ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲವೂ ತೀರ್ಮಾನವಾಗಿದೆ, ಸ್ವಲ್ಪ ದಿನ ಕಾಯಿರಿ: ಒಕ್ಕಲಿಗರ ಸಭೆಯಲ್ಲಿ ಡಿಕೆಶಿ

Published 15 ಏಪ್ರಿಲ್ 2024, 3:17 IST
Last Updated 15 ಏಪ್ರಿಲ್ 2024, 3:17 IST
ಅಕ್ಷರ ಗಾತ್ರ

ಮೈಸೂರು: ತಲೆಕೆಡಿಸಿಕೊಳ್ಳಬೇಡಿ. ಸ್ವಲ್ಪ ದಿನವಷ್ಟೇ ಕಾಯಿರಿ. ದೆಹಲಿಯಲ್ಲಿ ಏನಾಗಬೇಕೋ ಆ ತೀರ್ಮಾನ ಆಗಿದೆ. ಆ ಬಗ್ಗೆ ಚರ್ಚೆ ಬೇಡ. ನೀವು ನನ್ನ ಬೆಂಬಲವಾಗಿ ನಿಂತುಕೊಳ್ಳಿ ಸಾಕು.

– ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆ ಇದು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳನ್ನು ಕ್ರೋಡೀಕರಿಸುವ ಕಸರತ್ತಿನ ಭಾಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯಲ್ಲಂತೂ ನಮ್ಮವರಿಗೆ ಅವಕಾಶವಿಲ್ಲ. ಜೆಡಿಎಸ್‌ ಇನ್ಮುಂದೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನನಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.

‘ಮೈಸೂರಿನಲ್ಲಿ ನಮ್ಮ ಸಮಾಜದವರಿಗೆ ರಕ್ಷಣೆ ಇಲ್ಲ, ನಾಯಕತ್ವದ ಪ್ರಶ್ನೆಯೂ ಇದೆ ಎನ್ನುವುದು ನನಗೆ ಗೊತ್ತಿದೆ. ಈಗ ಕೆ. ವೆಂಕಟೇಶ್‌, ಕೆ. ಹರೀಶ್‌ ಗೌಡ ಮುಂದಾಳತ್ವ ವಹಿಸಿಕೊಂಡಿದ್ದಾರೆ. ನಾನು ಮೈಸೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ಲಕ್ಷ್ಮಣ ಅವರನ್ನು ಸೋಲಿಸಿದರೆ ನನಗೆ ಹಾಗೂ ಒಕ್ಕಲಿಗ ಸಚಿವರಿಗೆ ಬಹಳ ತೊಂದರೆ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

‘ಇಲ್ಲಿ 47 ವರ್ಷಗಳ ನಂತರ ಸಮಾಜದ ವ್ಯಕ್ತಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಅಭ್ಯರ್ಥಿ ರೈತ ಕುಟುಂಬದ ಹಿನ್ನೆಲೆಯ ಸಾಮಾನ್ಯ ಕಾರ್ಯಕರ್ತ. ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

‘ನಾನು ಹೆಚ್ಚು ಹೇಳಿಕೊಳ್ಳದಿರಬಹುದು. ಆದರೆ, ಸಮಾಜಕ್ಕೆ ಎಲ್ಲೆಲ್ಲಿ ಸಹಾಯ ಮಾಡಬೇಕೋ ಮಾಡಿದ್ದೇನೆ. ಈಗ ಮೈಸೂರು ಕ್ಷೇತ್ರವನ್ನು ಕಳೆದುಕೊಂಡರೆ ಮುಂದೆ ನಮಗೆ ಸಿಗುವುದಿಲ್ಲ ಎನ್ನುವುದನ್ನು ಮರೆಯಬೇಡಿ’ ಎಂದು ತಿಳಿಸಿದರು.

‘ಪ್ರತಾಪ ಸಿಂಹ ಹಾಗೂ ಡಿ.ವಿ.ಸದಾನಂದಗೌಡ ಕೊಡಬೇಕಾದ ಸಂದೇಶವನ್ನು ಈಗಾಗಲೇ ಕೊಟ್ಟಿದ್ದಾರೆ. ಇದನ್ನು ಸಮಾಜದವರು ಅರಿಯಬೇಕು’ ಎಂದರು.

‘ನಾನು ಬೆಳೆದು ಬಿಡುತ್ತೇನೆ ಎಂಬ ದೃಷ್ಟಿಯಿಂದ ಸೋಲಿಸಲು ಸ್ವತಃ ಕುಮಾರಸ್ವಾಮಿಯೇ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಬೇರೆ ಕಡೆ ಅವಕಾಶವಿದ್ದರೂ ಸ್ಪರ್ಧಿಸಲಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ನನ್ನನ್ನು ಮಂತ್ರಿಯನ್ನೇ ಮಾಡಿರಲಿಲ್ಲ. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಬರಲಿಲ್ಲ. ಆಗ, ಹಿಂದಿನದ್ದೆಲ್ಲವನ್ನೂ ಮರೆತು ನಾನೇ ಮುಂದಾಳತ್ವ ವಹಿಸಿಕೊಂಡೆ. ಮುಂದೆ ನಿಮ್ಮನ್ನು ಡಿಸಿಎಂ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು’ ಎಂದು ತಿಳಿಸಿದರು.

‘ದ್ವೇಷವನ್ನೆಲ್ಲ ಮರೆತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ, ಉಳಿಸಿಕೊಳ್ಳಬೇಕಾಗಿದ್ದುದು ಯಾರ ಜವಾಬ್ದಾರಿ ಆಗಿತ್ತು?’ ಎಂದು ಕೇಳಿದರು.

‘ಪರಿಸ್ಥಿತಿ ಸರಿ ಇಲ್ಲ ಅಮೆರಿಕಕ್ಕೆ ಹೋಗಬೇಡಿ ಎಂದು ಹೇಳಿದರೂ ಕುಮಾರಸ್ವಾಮಿ ಕೇಳಲಿಲ್ಲ. ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಬೀಗ ಹಾಕಿಕೊಂಡು ಕುಳಿತುಕೊಂಡರೆ ಹೇಗೆ ರಾಜಕಾರಣ ಮಾಡಲಾಗುತ್ತದೆ?’ ಎಂದು ಕೇಳಿದರು. ‘ನಾನು ವಿಷ ಹಾಕಿದೆ ಎಂದು ಈಗ ಹೇಳುತ್ತಾರೆ’ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.

‘ಜೆಡಿಎಸ್‌ ಪಕ್ಷವನ್ನು ಉಳಿಸಿಕೊಳ್ಳಬೇಡಿ ಎಂದು ನಾವೇನಾದರೂ ಹೇಳಿದ್ವಾ? ನಾವೇನೂ ಅವರನ್ನು ಮುಗಿಸಬೇಕಾಗಿಲ್ಲ. ಜೆಡಿಎಸ್‌ನ ಬಿಜೆಪಿಯವರೇ ಮುಗಿಸುತ್ತಾರೆ’ ಎಂದು ಹೇಳಿದರು.

‘ಹಾಸನದಲ್ಲಿ ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಲ್ಲಿ ಜನರೇ ಮೈತ್ರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕುಮಾರಸ್ವಾಮಿ ನನ್ನ ತಮ್ಮನ ವಿರುದ್ಧವೇ ಸ್ಪರ್ಧಿಸಬೇಕಿತ್ತು. ಅಲ್ಲಿ ಅವರೇ ಶಾಸಕ ಆಗಿದ್ದಾರಲ್ಲವೇ? ಪುಟ್ಟರಾಜುಗೆ ಹೇಳಿ ಹೇಳಿ ಕೊನೆಗೆ ಅವರೇ ಸ್ಪರ್ಧಿಸಿದ್ದಾರೆ. ಅಲ್ಲಿ ಕಾರ್ಯಕರ್ತರಿಗೆ ಬೆಳೆಯಲು ಅವಕಾಶವಿಲ್ಲ’ ಎಂದು ಟೀಕಿಸಿದರು.

‘ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದು ಒಕ್ಕಲಿಗರಾದ ನಮಗೇ ಅವಮಾನವಾಗಿದೆ’ ಎಂದರು.

ಸಚಿವರಾದ ಕೆ.ವೆಂಕಟೇಶ್ ಹಾಗೂ ಎನ್. ಚಲುವರಾಯಸ್ವಾಮಿ, ಶಾಸಕ ಕೆ.ಹರೀಶ್‌ ಗೌಡ, ವಿಧಾನಪರಿಷತ್‌ ಮಾಜಿ ಸದಸ್ಯ ಮರಿತಿಬ್ಬೇಗೌಡ, ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಹಾಗೂ ಸಮಾಜದ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT