ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾವಡಿ: ಹಳ್ಳಿ ಬದುಕು, ವ್ಯವಸ್ಥೆ ಚಿತ್ರಣ: ಮಹದೇವ ಅಭಿಮತ

‘ಚಾವಡಿ’ ಕಾದಂಬರಿ ಬಿಡುಗಡೆಗೊಳಿಸಿದ ಮಹದೇವ
Published 24 ಮಾರ್ಚ್ 2024, 15:56 IST
Last Updated 24 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಮೈಸೂರು: ‘ಹಳ್ಳಿಯ ಬದುಕು ಹಾಗೂ ಅಲ್ಲಿನ ವ್ಯವಸ್ಥೆ ಕುರಿತ ಚಿತ್ರಣವೇ ಚಾವಡಿ’ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಮಹದೇವ ಹೇಳಿದರು.

ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಲೇಖಕ ಕೃಷ್ಣ ಜನಮನ ವಿರಚಿತ ‘ಚಾವಡಿ’ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗ್ರಾಮದಲ್ಲಿನ ಒಂದು ಚಾವಡಿ ಸುತ್ತ ನಡೆಯುವ ಆಸಕ್ತಿಕರ ಕಥನವನ್ನು ಕಣ್ಣಿಗೆ ಕಟ್ಟುವಂತೆ ಯಶಸ್ವಿಯಾಗಿ ನಿರೂಪಿಸಿದ್ದು, ವಿಭಿನ್ನ ಶೈಲಿ ಹಾಗೂ ವಿಚಾರಧಾರೆಯ ಮೂಲಕ ಓದುಗರನ್ನು ಆಕರ್ಷಿಸುತ್ತದೆ. ಪ್ರತಿಯೊಂದು ಪಾತ್ರವು ಮನಸಿನ ಲಹರಿಯಲ್ಲಿ ಹಾದುಹೋಗುತ್ತದೆ. ಈ ಕಾದಂಬರಿಯನ್ನು ಒಂದೆರಡು ಗಂಟೆಗಳಲ್ಲಿ ಓದಬಹುದು. ಅಷ್ಟು ಸರಳವಾಗಿದೆ. ಲೇಖಕರ ಭಾವನೆಗೆ ಭಾಷೆಯು ಒದಗಿ ಬಂದಿದೆ’ ಎಂದರು.

‘ಹಳ್ಳಿಯ ಜನರು ಅವರ ಕಲ್ಪನೆ, ನಂಬಿಕೆಗಳನ್ನು ಅವರದ್ದೇ ಮಾನದಂಡದಲ್ಲಿ ಅಳೆಯುತ್ತಾರೆ. ಮೌಢ್ಯದಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಲ್ಲಿನ ಕೆಲವು ಆಚರಣೆಗಳು, ನಂಬಿಕೆಗಳು ಹಳ್ಳಿಗಳ ಹಿಂದುಳಿಯುವಿಕೆಯಲ್ಲಿ ಕಾರಣವಾಗುತ್ತದೆ. ಹಳೆಯ ಪೀಳಿಗೆಗೆ ಹೊಸ ಪೀಳಿಗೆಯ ಮೌಲ್ಯಗಳು ಬೆರೆತಾಗ ದುರಂತ ಸಂಭವಿಸುತ್ತವೆ ಎಂಬುದನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ’ ಎಂದು ತಿಳಿಸಿದರು.

‘ಇಂದು ನಾವೆಲ್ಲರೂ ಒಂದೇ ಎಂಬ ಮೌಲ್ಯವನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿಲ್ಲ. ಒಬ್ಬೊಬ್ಬರ ಚಿಂತನೆ ಶೈಲಿಗಳು, ಆಚಾರ, ವಿಚಾರಗಳಲ್ಲಿ ಬದಲಾವಣೆ ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾನತೆಗೆ ಒಂದು ಹೊಸ ಅರ್ಥ ನೀಡಬೇಕಿದೆ ಎಂಬುದನ್ನು ಈ ಕಾದಂಬರಿಯಲ್ಲಿ ಬಿಂಬಿಸಲಾಗಿದೆ. ಇಲ್ಲಿ ಸಮುದಾಯ ಹಾಗೂ ವ್ಯಕ್ತಿಗಳ ಘಟನೆಗಳು ಎಂಬ ಎರಡು ಅಂಶಗಳಿದ್ದು, ಮೊದಲ ಎರಡು ಅಧ್ಯಾಯದಲ್ಲಿ ಗ್ರಾಮದ ಚಿತ್ರಣವನ್ನು ವಿವರಿಸಲಾಗಿದೆ’ ಎಂದರು.

ಸಂಸ್ಕೃತಿ ಬುಕ್ ಏಜೆನ್ಸಿ ಪ್ರಕಾಶಕ ಸಂಸ್ಕೃತಿ ಸುಬ್ರಮಣ್ಯ ಮಾತನಾಡಿ, ‘ಲೇಖಕ ಕೃಷ್ಣ ಅವರ ವಿಚಾರಧಾರೆ ಕುತೂಹಲಕಾರಿಯಾಗಿದ್ದು, ವಿಚಾರಶೀಲತೆಯ ಗುಣ ಅವರಲ್ಲಿ ಕಾಣಬಹುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕನ್ನಡ ಮಾಧ್ಯಮ ಶಾಲೆಗಳು ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡುವಂತಹ ಕಾರ್ಯ ಮಾಡುತ್ತಿವೆ. ಈ ಶಾಲೆಗಳಲ್ಲಿ ಓದಿದಾಗ ಸಮಾನತೆಯ ಭಾವ ಬರುತ್ತದೆ. ಅದು ಯಾರೇ ಆಗಲಿ ಎಲ್ಲರೊಂದಿಗೆ ಬೆರೆತು ಓದಬೇಕು. ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಓದುವಂತಾಗಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್‌.ಎಂ.ತಳವಾರ ಮಾತನಾಡಿದರು. ಬೆಂಗಳೂರಿನ ಕ್ರೈಸ್ತ ಕಾಲೇಜು ಉಪನ್ಯಾಸಕ ಹ.ರಾ.ಮಹೇಶ್, ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಎಂ.ಮಂಜುನಾಥ, ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಸ್.ನಾಗರಾಜು ಗುಂಡೇಗಾಲ, ಸಾಹಿತಿ ನಾಗರಾಜು ತಲಕಾಡು, ಪ್ರಾಧ್ಯಾಪಕ ಕೆಂಪೇಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT