ಶುಕ್ರವಾರ, ಜನವರಿ 27, 2023
23 °C

ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯದ ಗಡುವು ಗಮನಕ್ಕೆ ಬಂದಿದೆ: ಬೊಮ್ಮಾಯಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 'ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯ ಗಡುವು ನೀಡಿರುವ ವಿಷಯ ಗಮನಕ್ಕೆ ಬಂದಿದೆ. ಎಲ್ಲ ಸಮುದಾಯಗಳ ನಿರೀಕ್ಷೆಗಳೂ ಹೆಚ್ಚಾಗಿದೆ. ಸಂವಿಧಾನದ ಚೌಕಟ್ಟಿನೊಳಗೆ ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ನಂಜನಗೂಡು, ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೋಮವಾರ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಮೀಸಲಾತಿ ಹೆಚ್ಚಿಸಬೇಕಾದರೆ ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿಯೇ ಕ್ರಮ ವಹಿಸಬೇಕು. ಎಲ್ಲ ವರ್ಗದ ಹಿತಚಿಂತಕನಾಗಿ ಕೆಲಸ ಮಾಡುತ್ತಿದ್ದೇನೆ.‌ ಒಕ್ಕಲಿಗ‌ ಸಮುದಾಯದ ಮನವಿ ಇನ್ನೂ ಸಿಕ್ಕಿಲ್ಲ. ಪತ್ರ ಸಿಕ್ಕ ನಂತರ ಮನವಿ ಕುರಿತು ಪರಿಶೀಲಿಸಲಾಗುವುದು' ಎಂದರು. 

'ಕರ್ನಾಟಕ- ಮಹಾರಾಷ್ಟ್ರ ಗಡಿ ವ್ಯಾಜ್ಯ ಪ್ರಕರಣವು ಇದೇ 30ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ರಾಜ್ಯ ಗಡಿ ಮತ್ತು ನದಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ.ಶಿವರಾಜ ವಿ. ಪಾಟೀಲ ನೇತೃತ್ವದಲ್ಲಿ ಸಭೆ ನಡೆದಿದೆ. ಕೋರ್ಟ್ ನಲ್ಲಿ ನಮ್ಮ ವಾದ, ತಂತ್ರಗಳು ಮತ್ತು ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ' ಎಂದು ಮಾಹಿತಿ ನೀಡಿದರು. 

'ದೆಹಲಿ ಪ್ರವಾಸ ಕೈಗೊಂಡಿದ್ದು, ಇದೇ 29ರಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರನ್ನು ಭೇಟಿ ಮಾಡುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇರುವುದರಿಂದ ಬಹಿರಂಗ ಚರ್ಚೆ ಮಾಡಿದರೆ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಆ ಬಗ್ಗೆ ಏನೂ ಹೇಳಲಾರೆ' ಎಂದರು. 

ಭತ್ತ ಖರೀದಿ ಕೇಂದ್ರ: 'ಕುಚಲಕ್ಕಿ ಬೆಳೆಯುವ ಮಂಗಳೂರಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಗಂಗಾವತಿ, ಸಿಂಧನೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು' ಎಂದು ಬೊಮ್ಮಾಯಿ ತಿಳಿಸಿದರು. 

'ಬಹಳಷ್ಟು ನಕಲಿ ವೆಬ್ ಸೈಟ್ ಗಳ ಮೂಲಕ ನಕಲಿ ಮತದಾರರ ಚೀಟಿ, ಆಧಾರ್ ಪಡೆಯುತ್ತಿರುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಅನಧಿಕೃತ ವೆಬ್ ಸೈಟ್ ಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದರು. 

'ಮೈಸೂರಿನ 131 ಪಾರಂಪರಿಕ ಕಟ್ಟಡಗಳ ಕಾಯಕಲ್ಪಕ್ಕೆ ಹಣಕಾಸಿನ ವ್ಯವಸ್ಥೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು' ಎಂದು ತಿಳಿದರು. 

'ಏಕರೂಪ ನಾಗರಿಕ‌ ಸಂಹಿತೆ ಜಾರಿ ಪಕ್ಷದ ಗುರಿಯಾಗಿದ್ದು, ಹಲವು ರಾಜ್ಯಗಳು ಈ ಸಂಬಂಧ ಸಮಿತಿ ರಚಿಸಿವೆ. ಸಂವಿಧಾನ ಹಾಗೂ ವಿವಿಧ ರಾಜ್ಯಗಳು ಸಂಹಿತೆಯ ಜಾರಿಗೆ ಕೈಗೊಂಡಿರುವ ರೂಪುರೇಷೆ ಆಧರಿಸಿ ರಾಜ್ಯದಲ್ಲೂ ಜಾರಿಗೊಳಿಸಲು ಚಿಂತಿಸಲಾಗುವುದು. ಈ‌ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಇನ್ನೂ ಮಾತನಾಡಿಲ್ಲ' ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‌

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಪ್ರತಾಪಸಿಂಹ, ಶಾಸಕರಾದ ಹರ್ಷವರ್ಧನ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು