ಸರಗೂರು: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆಯುಷ್ಮಾನ್ ಭವ ಅಭಿಯಾನವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಆಯುಷ್ಮಾನ್ ಭವ ಎಂಬುದು ಹೆಚ್ಚು ಕಾಲ ಬದುಕುವುದಕ್ಕೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ತಿಳಿಸುವುದು. ಇದು ಸೆ.17ರಿಂದ ಡಿ.31ರವರೆಗೆ ನಡೆಯಲಿದೆ. ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಗೆ ಹೆಚ್ಚು ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಒದಗಿಸಲಾಗುತ್ತದೆ’ ಎಂದರು.
‘ಮೊದಲ ವಾರದಲ್ಲಿ ಸಾಂಕ್ರಾಮಿಕ ರೋಗಗಳ ತಪಾಸಣೆ, ಎರಡನೇ ವಾರದಲ್ಲಿ ಕ್ಷಯ, ಚರ್ಮರೋಗ, ಇತರೆ ಸಾಂಕ್ರಾಮಿಕ ಕಾಯಿಲೆಗಳ ತಪಾಸಣೆ, 3ನೇ ವಾರದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, 4ನೇ ವಾರದಲ್ಲಿ ಕಣ್ಣಿನ ತಪಾಸಣೆ ಮತ್ತು ಸಿಕಲ್ ಸೆಲ್ ಅನೀಮಿಯಾ ಬಗ್ಗೆ ಆರೋಗ್ಯ ತಪಾಸಣೆ, ಪ್ರತಿ ಮಂಗಳವಾರ ಸಮುದಾಯ ಆರೋಗ್ಯಕ್ಕಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ಪ್ರತಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ತಪಾಸಣೆ ಶಿಬಿರವನ್ನು ಮಾಡಬೇಕು. ಆಭಾ ಕಾರ್ಡ್‌ಗಳನ್ನು ಮಾಡುವಂತಹ ಶಿಬಿರ ನಡೆಸಲಾಗುತ್ತದೆ. ಬಾಲಕಿಯರು ಗರ್ಭಿಣಿ ಆಗುತ್ತಿರುವ ಪ್ರಕರಣಗಳು ವರದಿ ಆಗುತ್ತಿದ್ದು, ಅದರ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಬೇಕು. ಎಲ್ಲಾ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮಚಂದ್ರ, ವೈದ್ಯಾಧಿಕಾರಿ ಡಾ.ಪಾರ್ಥಿಸಾರಥಿ ಮಾತನಾಡಿದರು.
ಪ್ರಸೂತಿ ತಜ್ಞ ಡಾ.ಪ್ರಭು, ಅರಿವಳಿಕೆ ತಜ್ಞೆ ಡಾ.ದೇವಿಕಾ, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ. ಅಭಿಷೇಕ್, ವೈದ್ಯೆ ಸುಜಾತಾ, ಹರ್ಷವರ್ಧನ್, ಸಿಬ್ಬಂದಿ ರವಿರಾಜ್ ಜಗದೀಶ್, ಶಾಂತಿ, ಪುಷ್ಪಲತಾ, ಮಹದೇವ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಾನಸಾ, ಶ್ವೇತಾ, ಮಂಜುಳಾ, ವಿದ್ಯಾ, ಶ್ವೇತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.