ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

Published 18 ಸೆಪ್ಟೆಂಬರ್ 2023, 10:21 IST
Last Updated 18 ಸೆಪ್ಟೆಂಬರ್ 2023, 10:21 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ 'ಗಜಪೂಜೆ' ಸಲ್ಲಿಸಲಾಯಿತು.

ತುಂತುರು ಮಳೆಯಲ್ಲಿಯೇ ಡಿಸಿಎಫ್ ಗಳಾದ ಸೌರಭ್ ಕುಮಾರ್, ಬಸವರಾಜು ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಅರಮನೆ ಅರ್ಚಕ ಪ್ರಹ್ಲಾದರಾವ್‌ ಆನೆಗಳಿಗೆ ಪಂಚಫಲ, ಕೋಡುಬಳೆ ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ 'ಗಣೇಶ'ನ ಇಷ್ಟದ ತಿನಿಸುಗಳನ್ನು ಅಣಿಗೊಳಿಸಿದರು.

ಆನೆಗಳ ಹಣೆ, ಸೊಂಡಿಲು, ಪಾದಗಳಿಗೆ ಅರಿಸಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಸೇವಂತಿಗೆ ಹೂಗಳಿಂದ ಅಲಂಕರಿಸಲಾಯಿತು‌. ಚಾಮರವನ್ನು ಬೀಸಲಾಯಿತು. ಪಂಚಫಲ- ತಿನಿಸುಗಳನ್ನು ನೈವೇದ್ಯ ನೀಡಲಾಯಿತು.

ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಅಧಿಕಾರಿಗಳು, ಮಾವುತರು, ಕಾವಾಡಿಗರಿಗೆ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಆನೆಗಳಿಗೆ ಬಿಲ್ವಪತ್ರೆ, ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಡಿಸಿಎಫ್ ಬಸವರಾಜ್ ಆನೆಗಳಿಗೆ ಆರತಿ ಬೆಳಗಿದರು.

ಸಿಹಿ ತಿಂಡಿಗಳೊಂದಿಗೆ ಕಬ್ಬು, ಬೆಲ್ಲ ತಿನ್ನಿಸಲಾಯಿತು.

ನಂತರ ಮಾತನಾಡಿದ ಡಿಸಿಎಫ್ ಸೌರಭ್ ಕುಮಾರ್, 'ಗಣೇಶ ಹಬ್ಬದಂದು ಸಾಂಪ್ರದಾಯಿಕವಾಗಿ ಆನೆಗಳಿಗೆ ಗಜಪೂಜೆ ಮಾಡಲಾಗುತ್ತದೆ. ಎಲ್ಲ ಆನೆಗಳೂ ಆರೋಗ್ಯವಾಗಿದ್ದು, ನಡಿಗೆ ಹಾಗೂ ಭಾರ ಹೊರುವ ತಾಲೀಮನ್ನು ಆರಾಮಾಗಿ ನಿರ್ವಹಿಸುತ್ತಿವೆ' ಎಂದರು.

ಆರ್ ಎಫ್ ಒ ಸಂತೋಷ್ ಹೂಗಾರ್, ವೈದ್ಯ ಮುಜೀಬ್ ರೆಹಮಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT