾರಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದರ ಜತೆ ಇಳುವರಿಯೂ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಇದೇ ಸಮಯಕ್ಕೆ ಸರಿಯಾಗಿ ಕೊರೊನಾ ವೈರಸ್ ಸೋಂಕಿನ ಭೀತಿಯೂ ಕಾಡುತ್ತಿದೆ. ಇದು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೆ.ರುದ್ರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇರಳದ ವಿವಿಧೆಡೆ ಸೇರಿದಂತೆ, ತಮಿಳುನಾಡಿನ ಕೊಯಮತ್ತೂರು ಇನ್ನಿತರೆಡೆ ಹಾಗೂ ರಾಜ್ಯದ ಮಡಿಕೇರಿ ಭಾಗಕ್ಕೆ ಮೈಸೂರಿನ ತರಕಾರಿ ನಿತ್ಯವೂ ರವಾನೆಯಾಗುತ್ತಿತ್ತು. ಈ ಭಾಗದಲ್ಲಿ ಇದೀಗ ಪ್ರವಾಸೋದ್ಯಮ, ಹೋಟೆಲ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ತರಕಾರಿ ಕೇಳುವವರೇ ಇಲ್ಲದಂತಾಗಿದೆ’ ಎಂದು ಹೇಳಿದರು.

ಮೈಸೂರು ಜಿಲ್ಲೆಯ ತರಕಾರಿ ಚಿತ್ರಣ

ತಾಲ್ಲೂಕು ಮೈಸೂರು ನಂಜನಗೂಡು ಹುಣಸೂರು ಎಚ್‌.ಡಿ.ಕೋಟೆ ತಿ.ನರಸೀಪುರ ಕೆ.ಆರ್.ನಗರ ಪಿರಿಯಾಪಟ್ಟಣ
ಹೆಕ್ಟೇರ್‌ 2,506 2,286 1,253 1,248 991 821 462

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT