ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಸೌಜನ್ಯ ಪ್ರಕರಣ; ಹೋರಾಟಕ್ಕೆ ನಿರ್ಧಾರ

Published 13 ಜುಲೈ 2023, 16:49 IST
Last Updated 13 ಜುಲೈ 2023, 16:49 IST
ಅಕ್ಷರ ಗಾತ್ರ

ಮೈಸೂರು: ‘ಧರ್ಮಸ್ಥಳದ ಯುವತಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕಾನೂನಿನ ಹೋರಾಟವನ್ನು ಮುಂದುವರಿಸಬೇಕು. ರಾಜ್ಯದಾದ್ಯಂತ ಈ ಬಗ್ಗೆ ಜಾಗೃತಿ ಮತ್ತು ಹೋರಾಟ ಹಮ್ಮಿಕೊಳ್ಳಬೇಕು’ ಎಂದು ಗುರುವಾರ ಇಲ್ಲಿನ ಒಡನಾಡಿ ಸಂಸ್ಥೆ ಆವರಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಕರಣದ ನ್ಯಾಯಬದ್ಧ ತನಿಖೆಗೆ ಒತ್ತಾಯಿಸಿ ಒಡನಾಡಿ ಸಂಸ್ಥೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಜನತಂತ್ರ ಜಾಗೃತಿ ವೇದಿಕೆ ಸಹಯೋಗದಲ್ಲಿ ನಡೆದ ಸಂವಾದದಲ್ಲಿ, ಕಾನೂನಿನ ಹೋರಾಟದ ಜೊತೆಗೆ ಧರ್ಮಸ್ಥಳ ಚಲೋ, ಉಜಿರೆಯಲ್ಲಿ ಸಮಾವೇಶ ಹಾಗೂ ನೈಜ ಆರೋಪಿಗಳ ವಿರುದ್ಧ ತನಿಖೆಗೆ ಒತ್ತಾಯಿಸಿ ಹೊಸ ದೂರು ದಾಖಲಿಸಲು ನಿರ್ಧರಿಸಲಾಯಿತು. ಮೊದಲ ಹಂತವಾಗಿ ಜು. 17ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳಲು ಸಭೆಯು ನಿರ್ಧರಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಹೋರಾಟಗಾರ ಮಹೇಶ್‌ಶೆಟ್ಟಿ ತಿಮರೊಡಿ ಮಾತನಾಡಿ, ‘ಧರ್ಮಕ್ಕೆ ಹೆಸರಾದ ಧರ್ಮಸ್ಥಳದಲ್ಲಿ ಪದ್ಮಾ, ನೇತ್ರಾವತಿ, ವೇದಾವತಿ ಸೇರಿದಂತೆ ಅನೇಕ ಬಾಲಕಿಯರ ಹತ್ಯೆ ಪ್ರಕರಣಗಳು ಜನರ ನಿದ್ದೆಗೆ‌ಡಿಸಿವೆ. 2012ರ ಅಕ್ಟೋಬರ್‌ 9ರಂದು ನಡೆದ ಪ್ರಕರಣ ಇಡೀ ಸಮಾಜವೇ ತಲೆತಗ್ಗಿಸುವಂತಹದ್ದು. ಆದರೆ ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ’ ಎಂದು ದೂರಿದರು.

‘ದೂರು ದಾಖಲಿಸಲು ಹೋದವರನ್ನು ಪೊಲೀಸರು ಸತಾಯಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಸಿಲ್ಲ. ನ್ಯಾಯ ಸಂಧಾನಕ್ಕೆ ಹೋದ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ನಕ್ಸಲ್‌ ಜೊತೆ ನಂಟಿದೆ ಎಂದು ಸುದ್ದಿ ಹಬ್ಬಿಸಿ ನನ್ನನ್ನು ಎನ್‌ಕೌಂಟರ್‌ ಮಾಡುವ ಪ್ರಯತ್ನವೂ ನಡೆದಿತ್ತು. ಪೊಲೀಸರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿದರು.

ಮಗಳ ಸಾವಿಗೆ ನ್ಯಾಯ ಸಿಗುವ ಭರವಸೆ ಉಳಿದಿಲ್ಲ. ಅವಳಂತೆ ಇನ್ನೊಬ್ಬಳಿಗೆ ಅನ್ಯಾಯವಾಗಬಾರದೆಂದರೆ ಹೋರಾಟ ಅನಿವಾರ್ಯ.
ಕುಸುಮಾ, ಮೃತ ಸೌಜನ್ಯಳ ತಾಯಿ

2001ರಿಂದ 2012ರ ವರೆಗೆ ಧರ್ಮಸ್ಥಳವನ್ನು ಒಳಗೊಂಡು ಬೆಳ್ತಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 462 ಅಸಹಜ ಸಾವು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 90 ಯುವತಿಯರಿದ್ದಾರೆ. ಅಲ್ಲಿನ ಅತ್ಯಾಚಾರ, ಹತ್ಯೆಗಳ ಭೀಕರತೆಯನ್ನು ಜನರಿಂದಲೇ ಕೇಳಿ ತಿಳಿಯಬೇಕು. ಆ ಬಗ್ಗೆ ಮಾತನಾಡಿದವರಿಗೆ ಉಳಿಗಾಲವಿಲ್ಲ. ಆದರೆ 2012ರಲ್ಲಿ ಸೌಜನ್ಯ ಪ್ರಕರಣದ ತರುವಾಯ ಜನ ಎಚ್ಚೆತ್ತು ಪ್ರತಿಭಟಿಸಿದ್ದರಿಂದ ಪ್ರಕರಣಗಳು ಕಡಿಮೆಯಾಗಿವೆ’ ಎಂದರು.

ಸೌಜನ್ಯ ತಾಯಿ ಕುಸುಮಾ ಮಾತನಾಡಿ, ‘ದೂರು ಪಡೆಯಲು ಪೊಲೀಸರು ಹಿಂದೇಟು ಹಾಕಿದರು. ತನಿಖೆ ನೆಪದಲ್ಲಿ ಮನೆಗೆ ಬಂದು, ಮಗಳ ಒಳ ಉಡುಪುಗಳನ್ನು ಪಡೆದರು. ನಂತರ, ಅವು ಕೊಲೆಯಾದ ಜಾಗದಲ್ಲಿ ಸಿಕ್ಕಿತೆಂದು ಬಿಂಬಿಸಿದರು. ಪ್ರಕರಣದಲ್ಲಿ ಧರ್ಮಸ್ಥಳದ ಹೆಸರೆತ್ತದಂತೆ ಅಧಿಕಾರಿಯೊಬ್ಬರು ತಾಕೀತು ಮಾಡಿದ್ದರು’ ಎಂದು ಆರೋಪಿಸಿದರು.

ಲೇಖಕ ಜಿ.ಪಿ. ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಡನಾಡಿ ಸಂಸ್ಥೆಯ ಎಂ.ಎಲ್‌.ಪರಶುರಾಮ್, ಸ್ಟ್ಯಾನ್ಲಿ ಪಾಲ್ಗೊಂಡಿದ್ದರು.

‘ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿ’

‘ಪೊಲೀಸ್ ತನಿಖೆಯಲ್ಲಿ ಲೋಪವಾಗಿರುವುದನ್ನು ನ್ಯಾಯಾಲಯ ಒಪ್ಪಿರುವ ಅಂಶವನ್ನೇ ಮುಂದಿಟ್ಟುಕೊಂಡು ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು’ ಎಂದು ವಕೀಲ ಶ್ರೀನಿವಾಸ್‌ ಸಲಹೆ ನೀಡಿದರು. ‘ಪ್ರಕರಣದ ಇಡೀ ತನಿಖೆಯಲ್ಲಿ ಇಂಚಿಂಚು ಲೋಪವಿದ್ದು ತನಿಖಾಧಿಕಾರಿ ಪೊಲೀಸರೇ ನಿಜವಾದ ಆರೋಪಿಗಳು. ರಸ್ತೆಪಕ್ಕದಲ್ಲೇ ಶವ ಸಿಕ್ಕಿದ್ದರೂ ಸಮೀಪದ ಪ್ರಕೃತಿ ಚಿಕಿತ್ಸಾಲಯದ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿಲ್ಲ. ಬಾಲಕಿಯ ಬಟ್ಟೆ ಮೈಯೆಲ್ಲ ಕೆಸರಾಗಿದ್ದರೂ ಶಾಲೆ ಬ್ಯಾಗು ಪುಸ್ತಕ ಕೆಸರಾಗಿಲ್ಲವೇಕೆ? ಆರೋಪಿಯ ಪಂಚೆಯಲ್ಲಿ ಸಿಕ್ಕ ಇನ್ನಿಬ್ಬರ ಕೂದಲು ಯಾರದ್ದು? ಕೃತ್ಯ ನಡೆದ ದಿನ ಬಾಲಕಿ ತೊಟ್ಟಿದ್ದ ಒಳಉಡುಪನ್ನು ಹುಡುಕದೇ ಆಕೆಯ ಮನೆಗೆ ಹೋಗಿ ಪಡೆದದ್ದು ಯಾಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT