ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿ ಕ್ಷೇತ್ರ: ಗುಡುಗಿದ ಸ್ವಾಭಿಮಾನಿ ಪಡೆ, ಚುನಾವಣಾ ಕಹಳೆ

ಚಾಮುಂಡೇಶ್ವರಿ ಕ್ಷೇತ್ರ: ಜೆಡಿಎಸ್‌ ಸೋಲಿಸಲು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸೂಚನೆ
Last Updated 20 ಜನವರಿ 2023, 13:11 IST
ಅಕ್ಷರ ಗಾತ್ರ

ಮೈಸೂರು: ಸ್ವಾಭಿಮಾನಿ ಪಡೆ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ರಣಕಹಳೆ ಮೊಳಗಿತು.

ಜೆಡಿಎಸ್‌ನ ಪ್ರಮುಖ ಮುಖಂಡರನ್ನು ತೆಕ್ಕೆಗೆ ಸೇರಿಸಿಕೊಂಡ ಕಾಂಗ್ರೆಸ್‌, ಮುಂಬರುವ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರಕ್ಕೆ ಚಾಲನೆ ನೀಡಿತು.

ತಾಲ್ಲೂಕಿನ ಲಿಂಗದೇವರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್ ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಯರಗನಹಳ್ಳಿ ಮಹದೇವ, ಕೆಂಪನಾಯಕ, ರುಕ್ಮಿಣಿ ಮಹದೇವ, ಚನ್ನವೀರಪ್ಪ ಮತ್ತವರ ಬೆಂಬಲಿಗರು ಕಾಂಗ್ರೆಸ್‌ ಸೇರ್ಪಡೆಯಾಗಿ, ಜಿ.ಟಿ.ದೇವೇಗೌಡರ ವಿರುದ್ಧ ಕೆಲಸ ಮಾಡುವುದಾಗಿ ಘೋಷಿಸಿದರು.

ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ‘ಮಾವಿನಹಳ್ಳಿ ಸಿದ್ದೇಗೌಡ, ಬಸವಣ್ಣ ‌ನನ್ನ ಜೊತೆಗೇ ಇದ್ದವರು. ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಸಮಾವೇಶ ಆಯೋಜಿಸಿ, ಯಾವುದೇ ಷರತ್ತಿಲ್ಲದೇ ಸೇರಬೇಕು ಎಂದು ಹೇಳಿದ್ದೆ’ ಎಂದು ತಿಳಿಸಿದರು.

ಜೆಡಿಎಸ್ ವಿರುದ್ಧ ವಾಗ್ದಾಳಿ:

‘ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ಶಕ್ತಿ ಜೆಡಿಎಸ್‌ಗಿಲ್ಲ. 120 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಆದರೆ, 20ರಿಂದ 22 ಸೀಟು ಗೆದ್ದರೆ ಅದೇ ದೊಡ್ಡದು. ಗೆದ್ದವರ ಬಾಲ ಹಿಡಿಯುತ್ತಾರೆ. ಅವರಿಗೆ ಯಾವ ಸಿದ್ಧಾಂತವೂ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಕೆ.ಮರೀಗೌಡ ಮಾತನಾಡಿ, ‘ಕೆಟ್ಟ ನೀತಿ‌ ಅನುಸರಿಸುತ್ತಿರುವ ಜಿಟಿಡಿಯನ್ನು‌ ಸೋಲಿಸಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಯಾರನ್ನೇ ಅಭ್ಯರ್ಥಿ‌ ಮಾಡಿದರೂ ಗುಂಪುಗಾರಿಕೆ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದಿಂದ ಪ್ರಕಟಿಸಿರುವ ‘ಕಾಂಗ್ರೆಸ್ ಎಂದರೆ ಮಹಿಳೆಯರ ಚೈತನ್ಯ, ಬಿಜೆಪಿ ಎಂದರೆ ಮಹಿಳೆಯರ ಧಮನ’ ಕೃತಿ ಬಿಡುಗಡೆ ‌ಮಾಡಲಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ಸದಸ್ಯ ಮಳವಳ್ಳಿ‌ ಶಿವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ‌ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಮುಖಂಡರಾದ ಡಾ.ಎಚ್.ಸಿ.ಮಹಾದೇವಪ್ಪ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇದ್ದರು.

ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ...

ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಮಾತನಾಡಿ, ‘1986ರಿಂದ 2004ರವರೆಗೆ ಕಾಂಗ್ರೆಸ್‌ನಲ್ಲೇ ಇದ್ದೆ. ಟಿಕೆಟ್ ಸಿಗದಿದ್ದರಿಂದ ಬೇರೆ ಪಕ್ಷಕ್ಕೆ ಹೋದೆ. ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ ನಾನು, ಕಾಂಗ್ರೆಸ್ ಸೇರುವಂತೆ ಜನರು ನೀಡಿದ ಸಲಹೆಯಂತೆ ನಡೆದುಕೊಂಡಿದ್ದೇನೆ. ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ’ ಎಂದರು.

‘ನಿಧಿಯೆಲ್ಲವೂ ನಿಮ್ಮದೇ ಎಂದಿದ್ದರು’

ಮುಖಂಡ ಬೀರಿಹುಂಡಿ ‌ಬಸವಣ್ಣ ಮಾತನಾಡಿ, ‘1983ರಿಂದಲೂ ನಾನು ಸಿದ್ದರಾಮಯ್ಯ ಹಿಂಬಾಲಕ. 2008ರ ಚುನಾವಣೆವರೆಗೂ ಅವರೊಂದಿಗಿದ್ದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ಗೆ ಹೋಗಿದ್ದೆ. ಬಿಜೆಪಿಯಿಂದ ಬಂದ ಜಿ.ಟಿ.ದೇವೇಗೌಡಗೆ ಕ್ಷೇತ್ರದ ನಾಡಿಮಿಡಿತವೇ ಗೊತ್ತಿರಲಿಲ್ಲ. ಅವರ ಬೆಂಬಲಕ್ಕೆ ನಿಂತಿದ್ದವರನ್ನು ಮರೆತಿದ್ದಾರೆ’ ಎಂದು ದೂರಿದರು.

‘ಮೈಸೂರಿನ ಸುತ್ತಲೂ ನಿಧಿ ಇದೆ ಎಂದು ತೋರಿಸಿ, ಅದಕ್ಕೆ ನೀವೇ ಒಡೆಯರು ಎಂದೂ ಹೇಳಿದ್ದರು. ಈಗ ನಿಧಿ ಮೇಲೆ ಕುಳಿತು ಬೇರಾರೂ ಮುಟ್ಟಲು ಬಿಡುತ್ತಿಲ್ಲ. ಅವರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಸೇರಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ವಿತ’ ಎಂದರು.

ಅಪ್ಪ–ಮಗನನ್ನು ಸೋಲಿಸುವ ಶಪಥ

ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ‘ನಾನು 1983ರಿಂದಲೂ ಸಿದ್ದರಾಮಯ್ಯ ಅನುಯಾಯಿ. ಅವರು ವರುಣಾಕ್ಕೆ ಹೋಗಿದ್ದರಿಂದ ಇಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿತು. ಜಿಟಿಡಿ ಏನೇನೋ ಹೇಳಿ ನಮ್ಮನ್ನು ನಂಬಿಸಿದ್ದರು. ಹೀಗಾಗಿ, 2013ರಲ್ಲಿ ಜೆಡಿಎಸ್‌ಗೆ ಹೋಗಿದ್ದೆವು. ಕ್ಷೇತ್ರದಲ್ಲಿ ಸಾವಿರಾರು ಮಂದಿ ಕೋವಿಡ್‌ಗೆ ಬಲಿಯಾದರು. ಆದರೆ, ಶಾಸಕರು ಜನರ ಸಂಕಷ್ಟವನ್ನು ಆಲಿಸಲಿಲ್ಲ, ಸಾಂತ್ವನವನ್ನೂ ಹೇಳಲಿಲ್ಲ. ಕಾರ್ಯಕರ್ತರನ್ನೂ ಕಡೆಗಣಿಸಿದರು’ ಎಂದು ಆರೋಪಿಸಿದರು.

‘ಎಚ್‌.ಡಿ.ದೇವೇಗೌಡರನ್ನು ಕಾಡಿ ಬೇಡಿ ತಮ್ಮೊಂದಿಗೆ ಪುತ್ರನಿಗೂ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಮನೆಗೆ ಕಳುಹಿಸುವುದೇ ನಮ್ಮ ಶಪಥ’ ಎಂದ ಅವರು, ‘ಕಾಂಗ್ರೆಸ್‌ಗೆ ಮತ ಹಾಕುತ್ತೇವೆ’ ಎಂದು ನೆರೆದಿದ್ದ ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದರು.

‘ಐದು ಸಾವಿರ ಜನರನ್ನು ಸೇರಿಸಲಿ ನೋಡೋಣ ಎಂದು ಜಿಟಿಡಿ ಹೇಳಿದ್ದರು. ನಾವು 30ಸಾವಿರ ಜನರನ್ನು ಸೇರಿಸಿದ್ದೇವೆ. ಅವರು 25ಸಾವಿರ ಜನರನ್ನು ಸೇರಿಸಿ ಸಮಾವೇಶ ನಡೆಸಿ ತೋರಿಸಲಿ’ ಎಂದು ಸವಾಲು ಹಾಕಿದರು.

ಸೋಲಿಸುವ ಗುರಿ

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಜಿಟಿಡಿ ದೇವರ ಮುಂದೆಯೇ ಹೇಳಿದ್ದರು. ಅದನ್ನು ನಿಜವಾಗಿಸಲು ಕಾಂಗ್ರೆಸ್ ಸೇರಿದ್ದೇವೆ. ಜಿಟಿಡಿ ಸೋಲಿಸುವುದೇ ನಮ್ಮ ಗುರಿ.

–ಯರಗನಹಳ್ಳಿ ಮಾದೇಗೌಡ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT