ಮೈಸೂರು: ನಗರದಲ್ಲಿರುವ ವೃತ್ತಗಳಲ್ಲಿ, ಇದು ಯಾವ ವೃತ್ತ, ಇದರ ಮಹತ್ವವೇನು, ಇಲ್ಲಿರುವ ಪ್ರತಿಮೆ ಯಾರದು, ನಾಡಿಗೆ ಅವರ ಕೊಡುಗೆ ಏನು ಎಂಬಿತ್ಯಾದಿ ಮಾಹಿತಿಯನ್ನು ಒದಗಿಸುವ ಕೆಲಸವನ್ನು ನಗರಪಾಲಿಕೆಯಿಂದ ಈವರೆಗೂ ಮಾಡಿಲ್ಲ.
ನಾಮಫಲಕಗಳನ್ನು ಹಾಕುವ ಕಾರ್ಯವೂ ನಡೆದಿಲ್ಲ. ಇದು, ಹೊರ ಜಿಲ್ಲೆ, ರಾಜ್ಯ ಹಾಗೂ ಹೊರದೇಶಗಳಿಂದ ಬರುವ ಪ್ರವಾಸಿಗರಿಗೆ ಸುಲಭವಾಗಿ ಮಾಹಿತಿ ದೊರೆಯುವುದಕ್ಕೆ ತೊಡಕಾಗಿ ಪರಿಣಮಿಸಿದೆ.
ವಿವಿಧ ಅರಮನೆಗಳು, ಮೃಗಾಲಯ, ದೇವಾಲಯಗಳು ಸೇರಿದಂತೆ ಹತ್ತು ಹಲವು ಪ್ರಮುಖ ಪ್ರವಾಸಿ ತಾಣಗಳ ಕಾರಣದಿಂದಾಗಿ ನಗರಕ್ಕೆ ನಿತ್ಯವೂ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಾರಾಂತ್ಯ, ಸರ್ಕಾರಿ ರಜಾ ದಿನಗಳು, ವರ್ಷಾಂತ್ಯ, ಬೇಸಿಗೆ ರಜೆ ಹಾಗೂ ನಾಡಹಬ್ಬ ದಸರಾ ಮಹೋತ್ಸವದ ದಿನಗಳಲ್ಲಿ ಸಂದರ್ಶಕರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುವುದು ಕಂಡುಬರುತ್ತದೆ. ಹೀಗೆ ಬಂದವರಿಗಾಗಲಿ, ನಗರದಲ್ಲಿ ಸಂಚರಿಸುವ ಸ್ಥಳೀಯರಿಗಾಗಲಿ ಮಾಹಿತಿ ಕಾಣಿಸುವಂತೆ ವೃತ್ತಗಳಲ್ಲಿ ನಾಮಫಲಕಗಳನ್ನು ಹಾಕಲಾಗಿಲ್ಲ. ಹೊರಗಿನವರಿಗೆ, ತಾವು ನೋಡುತ್ತಿರುವುದು ಯಾವ ವೃತ್ತ ಎನ್ನುವುದು ತಿಳಿಯುವುದೇ ಇಲ್ಲ!
ಕೇಳಿಕೊಂಡೇ ತಿಳಿಯಬೇಕು: ನಗರದಲ್ಲಿ ಬಹಳಷ್ಟು ವೃತ್ತಗಳಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನು ನಿರ್ಮಿಸಲಾಗಿದೆ. ಮೈಸೂರಿನವರೇ ಆದವರು ಹಾಗೂ ನಗರವನ್ನು ಚೆನ್ನಾಗಿ ಬಲ್ಲವರಿಗೆ ಪ್ರಮುಖ ವೃತ್ತಗಳ ಪರಿಚಯ ಇರುತ್ತದೆ. ಆದರೆ, ಬೇರೆಡೆಯಿಂದ ಬಂದವರಿಗೆ ಮಾಹಿತಿ ದೊರೆಯುವುದಿಲ್ಲ.
ಪಾರಂಪರಿಕ ವೃತ್ತಗಳಾದ ಕೃಷ್ಣರಾಜೇಂದ್ರ ವೃತ್ತ, ಚಾಮರಾಜೇಂದ್ರ ವೃತ್ತ, ಹಾರ್ಡಿಂಜ್ ವೃತ್ತ, ರಾಮಸ್ವಾಮಿ ವೃತ್ತ, ಫೈಲೈಟ್ ಸರ್ಕಲ್, ಹೈವೇ ವೃತ್ತ, ರಾಮಕೃಷ್ಣ ನಗರ, ವೃತ್ತ, ವಿವೇಕಾನಂದ ನಗರ ವೃತ್ತ ಹೀಗೆ... ನಗರದ ಯಾವುದೇ ವೃತ್ತದ ಬಳಿಯೂ ನಾಮಫಲಕಗಳಿಲ್ಲ. ಇದರಿಂದಾಗಿ, ಸ್ಥಳೀಯರನ್ನು ಕೇಳಿಕೊಂಡು ಮಾಹಿತಿ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲವೇ, ಗೂಗಲ್ ಮ್ಯಾಪ್ ಮೊರೆ ಹೋಗಬೇಕಾಗುತ್ತದೆ.
‘ಪ್ರವಾಸೋದ್ಯಮವನ್ನು ಪ್ರಮುಖವಾಗಿ ನೆಚ್ಚಿಕೊಂಡಿರುವ ನಗರ ನಮ್ಮದು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾಹಿತಿ ಕೊರತೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಸಂಬಂಧಿಸಿದವರು ನಿರ್ವಹಿಸಬೇಕು. ಜನರಿಗೆ ಗೊತ್ತಾಗುವಂತೆ ವೃತ್ತಗಳಲ್ಲಿ ಫಲಕಗಳನ್ನು ಹಾಕಬೇಕು. ಆದರೆ, ಸದ್ಯಕ್ಕೆ ನಗರದ ಯಾವುದೇ ವೃತ್ತದಲ್ಲೂ ಈಗ ವೃತ್ತದ ಹೆಸರಿನ ಫಲಕಗಳಿಲ್ಲ. ಇತರ ನಗರಗಳಲ್ಲಿ ವೃತ್ತದ ಯಾವುದಾದರೊಂದು ಬದಿಯಲ್ಲಿ ಫಲಕ ಹಾಕಿರುತ್ತಾರೆ. ಇಲ್ಲಿ ಆ ಕಾಳಜಿಯನ್ನೇ ತೋರಿಸದಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ವಕೀಲ ಪಿ.ಜೆ. ರಾಘವೇಂದ್ರ ತಿಳಿಸಿದರು.
ಅದರ ಬದಲಿಗೆ...: ‘ನಗರದಾದ್ಯಂತ ಎಲ್ಲ ವಾರ್ಡ್‌ಗಳ ವ್ಯಾಪ್ತಿಯ ಗಲ್ಲಿ–ಗಲ್ಲಿಗಳಲ್ಲೂ ಸಂಸದರು, ಶಾಸಕರು ಹಾಗೂ ನಗರಪಾಲಿಕೆ ಸದಸ್ಯರ (ಈಗ ಪಾಲಿಕೆ ಸದಸ್ಯರಿಲ್ಲ, ನಿಕಟಪೂರ್ವ ಸದಸ್ಯರ ಹೆಸರೇ ಇದೆ) ಹೆಸರು, ವಾರ್ಡ್ ಸಂಖ್ಯೆಯನ್ನು ಒಳಗೊಂಡ ಫಲಕಗಳನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿ ತೂಗು ಹಾಕಲಾಗಿದೆ. ಚುನಾವಣೆಗಳ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆಯ ಅನುಷ್ಠಾನದ ಕಾರಣಕ್ಕಾಗಿ ಅವುಗಳನ್ನು ಚುನಾವಣಾ ಆಯೋಗದಿಂದ ಮುಚ್ಚಿಸಲಾಗುತ್ತದೆ. ಆಗಾಗ ಹೊಸದಾಗಿ ಹಾಕಲಾಗುತ್ತಿರುತ್ತದೆ. ಆ ಫಲಕಗಳಿಂದ ಯಾವುದೇ ಪ್ರಯೋಜನವಿಲ್ಲ. ಜನಪ್ರತಿನಿಧಿಗಳ ಮೊಬೈಲ್ ಫೋನ್ ಸಂಖ್ಯೆಯನ್ನಾದರೂ ಹಾಕಿದರೆ, ಜನರು ಅವರನ್ನು ಸಂಪರ್ಕಿಸಿ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ಇಲ್ಲದಿದ್ದರೆ ಕೇವಲ ಫಲಕದಿಂದ ಜನರಿಗೆ ಏನೂ ಅನುಕೂಲವಿಲ್ಲ. ಅವುಗಳ ಬದಲಿಗೆ ವೃತ್ತಗಳಲ್ಲಿ, ಗಮನಸೆಳೆಯುವಂತೆ ವೃತ್ತದ ನಾಮಫಲಕಗಳನ್ನು ಹಾಕಿದರೆ ಪ್ರವಾಸಿಗರಿಗೆ ಮಾಹಿತಿ ದೊರೆತಂತೆ ಆಗುತ್ತದೆ’ ಎಂಬ ಸಲಹೆ ಅವರದು.
ನಗರದ ವೃತ್ತಗಳಲ್ಲಿರುವ ಪ್ರತಿಮೆಗಳ ಬಗ್ಗೆ ಮಾಹಿತಿ ಹಾಕುವ ಕೆಲಸವಾಗಿಲ್ಲ. ಪ್ರವಾಸಿಗರು ಪರದಾಡುವ ಸ್ಥಿತಿ ಇದೆ. ಕೊರತೆ ನೀಗಿಸುವ ಕೆಲಸ ಇನ್ನಾದರೂ ಆಗಲಿ.ಪಿ.ಜೆ. ರಾಘವೇಂದ್ರ ವಕೀಲ ಮೈಸೂರು
ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಿಗೆ ದೆಹಲಿಯ ಮಾದರಿಯಲ್ಲಿ ಆಕರ್ಷಕ ನಾಮಫಲಕಗಳನ್ನು ಹಾಕಲು ಯೋಜನೆ ಮಾಡಲಾಗಿದ್ದು ಅನುಷ್ಠಾನಕ್ಕೆ ಸಮಯ ಬೇಕಾಗುತ್ತದೆಆಸಾದ್ ಉರ್ ರೆಹಮಾನ್ ಶರೀಫ್ ಆಯುಕ್ತ ಮಹಾನಗರಪಾಲಿಕೆ ಮೈಸೂರು
‘ಗೈಡ್‌ಗಳಾಗಿ ವಿದ್ಯಾರ್ಥಿಗಳ ಬಳಕೆಗೆ ಚಿಂತನೆ’ ‘ನಗರದ ಅರಮನೆ ಸುತ್ತಮುತ್ತ ಪ್ರವಾಸಿಗರಿಗೆ ಮಾಹಿತಿ ನೀಡುವ ಕಿಯೋಸ್ಕ್‌ಗಳನ್ನು ಅಲ್ಲಲ್ಲಿ ಹಾಕಲು ಆರ್ಡರ್ ಕೊಡಲಾಗಿದೆ. ನಮ್ಮ ಪ್ರವಾಸಿ ಗೈಡ್‌ಗಳನ್ನು ಬಳಸಿಕೊಳ್ಳಲಾಗುವುದು. ದಸರಾ ವೇಳೆಗೆ ಕಿಯೋಸ್ಕ್‌ಗಳು ದೊರೆಯುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳ ಮೂಲಕ ಮಹಿತಿ ಕೊಡಿಸುವ ಕಾರ್ಯಕ್ಕಾಗಿ ಕೆಲವು ಪದವಿ ಕಾಲೇಜುಗಳನ್ನು ಸಂಪರ್ಕಿಸಿದ್ದೇವೆ. ಇಂತಿಷ್ಟು ಗೌರವಧನ ನೀಡಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಮಾಹಿತಿ ಕರಪತ್ರಗಳನ್ನೂ ಮುದ್ರಿಸಿ ಕಿಯೋಸ್ಕ್‌ಗಳಲ್ಲಿ ಇಡಲಾಗುವುದು. ಪ್ರವಾಸಿಗರು ಅದನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.