ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಮಲತಾಯಿ ಧೋರಣೆ: ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದನ್ನು ಸಹಿಸಿಕೊಳ್ಳಲು ಮೋದಿ ಅವರಿಗೆ ಆಗುತ್ತಿಲ್ಲ. ಹೀಗಾಗಿ, ಬರ ಪರಿಹಾರದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ- ಸಿದ್ದರಾಮಯ್ಯ.
Published 5 ನವೆಂಬರ್ 2023, 9:08 IST
Last Updated 5 ನವೆಂಬರ್ 2023, 9:08 IST
ಅಕ್ಷರ ಗಾತ್ರ

ಮೈಸೂರು: 'ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನಮ್ಮ ಸಚಿವರ ಭೇಟಿಗೂ ಕೇಂದ್ರ ಸಚಿವರು ಸಮಯ ಕೊಡುತ್ತಿಲ್ಲ. ನಮ್ಮವರು ಮೂರು ದಿನ ದೆಹಲಿಗೆ ಹೋಗಿ ಕಾದಿದ್ದಾರೆ. ಪ್ರಧಾನಿಯೂ ಸಮಯ ಕೊಡುತ್ತಿಲ್ಲ. ಕೇವಲ ಸಚಿವರ ಕಾರ್ಯದರ್ಶಿಗಳನ್ನು ಭೇಟಿಯಾಗಿ ಬರುವ ಸ್ಥಿತಿ ಬಂದಿದೆ. ಇದು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ದೂರಿದರು.

'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದನ್ನು ಸಹಿಸಿಕೊಳ್ಳಲು ನರೇಂದ್ರ ಮೋದಿ ಅವರಿಗೆ ಆಗುತ್ತಿಲ್ಲ. ಹೀಗಾಗಿ, ಬರ ಪರಿಹಾರದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ' ಎಂದು ದೂರಿದರು.

'ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ತಾಲ್ಲೂಕುಗಳಿಗೂ ಭೇಟಿ ನೀಡಿ ಅಧ್ಯಯನ ಮಾಡಿ, ಜನರು ಮತ್ತು ಶಾಸಕರನ್ನು ಭೇಟಿಯಾಗಿ ನ.15ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದೇನೆ. ಪರಿಹಾರ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಮೊದಲಿಗೆ ₹ 900 ಕೋಟಿ ಹಾಗೂ ಮೊನ್ನೆಯೂ ₹ 324 ಕೋಟಿ ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿಲ್ಲವೆಂಬ ಕಾರಣಕ್ಕೆ ನಾವು ಯಾವ ಕೆಲಸವನ್ನೂ ನಿಲ್ಲಿಸಿಲ್ಲ. ಕುಡಿಯುವ ನೀರು ಪೂರೈಸುತ್ತಿದ್ದೇವೆ. ಉದ್ಯೋಗ ಕೊಡುತ್ತಿದ್ದೇವೆ' ಎಂದು ತಿಳಿಸಿದರು.

'ನಾನು ಕೇಂದ್ರಕ್ಕೆ ಪತ್ರ ಬರೆದ ಮೇಲೆ ಎನ್‌ಆರ್‌ಇಜಿಎಸ್‌ ಬಾಕಿಯಲ್ಲಿ ₹ 600 ಕೋಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಬರದಿಂದ ಒಟ್ಟು ₹ 33ಸಾವಿರ ಕೋಟಿ ನಷ್ಟವಾಗಿದೆ. ಮಾರ್ಗಸೂಚಿ ಪ್ರಕಾರ ಪರಿಹಾರವಾಗಿ ನಾವು ₹ 17,900 ಕೋಟಿ ಕೇಳಿದ್ದೇವೆ. ಆದರೆ, ಒಂದು ರೂಪಾಯಿಯನ್ನೂ ಕೊಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಹಾರಕ್ಕೆ ಒತ್ತಾಯಿಸಿ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮತ್ತೆ ಪತ್ರ ಬರೆದಿದ್ದೇನೆ’ ಎಂದರು.

‘ರಾಜ್ಯ ಬಿಜೆಪಿ ನಾಯಕರು ಇಲ್ಲಿ ಪ್ರವಾಸ ಕೈಗೊಂಡು ಏನ್ಮಾಡುತ್ತಾರೆ? ಅವರಿಗೆ ನಿಜವಾಗಿ ನಮ್ಮ ರೈತರ ಬಗ್ಗೆ ಕಾಳಜಿ ಇದ್ದರೆ ದೆಹಲಿಗೆ ಹೋಗಿ ಕೇಂದ್ರ ಸರ್ಕಾರವನ್ನು ಕೇಳಲಿ, ಹಣ ಬಿಡುಗಡೆ ಮಾಡಿಸಲಿ’ ಎಂದು ಸವಾಲು ಹಾಕಿದರು.

‘ಗ್ಯಾರಂಟಿಗಳ ಬಗ್ಗೆ ರಾಜಕೀಯವಾಗಿ ಟೀಕಿಸುತ್ತಾರಷ್ಟೆ. ಪಂಚ ರಾಜ್ಯ ಚುನಾವಣೆಯಲ್ಲಿ ಅವರು ಗ್ಯಾರಂಟಿ ಕೊಟ್ಟರೆ ಅದು ಬಡವರ ಕಾರ್ಯಕ್ರಮ, ನಾವು ಕೊಟ್ಟರೆ ದಿವಾಳಿಯಾಗುತ್ತದೆ ಎನ್ನುತ್ತಾರೆ. ಅವರೇನೇ ಹೇಳಿದರೂ ನಾವು ಬಡವರು, ಸಾಮಾನ್ಯ ವರ್ಗದವರು ಹಾಗೂ ಹಳ್ಳಿ ಜನರ ಪರವಾಗಿದ್ದೇವೆ’ ಎಂದರು.

'ನಾವು ಗ್ಯಾರಂಟಿ ಅನುಷ್ಠಾನಗೊಳಿಸಲು ಆಗುವುದಿಲ್ಲ ಎಂದುಕೊಂಡಿದ್ದರು. ನಾವು ಎಲ್ಲವನ್ನೂ ಜಾರಿ ಮಾಡಿದ್ದರಿಂದ ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಹೀಗಾಗಿಯೇ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT