ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಕೌಟಿಲ್ಯ ವೃತ್ತದಲ್ಲಿ ಪಾದರಸದಂತೆ ಕಾರ್ಯನಿರ್ವಹಿಸುವ 79 ವರ್ಷದ ವ್ಯಕ್ತಿ

Last Updated 29 ಜನವರಿ 2023, 6:47 IST
ಅಕ್ಷರ ಗಾತ್ರ

ಮೈಸೂರು: 79ರ ಇಳಿವಯಸ್ಸಿನ ಆ ವ್ಯಕ್ತಿ ರಸ್ತೆಗಿಳಿದರೆ ವಾಹನ ಸವಾರರು, ಚಾಲಕರಲ್ಲಿ ಶಿಸ್ತು ಮೂಡುತ್ತದೆ. ಮನಬಂದಂತೆ ನುಗ್ಗುವವರು ಸಂಚಾರ ನಿಯಮ ಪಾಲಿಸಲು ಮುಂದಾಗುತ್ತಾರೆ. ದಟ್ಟಣೆಯ ಅವಧಿಯಲ್ಲೂ ವಾಹನಗಳ ಓಡಾಟ ಸುಗಮವಾಗುತ್ತದೆ!

ಉತ್ಸಾಹದ ಬುಗ್ಗೆಯಂತೆ ಕಾಣುವ ಆ ವ್ಯಕ್ತಿ ಎ.ಮಹೇಶ್ವರ. ಟ್ರಾಫಿಕ್‌ ವಾರ್ಡನ್‌ ಆಗಿರುವ ಅವರು ನಿತ್ಯ ಸಂಜೆ 4.30ಕ್ಕೆ ನಗರದ ಕ್ರಾಫರ್ಡ್‌ ಹಾಲ್‌ ಸಮೀಪದ ಕೌಟಿಲ್ಯ ವೃತ್ತದಲ್ಲಿ ಇರುತ್ತಾರೆ. ಅಲ್ಲಿ ನಿಂತು ಸಂಜೆ 6.30ರವರೆಗೂ ವಾಹನಗಳ ಸಂಚಾರವನ್ನು ನಿರ್ವಹಿಸುತ್ತಾರೆ.

ಈ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ ಇಲ್ಲ. ಪೊಲೀಸ್‌ ಚೌಕಿ ಬಿಟ್ಟರೆ ಬೇರೇನೂ ಇಲ್ಲ. ಇಲ್ಲಿ ಸಂಜೆ ಸಂದರ್ಭದಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ವಾಹನಗಳು ಒಮ್ಮೆಲೆ ನುಗ್ಗುವುದರಿಂದ ಸಂಚಾರ ದಟ್ಟಣೆಯೂ ಉಂಟಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಟ್ರಾಫಿಕ್‌ ವಾರ್ಡನ್‌ ಎ.ಮಹೇಶ್ವರ ಅವರನ್ನು ನಿಯೋಜಿಸಲಾಗಿದೆ. ಪಾದರಸದಂತೆ ಕಾರ್ಯನಿರ್ವಹಿಸುವ ಅವರು ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

‘ದೇಶಕ್ಕೆ ಹಾಗೂ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಟ್ರಾಫಿಕ್‌ ವಾರ್ಡನ್‌ ಆಗಿದ್ದೇನೆ. ನಿಯಮ ಉಲ್ಲಂಘಿಸಿದರೆ ಅಪಘಾತ ಸಂಭವಿಸಿ ಸಾವು–ನೋವು ಉಂಟಾಗುತ್ತದೆ. ಕುಟುಂಬ ಸದಸ್ಯರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲೆಂದೇ ಕೌಟಿಲ್ಯ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ’ ಎಂದು ಮಹೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನ ಸವಾರರು, ಚಾಲಕರು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡುತ್ತಿದ್ದಾರೆ. ಕೆಲವರು ಹಣ್ಣಿನ ರಸ, ಕಬ್ಬಿನ ರಸ, ಚಾಕೋಲೆಟ್‌, ಮಾಸ್ಕ್‌ ಮೊದಲಾದವುಗಳನ್ನು ತಂದು ಕೊಡುತ್ತಾರೆ. ಬೇಡ ಎಂದರೂ ಬಿಡುವುದಿಲ್ಲ’ ಎಂದರು.

‘ದೇಶ ಸೇವೆ ಆಸೆಯಿಂದ 1983ರಲ್ಲಿ ಸೇನೆಗೆ ಸೇರಿದ್ದೆ. ಆದರೆ, ಮನೆಯವರ ಒತ್ತಡದಿಂದಾಗಿ 2 ವರ್ಷಗಳ ಬಳಿಕ ವಾಪಸಾದೆ. ನಂತರ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌‌’ ಪತ್ರಿಕೆಯ ಏಜೆಂಟ್‌ ಆದೆ. 1993ರಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಗಳ (ಎಸ್‌ಪಿಒ) ನೇಮಕದ ಜಾಹೀರಾತು ಪ್ರಕಟಗೊಂಡಿತ್ತು. ಅದನ್ನು ನೋಡಿ ಆ ಹುದ್ದೆಗೆ ಸೇರಿದೆ. ಪ್ರತಿಭಟನೆ, ಗಲಾಟೆ, ಲೂಟಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡುವುದು ನಮ್ಮ ಕೆಲಸವಾಗಿತ್ತು. ಇದಕ್ಕೆ ಸಂಬಳ ಇರಲಿಲ್ಲ’ ಎಂದು ತಿಳಿಸಿದರು.

‘1991ರಲ್ಲಿ ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸಲು ಟ್ರಾಫಿಕ್‌ ವಾರ್ಡನ್‌ಗಳನ್ನು ನೇಮಿಸಲಾಯಿತು. ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದೆವು. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಟ್ರಾಫಿಕ್‌ ವಾರ್ಡನ್‌ ಆಗಿ ಕಾರ್ಯನಿರ್ವಹಿಸಲು 2013ರಲ್ಲಿ ಅಂದಿನ ನಗರ ಪೊಲೀಸ್‌ ಕಮಿಷನರ್‌ ಎಂ.ಎ.ಸಲೀಂ ಅವಕಾಶ ಕಲ್ಪಿಸಿದರು. ಹೀಗಾಗಿ, ನೇರವಾಗಿ ಜನರಿಗೆ ಸೇವೆ ಸಲ್ಲಿಸುವ ಟ್ರಾಫಿಕ್‌ ವಾರ್ಡನ್‌ಗೆ ಸೇರಿಕೊಂಡೆ. ಜೀವ ಇರುವವರೆಗೂ ಸೇವೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಟ್ರಾಫಿಕ್‌ ವಾರ್ಡನ್‌ಗಳಾದ ನಿವೃತ್ತ ನೌಕರರು

‘ಟ್ರಾಫಿಕ್‌ ವಾರ್ಡನ್‌ಗಳು ಸೇರಿ ಮೈಸೂರು ಸಿಟಿ ಪೊಲೀಸ್‌ ಟ್ರಾಫಿಕ್‌ ವಾರ್ಡನ್‌ ಅಸೋಸಿಯೇಷನ್‌ ಸ್ಥಾಪಿಸಿಕೊಂಡಿದ್ದು, ಸದ್ಯ 19 ಮಂದಿ ಸಕ್ರಿಯವಾಗಿದ್ದಾರೆ. ಇನ್ನೂ 15 ಮಂದಿ ಸೇರಲಿದ್ದಾರೆ. ವಿವಿಧ ಸಂಸ್ಥೆ ಹಾಗೂ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಟ್ರಾಫಿಕ್‌ ವಾರ್ಡನ್‌ಗಳಾಗಿ ಕೆಲಸ ಮಾಡಬಹುದು. ಇದಕ್ಕೆ ಸಂಭಾವನೆ ಬರುವುದಿಲ್ಲ. ಜನಜಂಗುಳಿ ಸೇರುವ ರಸ್ತೆ ಹಾಗೂ ವೃತ್ತಗಳಿಗೆ ವಾರ್ಡನ್‌ಗಳನ್ನು ನಿಯೋಜಿಸಲಾಗುತ್ತದೆ’ ಎಂದು ಅಸೋಸಿಯೇಷನ್‌ನ ನಾಯಕಿ ಮಾಲಿನಿ ಆರ್‌. ಪಾಲಾಕ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು 12 ವರ್ಷಗಳಿಂದ ಟ್ರಾಫಿಕ್‌ ವಾರ್ಡನ್‌ ಆಗಿ ಕೆ.ಆರ್‌. ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT