ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದೇ ಸ್ಥಳದಲ್ಲಿ ಕಾಂಗ್ರೆಸ್, ‘ದೋಸ್ತಿ’ ಸಮಾವೇಶ; ಗುತ್ತಿಗೆದಾರಗೆ ಪೀಕಲಾಟ!

Published : 8 ಆಗಸ್ಟ್ 2024, 14:16 IST
Last Updated : 8 ಆಗಸ್ಟ್ 2024, 14:16 IST
ಫಾಲೋ ಮಾಡಿ
Comments

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಜ್ಜಾಗಿರುವ ಒಂದೇ ವೇದಿಕೆಯಲ್ಲಿ ಆ.9ರಂದು ಕಾಂಗ್ರೆಸ್ ಜನಾಂದೋಲನ ಮತ್ತು ಆ.10ರಂದು ‘ಮೈಸೂರು ಚಲೋ’ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯುತ್ತಿರುವುದು, ಪೆಂಡಾಲ್‌ ಗುತ್ತಿಗೆ ಪಡೆದಿರುವವರ ಪೀಕಲಾಟಕ್ಕೆ ಕಾರಣವಾಗಿದೆ.

‘ವೇದಿಕೆ ಸಿದ್ಧಪಡಿಸಿ ಪೆಂಡಾಲ್‌ ಹಾಕಿಕೊಡುವಂತೆ ಕಾಂಗ್ರೆಸ್‌ನವರು ತಿಳಿಸಿದ್ದರಿಂದ ತಯಾರಿ ಮಾಡಿಕೊಂಡಿದ್ದೆವು. ಬಳಿಕ ಬಿಜೆಪಿಯವರು, ತಾವೂ ಮರುದಿನ ಅಲ್ಲೇ ಸಮಾವೇಶ ನಡೆಸುವುದರಿಂದ ಅದೇ ಪೆಂಡಾಲ್‌, ವೇದಿಕೆ ಬಿಟ್ಟುಕೊಡಿ ಎಂದಿದ್ದರು. ಆದರೆ, ಈಗ ಎರಡೂ ಪಕ್ಷದವರು ಸಂಪೂರ್ಣ ವೆಚ್ಚ ಕೊಡಲು ನಿರಾಕರಿಸುತ್ತಿದ್ದಾರೆ. ಅವರ ಬಳಿಯೂ ಹಣ ಪಡೆದುಕೊಳ್ಳುತ್ತೀರಲ್ಲಾ, ನಾವೇಕೆ ಸಂಪೂರ್ಣ ವೆಚ್ಚ ಕೊಡಬೇಕು ಎಂದು ಕೇಳುತ್ತಿದ್ದಾರೆ. ನನಗೆ ನಷ್ಟವಾಗುತ್ತಿದೆ’ ಎಂದು ಪೆಂಡಾಲ್‌ನ ಗುತ್ತಿಗೆ ಪಡೆದಿರುವ ಶರೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಸಿದ್ದರಾಮಯ್ಯ ಅವರ ಬಳಿ ‘ಇಷ್ಟೇ ಕೊಡಿ’ ಎಂದು ಎಂದಿಗೂ ಕೇಳಿದವನಲ್ಲ. ಖರ್ಚು–ವೆಚ್ಚದ ಲೆಕ್ಕ  ಕೊಡುತ್ತೇನೆ. ಅವರು ಕೊಡಿಸಿದಷ್ಟು ತೆಗೆದುಕೊಳ್ಳುತ್ತೇನೆ. ಬಿಜೆಪಿಯವರೊಂದಿಗೂ ನಮ್ಮ ವ್ಯವಹಾರವಿದೆ. ಈ ಬಾರಿ, ಒಂದೇ ಸ್ಥಳದಲ್ಲಿ ದಿನದ ಅಂತರದಲ್ಲೇ ಸಮಾವೇಶ ಬಂದಿರುವುದರಿಂದ ತೊಂದರೆಯಾಗಿದೆ’ ಎಂದರು.

‘ಪೆಂಡಾಲ್‌ ಮಾತ್ರವೇ ಆಗಿದ್ದರೆ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆದರೆ, ಧ್ವನಿವರ್ಧಕಗಳು, ವಿದ್ಯುತ್‌ ದೀಪಗಳ ವ್ಯವಸ್ಥೆ, ಫ್ಯಾನ್‌ಗಳು, ಜನರೇಟರ್‌, ಎಲ್‌ಇಡಿ ಪರದೆಗಳು, ಎಲ್‌ಇಡಿ ಟಿವಿಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದೇನೆ. ಅರ್ಧ ಬಾಡಿಗೆಗೆ ಅವರು ಒಪ್ಪುವುದಿಲ್ಲ. ಆದ್ದರಿಂದ ಗರಿಷ್ಠ ವೆಚ್ಚ ಭರಿಸುವಂತೆ ಎರಡೂ ಪಕ್ಷದವರಿಗೆ ಕೋರಿಕೊಂಡಿದ್ದೇನೆ, ಏನು ಮಾಡುತ್ತಾರೋ ನೋಡಬೇಕು’ ಎಂದು ಪ್ರತಿಕ್ರಿಯಿಸಿದರು.

‘ಸಮಾವೇಶಕ್ಕೆ ಎಷ್ಟು ವೆಚ್ಚವಾಗುತ್ತದೆ ಹಾಗೂ ಗುತ್ತಿಗೆದಾರರಿಗೆ ಎಷ್ಟು ಹಣ ಸಂದಾಯ ಮಾಡಲಾಗುತ್ತದೆ ಎಂಬ ಮಾಹಿತಿ ನನಗಿಲ್ಲ. ಹಣಕಾಸಿನ ವಿಷಯವನ್ನೆಲ್ಲಾ ಕೆಪಿಸಿಸಿಯಿಂದಲೇ ನಿರ್ವಹಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT