ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಾಕನಕೋಟೆ: ಮರಳಿದ ‘ರಂಗಾಯಣ’ ವೈಭವ

ಬಿ.ವಿ.ಕಾರಂತರನ್ನು ನೆನಪಿಸಿದ ಸಂಗೀತ ನಾಟಕ ಪ್ರಯೋಗ
Published 3 ಜನವರಿ 2024, 6:58 IST
Last Updated 3 ಜನವರಿ 2024, 6:58 IST
ಅಕ್ಷರ ಗಾತ್ರ

ಮೈಸೂರು: ‘ಒಂದೆರಡು ವರ್ಷದಿಂದ ರಂಗಾಯಣದ ಯಾವ ನಾಟಕವನ್ನೂ ನೋಡಿರಲಿಲ್ಲ. ಇದೀಗ ‘ಕಾಕನಕೋಟೆ’ ನೋಡಿ ಆದ ಸಂತಸ ಅಷ್ಟಿಷ್ಟಲ್ಲ. ಸಂಗೀತಮಯವಾದ ಈ ನಾಟಕವು ರಂಗಾಯಣದ ವೈಭವದ ದಿನಗಳನ್ನು ಮತ್ತೆ ನೆನಪಿಸಿತು. ಬಿ.ವಿ.ಕಾರಂತರಿಗೆ ಅರ್ಪಿಸಿದ ಸಂಗೀತದ ಹಾರ ಈ ನಾಟಕ’

ಕಳೆದ ವರ್ಷಾಂತ್ಯದ ಡಿ.30, 31ರಂದು ‍ಪ್ರದರ್ಶಿತಗೊಂಡ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ‘ಕಾಕನಕೋಟೆ’ ನಾಟಕ ನೋಡಿದ ರಂಗ ಸಂಗೀತ ತಜ್ಞ ಶ್ರೀಕಂಠಸ್ವಾಮಿ ಅವರ ಮಾತುಗಳಿವು. 

ಅವರಷ್ಟೇ ಅಲ್ಲ, ನೂರಾರು ಮಂದಿ ಸಂಗೀತ ಪ್ರಾಧಾನ್ಯ ನಾಟಕದ ಮೋಡಿಗೊಳಗಾದರು. ವನರಂಗದಲ್ಲಿ ಅರಳಿದ ‘ಕಾಕನಕೋಟೆ’ಯ ಹಾಡಿಯಲ್ಲಿ ಬಂಧಿಯಾಗಿದ್ದರು. ಮತ್ತೆ ಬಂಧನದ ಹಿತವನ್ನು, ಕಾಡಿನ ಸೊಬಗನ್ನು, ಭಾಷೆ, ಸಂಗೀತ ರಸಸ್ವಾದಿಸಲು ಇದೇ 7, 14, 20, 21ರಂದು ಬರಲು ಸಜ್ಜಾಗಿದ್ದಾರೆ. 

ನಾಟಕವನ್ನು ಭಾರತೀಯ ರಂಗ ಶಿಕ್ಷಣ ಕೇಂದ್ರದ ಡಿಪ್ಲೊಮಾ ಓದುತ್ತಿರುವ 18 ವಿದ್ಯಾರ್ಥಿಗಳು ಅಭಿನಯಿಸಿದ್ದು, ಪ್ರಾಂಶುಪಾಲ ಎಸ್‌.ರಾಮನಾಥ ನಿರ್ದೇಶನ ಮಾಡಿದ್ದಾರೆ. 70ರ ದಶಕದಲ್ಲಿ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ್ದ ನಾಟಕವನ್ನು ರಂಗಾಯಣದ ಕಲಾವಿದರು ಮರಳಿ ಅರಳಿಸಿದ್ದಾರೆ. 

ಕಲಾವಿದರೇ ವಾದ್ಯಕಾರರು: ನಾಟಕಕ್ಕೆ ಯಾವುದೇ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಲ್ಲ. ಎಲ್ಲವನ್ನು ಪ್ರಕೃತಿಯ ವಸ್ತುಗಳಿಂದಲೇ ಶಬ್ಧವಿನ್ಯಾಸವನ್ನು ವಿದ್ಯಾರ್ಥಿಗಳೇ ಮಾಡಿಕೊಂಡಿದೆ. ಅವರೇ ವಾದ್ಯಗಳನ್ನು ನುಡಿಸುತ್ತಾರೆ. ಹಾಡುತ್ತಾರೆ. ಎಲ್ಲ ಪರಿಕರಗಳನ್ನು ಅವರೇ ಸಿದ್ಧಮಾಡಿಕೊಂಡಿರುವುದೂ ವಿಶೇಷ! 

ಮಡಿಕೆಗಳು, ಕೋಲಾಟದ ಶಬ್ಧವಿನ್ಯಾಸ ಎಲ್ಲರನ್ನೂ ಸೆಳೆದು ಹೃದ್ಯವಾಗಿಸುತ್ತದೆ. ನಾಟಕದಲ್ಲಿ ವನರಂಗದ ವೇದಿಕೆಯಲ್ಲಿಯೇ ಬೆಂಕಿ ಉರಿಯುತ್ತಿರುತ್ತದೆ. ಪಕ್ಕದಲ್ಲಿಯೇ ಗುಂಡಿ ತೋಡಿ ಕೊಳ ಮಾಡಿಕೊಳ್ಳಲಾದ್ದು, ಪಾತ್ರಗಳು ಕೈ–ಕಾಲು ಮುಖ ತೊಳೆಯುತ್ತವೆ. ಬಂದು ಬೆಂಕಿ ಕಾಯಿಸಿಕೊಳ್ಳುತ್ತವೆ. ಅಲ್ಲಿಯೇ ಹಾಡು–ಆಟ ನಡೆಯುತ್ತದೆ. ಬಿದಿರು ಮೆಳೆಗಳು, ಅದರ ಹಿನ್ನೆಲೆಯ ಮರಗಳು ಕಾಕನಕೋಟೆ ಕಾಡಿನೊಳಕ್ಕೆ ಆಹ್ವಾನಿಸುತ್ತವೆ. ಅದರಿಂದ ಹಾಡಿಯ ದೃಶ್ಯವು ‌ರೋಮಾಂಚನಗೊಳಿಸುತ್ತದೆ. 

ರಂಗವಿನ್ಯಾಸವನ್ನು ಎಚ್‌.ಕೆ.ದ್ವಾರಕನಾಥ್ ಮಾಡಿದ್ದರೆ, ವಸ್ತ್ರವಿನ್ಯಾಸ ಅಮಿತ್‌ ಜೆ.ರೆಡ್ಡಿ ಅವರದ್ದು. ಅನುಷ್‌ ಶೆಟ್ಟಿ– ಮುನ್ನ ಜೋಡಿ ಸಂಗೀತ ಸಂಯೋಜಿಸಿದೆ.

‘ಮಾಸ್ತಿ ಅವರ ಈ ನಾಟಕವು ಸಿನಿಮಾ ಕೂಡ ಆಗಿದ್ದು, ಅದರ ಸಂಗೀತವನ್ನು ಸಿ.ಅಶ್ವಥ್ ನೀಡಿದ್ದರು. ಅದರಿಂದ ಹೊಸದಾಗಿ ಸಂಗೀತ ಸಂಯೋಜನೆ ಮಾಡುವುದು ಸವಾಲಾಗಿತ್ತು. ತಬಲಾ, ಕೀಬೋರ್ಡ್‌, ಗಿಟಾರ್‌ ಸೇರಿದಂತೆ ಸಾಂಪ್ರದಾಯಿಕವಾದ ಯಾವೊಂದು ವಾದ್ಯ ಬಳಸದೇ ಏಕತಾರಿ, ಜಂಬೆ, ನಗಾರಿ ಸೇರಿದಂತೆ ಬುಡಕಟ್ಟು ಚರ್ಮವಾದ್ಯಗಳನ್ನು ಬಳಲಾಗಿದೆ. ಸಿದ್ದಿ, ಜೇನುಕುರುಬ ಬುಡಕಟ್ಟು ಸಂಗೀತದ ಅಂಶಗಳನ್ನು, ಧಾಟಿಯನ್ನು ಬಳಸಿ ಹೊಸದಾಗಿ ಹಾಡುಗಳನ್ನು ಸಂಯೋಜಿಸಲಾಗಿದೆ’ ಎಂದು ಅನುಷ್‌ ಎ. ಶೆಟ್ಟಿ– ಮುನ್ನ ತಿಳಿಸಿದರು.

ಇಲ್ಲಿ ನಾಯಿಯೂ ‍ಪಾತ್ರಧಾರಿ! 

ಕಾಕನಕೋಟೆಯಲ್ಲಿ ನಾಯಿಯೂ ಪಾತ್ರವನ್ನು ಮಾಡಿರುವುದು ನಾಟಕದ ಅಚ್ಚರಿ. ಅದಕ್ಕೆ ಕಲಾವಿದರೇ ತರಬೇತಿ ನೀಡಿದ್ದಾರೆ. ನಾಟಕ ನಡೆಯುವಾಗ ರಂಗ ಪ್ರವೇಶಿಸುವ ನಾಯಿಯು ಕೊಳದಲ್ಲಿ ನೀರು ಕುಡಿಯುತ್ತದೆ. ಪಾತ್ರಗಳು ಮಾತನಾಡುತ್ತಿದ್ದರೆ ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿ ಗಮನ ಸೆಳೆಯುತ್ತದೆ. ಅದಕ್ಕೊಂದು ತಾಯತವನ್ನು ಕಟ್ಟಿದ್ದು ಅದರ ಹಾವ–ಭಾವ ನೋಡುಗರನ್ನು ಸೆಳೆಯುತ್ತದೆ. ‘ನಾಯಿ ನಮ್ಮ ನಿಯಂತ್ರಣದಲ್ಲಿಲ್ಲ. ಅದೇ ಬಂದು ತನ್ನ ಕೆಲಸ ಮಾಡಿ ಹೋಗುತ್ತದೆ’ ಎಂದು ರಾಮನಾಥ ಸಂತಸ ಹಂಚಿಕೊಂಡರು.

‘ವನರಂಗವೇ ಹಾಡಿಯಾಗಿದೆ’

‘70ರ ದಶಕದಲ್ಲಿ ಸಿ.ಆರ್.ಸಿಂಹ ಈ ನಾಟಕ ಪ್ರಯೋಗ ಮಾಡಿದ್ದರು. ಲೋಕೇಶ್‌ ನಟಿಸಿದ್ದರು. ಅದು ಸಿನಿಮಾ ಕೂಡ ಆಗಿತ್ತು. ಕಳೆದ ಐದಾರು ವರ್ಷದಿಂದಲೂ ನಾಟಕ ಆಡಿಸಬೇಕೆಂಬ ಹಂಬಲವಿತ್ತು. ವನರಂಗವನ್ನೇ ಹಾಡಿಯಾಗಿ ನಿರ್ಮಿಸಿ ರಂಗ ಪ್ರಯೋಗ ಮಾಡಲಾಗಿದೆ’ ಎಂದು ನಾಟಕದ ನಿರ್ದೇಶಕ ಎಸ್‌.ರಾಮನಾಥ್‌ ‘‍ಪ್ರಜಾವಾಣಿ’ಗೆ ತಿಳಿಸಿದರು. ‘ನಾಟಕ ಸಂಗೀತಮಯವಾಗಿದೆ. 11 ಹಾಡುಗಳಿವೆ. ಐದನ್ನು ಮಾಸ್ತಿ ಉಳಿದವನ್ನು ನಾನು ಬರೆದಿರುವೆ. ಸಂಗೀತವನ್ನು ಕಲಾವಿದರೇ ನಿರ್ವಹಿಸುತ್ತಾರೆ. ಇಂಥ ಪ್ರಯೋಗ ರಂಗಾಯಣದಲ್ಲಿ ಹಿಂದೆಂದೂ ಆಗಿರಲಿಲ್ಲ. ನವೋದಯ ಕಾಲದ ಶ್ರೇಷ್ಠ ನಾಟಕವನ್ನು ಪ್ರಯೋಗಿಸಲಾಗಿದೆ’ ಎಂದರು. ‘ಲಂಕೇಶ್‌ ತೇಜಸ್ವಿ ಅವರ ಬಗ್ಗೆಯೇ ಮಾತನಾಡುವುದು ಕಡಿಮೆಯಾಗಿದೆ. ಮಾಸ್ತಿ ಕಾರಂತರು ಹಾಗೂ ಕುವೆಂಪು ಈಗಿನ ಯುವ ಸಮುದಾಯಕ್ಕೆ ಗೊತ್ತಾಗಬೇಕಿದೆ. ಹೀಗಾಗಿ ನಾಟಕವನ್ನು ರಂಗಕ್ಕೆ ಮತ್ತೆ ತರಲಾಗಿದೆ. ಮಾಸ್ತಿ ಸಣ್ಣಕತೆಗಳಿಗಷ್ಟೇ ಅಲ್ಲ ಕನ್ನಡ ನಾಟಕದ ಆಸ್ತಿ’ ಎಂದು ಹೇಳಿದರು.

ಕಾಕನಕೋಟೆ ನಾಟಕ ಪ್ರಯೋಗವು ಮಾಸ್ತಿ ಹಾಗೂ ಬಿ.ವಿ.ಕಾರಂತರಿಗೆ ಅರ್ಪಿಸಿದ ಗೌರವ. ಈ ಗಳಿಗೆಯಲ್ಲಿ ಅವರನ್ನು ಸ್ಮರಿಸುತ್ತೇವೆ.
-ಎಸ್‌.ರಾಮನಾಥ, ನಾಟಕ ನಿರ್ದೇಶಕ
ವಾದ್ಯಗಳನ್ನು ಕಲಾವಿದರೇ ನುಡಿಸುತ್ತಾರೆ. ಅವರೇ ನಾಟಕದ ಶಬ್ದವಿನ್ಯಾಸವನ್ನೂ ಮಾಡಿದ್ದಾರೆ. ಹಾಡುಗಳಿಗೆ ಹೊಸದಾಗಿ ನಾವು ಸಂಯೋಜನೆ ಮಾಡಿದ್ದೇವಷ್ಟೇ. ಪ್ರಯೋಗ ಸೊಗಸಾಗಿದೆ
-ಅನುಷ್‌– ಮುನ್ನ ರಂಗ ಸಂಗೀತ ನಿರ್ದೇಶಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT