ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡಿಯುವ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸೂಚನೆ
Published 22 ಮೇ 2024, 16:08 IST
Last Updated 22 ಮೇ 2024, 16:08 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.

ಜಿಲ್ಲೆಯ ತಹಶೀಲ್ದಾರ್‌ಗಳು, ಪಿಡಿಒಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಮಹಾನಗರ ಪಾಲಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ತಕ್ಷಣ ಆಯಾ ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶುದ್ಧ ನೀರು ಪೂರೈಕೆಗೆ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಗ್ರಾಮಗಳಲ್ಲಿ ಸ್ವಚ್ಛತೆ, ಚರಂಡಿಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ನೀರುಗಂಟಿಗಳು, ಆಶಾ ಕಾರ್ಯಕರ್ತೆಯರನ್ನು ಆ ಗ್ರಾಮದ ಪ್ರತಿ ಮನೆಗೂ ಕಳುಹಿಸಿ ನೀರಿನ ಶೇಖರಣೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ ಕರುಳು ಬೇನೆಗೆ ಒಳಗಾದವರಿಗೆ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಕಾಯ್ದಿರಿಸಬೇಕು. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾದರೆ ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹೋಟೆಲ್‌, ರಸ್ತೆಯ ಬದಿಯ ಫಾಸ್ಟ್‌ಫುಡ್‌ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು’ ಎಂದು ಹೇಳಿದರು.

‘ಗ್ರಾಮೀಣ ಜನವಸತಿ ಪ್ರದೇಶಗಳ ನೀರಿನ ಮೂಲ, ಸಂಗ್ರಹಣೆ ಹಾಗೂ ಪೂರೈಕೆಯ ಬಗ್ಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕೊಳವೆಬಾವಿಗಳ ಸುತ್ತ ಚರಂಡಿ ನೀರು ಸೇರದಂತೆ ತಡೆಯಬೇಕು. ಯಾವುದೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ 0821-2526355 ಅಥವಾ 0821-2423800, 1077 (ನಿಯಂತ್ರಣ ಕೊಠಡಿ) ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಪೈಪ್‌ಗಳು ರಸ್ತೆ– ಚರಂಡಿಗಳ ಮೂಲಕ ಹಾದು ಹೋಗಿ ಒಡೆದಿದ್ದರೆ ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಕಲುಷಿತ ನೀರು ಸೇರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ಡಿಎಚ್‌ಒ ಡಾ.‍ಪಿ.ಸಿ. ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇಇ ರಂಜಿತ್‌ಕುಮಾರ್ ಪಾಲ್ಗೊಂಡಿದ್ದರು.

ನಿಯಂತ್ರಣ ಕೊಠಡಿ ಸ್ಥಾಪನೆ

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ಆರೋಗ್ಯ ಸಂಬಂಧಿ ಪ್ರಕರಣಗಳು ಕಂಡುಬಂದಲ್ಲಿ ದೂರುಗಳನ್ನು ದಾಖಲಿಸಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ತಿಳಿಸಿದರು. ಕೇಂದ್ರ;ದೂರವಾಣಿ ಸಂಖ್ಯೆ ಜಿಲ್ಲಾಧಿಕಾರಿ ಕಚೇರಿ;0821-2423800 1077 ಮೈಸೂರು ತಾಲ್ಲೂಕು;0821-2414812 ನಂಜನಗೂಡು ತಾಲ್ಲೂಕು;08221-223108 ತಿ.ನರಸೀಪುರ ತಾಲ್ಲೂಕು;08227-260210 ಹುಣಸೂರು ತಾಲ್ಲೂಕು;08222-252959 ಕೆ.ಆರ್. ನಗರ ತಾಲ್ಲೂಕು;08223-262371 ಸಾಲಿಗ್ರಾಮ ತಾಲ್ಲೂಕು;08223-283833 ಪಿರಿಯಾಪಟ್ಟಣ ತಾಲ್ಲೂಕು;08223-274175 ಎಚ್.ಡಿ.ಕೋಟೆ ತಾಲ್ಲೂಕು;08228-255325 ಸರಗೂರು ತಾಲ್ಲೂಕು;08228-296100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT