ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: BJP-JDS ದೋಸ್ತಿಯಲ್ಲಿ ಬಿರುಕು!

ಟಿಕೆಟ್‌ ಘೋಷಿಸಿದ ಬಿಜೆಪಿ, ‘ನಮಗೆ ಬಿಟ್ಟು ಕೊಡಲಾಗಿದೆ’ ಎನ್ನುತ್ತಿರುವ ಜೆಡಿಎಸ್!
Published 15 ಮೇ 2024, 7:46 IST
Last Updated 15 ಮೇ 2024, 7:46 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ದಿಂದ ವಿಧಾನಪರಿಷತ್‌ಗೆ ಜೂನ್‌ 3ರಂದು ನಡೆಯಲಿರುವ ಚುನಾವಣೆಗೆ ‘ಒಮ್ಮತದ ಅಭ್ಯರ್ಥಿ’ ಆಯ್ಕೆ ಸಂಬಂಧ ಬಿಜೆಪಿ–ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.

‘ಲೋಕಸಭೆ ಚುನಾವಣೆಯಲ್ಲಿ ಇದ್ದಂತೆ ಈ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ, ಸೀಟುಗಳ ಹಂಚಿಕೆ ಮಾಡಿಕೊಳ್ಳಲಾಗುತ್ತದೆ’ ಎಂದು ಎರಡೂ ಪಕ್ಷಗಳ ಮುಖಂಡರು ಹೇಳಿದ್ದರು. ಅದರಂತೆ, ಕ್ಷೇತ್ರವನ್ನು ಜೆಡಿಎಸ್‌ ಬಿಜೆಪಿಗೆ ಬಿಟ್ಟು ಕೊಟ್ಟಿತ್ತು. ಹೀಗಾಗಿ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್‌ ಗೌಡ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿತ್ತು. ಈ ನಡುವೆ, ‘ಕ್ಷೇತ್ರವನ್ನು ನಮಗೆ ಬಿಟ್ಟು ಕೊಡಲಾಗಿದೆ’ ಎಂದು ಜೆಡಿಎಸ್‌ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಇದು ಗೊಂದಲ ಮೂಡಿಸಿದ್ದು, ಈ ಬೆಳವಣಿಗೆಯು ಅಚ್ಚರಿಗೂ ಕಾರಣವಾಗಿದೆ.

ಬಿಜೆಪಿಯವರಿಂದ ಬಾರದ ಹೇಳಿಕೆ: ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವ ಬಗ್ಗೆಯಾಗಲೀ, ತಮ್ಮ ಪಕ್ಷದ ಅಭ್ಯರ್ಥಿ ಬದಲಾವಣೆ ಬಗ್ಗೆಯಾಗಲೀ ಬಿಜೆಪಿ ವರಿಷ್ಠರು ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಅಲ್ಲದೇ, ಜೆಡಿಎಸ್‌ನವರ ಹೇಳಿಕೆಯನ್ನು ತಿರಸ್ಕರಿಸಿಯೂ ಇಲ್ಲ! ಕ್ಷೇತ್ರ ಹಂಚಿಕೆಯ ವಿಷಯದಲ್ಲಿ ಹಾಗೂ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಬೆಳವಣಿಗೆಯು ಕುತೂಹಲದ ಘಟ್ಟ ತಲುಪಿದೆ. ಇದು, ಕಾಂಗ್ರೆಸ್‌ ಪಾಳಯದಲ್ಲಿ ನಗೆಪಾಟಿಲಿಗೆ ಒಳಗಾಗುವಂತೆಯೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ನಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಬಿ.ವಿವೇಕಾನಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯವರು ಟಿಕೆಟ್‌ ಘೋಷಿಸುತ್ತಿದ್ದಂತೆಯೇ ಇವರಿಬ್ಬರಿಗೂ ನಿರಾಸೆಯಾಗಿತ್ತು. ಈ ನಡುವೆ, ಜೆಡಿಎಸ್‌ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಮೊದಲಾದವರು ತಮ್ಮ ಪರವಾಗಿ ಬ್ಯಾಟ್ ಮಾಡುತ್ತಿರುವುದು ಅವರಿಗೆ ಕೊಂಚ ಸಮಾಧಾನ ತಂದಿದೆ. ಆದರೆ, ಯಾವುದೂ ಸ್ಪಷ್ಟವಾಗದೇ ಇರುವುದು ಅಭ್ಯರ್ಥಿಗಳ ತಳಮಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಶ್ರೀಕಂಠೇಗೌಡ ಅವರಿಗೆ ಖಾತ್ರಿ!: ಜೆಡಿಎಸ್‌ಗೆ ಕ್ಷೇತ್ರ ದೊರೆತದ್ದೇ ಆದಲ್ಲಿ ಕೆ.ಟಿ. ಶ್ರೀಕಂಠೇಗೌಡ ಅವರಿಗೆ ಟಿಕೆಟ್‌ ಖಾತ್ರಿ ಎನ್ನಲಾಗುತ್ತಿದೆ. ವಿವೇಕಾನಂದ ಕೂಡ ಆಶಾಭಾವ ಹೊಂದಿದ್ದಾರೆ. ಬಿಜೆಪಿ ಕ್ಷೇತ್ರವನ್ನು ಬಿಟ್ಟು ಕೊಟ್ಟಲ್ಲಿ, ‘ಪಟ್ಟಿಯಲ್ಲಿ ಬಂದ ತುತ್ತು ಕೈಗೆ ಬರಲಿಲ್ಲ’ ಎಂಬಂತಹ ಸ್ಥಿತಿ ನಿಂಗರಾಜ್‌ ಗೌಡ ಅವರಿಗೆ ಆಗಲಿದೆ. ಅವರು ‘ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ; ನಾನೇ ಎನ್‌ಡಿಎ ಅಭ್ಯರ್ಥಿಯಾಗಿದ್ದೇನೆ. ಮೇ 16ರಂದು ನಾಮಪತ್ರ ಸಲ್ಲಿಸಲಿದ್ದೇನೆ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ, ಒಕ್ಕಲಿಗಾಸ್ತ್ರವನ್ನೂ ಪ್ರಯೋಗಿಸುತ್ತಿದ್ದಾರೆ!

ಅವರಿಗೆ ವರಿಷ್ಠರಿಂದ ‘ಬಿ ಫಾರಂ’ ಸಿಗುತ್ತದೆಯೋ, ಇಲ್ಲವೋ? ಅವಕಾಶ ತಪ್ಪಿದಲ್ಲಿ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.

ನಾಮಪತ್ರ ಸಲ್ಲಿಕೆಗೆ ಮೇ 16 (ಗುರುವಾರ) ಕೊನೆಯ ದಿನವಾಗಿದೆ. ಹೀಗಾಗಿ, ಉಳಿದ ಎರಡು ದಿನಗಳ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿವೆ. ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಬಿಜೆಪಿ ಪಾಳಯದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಅವರ ‘ಮೌನವು ಸಮ್ಮತಿಯ ಲಕ್ಷಣ’ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ!

ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಕಂಡುಬಂದಿಲ್ಲ. ಮರಿತಿಬ್ಬೇಗೌಡ ಒಮ್ಮತದ ಅಭ್ಯರ್ಥಿಯಾಗಿದ್ದು, ನಾಮಪತ್ರ ಸಲ್ಲಿಸಿದ್ದಾರೆ.

ಈ.ಸಿ. ನಿಂಗರಾಜ್‌ಗೌಡ
ಈ.ಸಿ. ನಿಂಗರಾಜ್‌ಗೌಡ
ಕೆ.ಟಿ. ಶ್ರೀಕಂಠೇಗೌಡ
ಕೆ.ಟಿ. ಶ್ರೀಕಂಠೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದು ನಿಜ. ಬಿಜೆಪಿ ಘೋಷಿತ ಅಭ್ಯರ್ಥಿಗೆ ‘ಬಿ ಫಾರಂ’ ಸಿಗುವುದಿಲ್ಲ. ನಾವು ಮೇ 15ರಂದು ನಮ್ಮ ಅಭ್ಯರ್ಥಿ ಆಂತಿಮಗೊಳಿಸಲಿದ್ದೇವೆ

–ಜಿ.ಟಿ.ದೇವೇಗೌಡ ಜೆಡಿಎಸ್‌ ಪ್ರಮುಖರ ಸಮಿತಿ ಅಧ್ಯಕ್ಷ

ನಮ್ಮಲ್ಲಿ ಒಮ್ಮೆ ಅಭ್ಯರ್ಥಿ ಘೋಷಿಸಿದ ಮೇಲೆ ಬದಲಾಯಿಸುವ ಪ್ರಶ್ನೆಯೇ ಬರುವುದಿಲ್ಲ. ಜೆಡಿಎಸ್‌ ನಾಯಕರು ಗೊಂದಲ ಮೂಡಿಸುತ್ತಿದ್ದಾರೆ. ನನಗೆ ಟಿಕೆಟ್‌ ಘೋಷಿಸಿದ್ದು ಸ್ಪರ್ಧೆಗೆ ಸಿದ್ಧತೆ ನಡೆಸಿದ್ದೇನೆ

–ಈ.ಸಿ. ನಿಂಗರಾಜ್‌ ಗೌಡ ಬಿಜೆಪಿ

ಕ್ಷೇತ್ರ ಹಂಚಿಕೆ ವಿಷಯ ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚಿಸಲಾಗಿದೆ. ಬುಧವಾರ ಸ್ಪಷ್ಟ ಚಿತ್ರಣ ದೊರೆಯಲಿದೆ –ಟಿ.ಎಸ್. ಶ್ರೀವತ್ಸ ಶಾಸಕ ಬಿಜೆಪಿ

ಮೊದಲ ಬಾರಿಗೆ ಮುಖಾಮುಖಿ!

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇದೇ‌ ಮೊದಲ ಬಾರಿಗೆ ಮರಿತಿಬ್ಬೇಗೌಡ ಹಾಗೂ ಕೆ.ಟಿ. ಶ್ರೀಕಂಠೇಗೌಡ ಮುಖಾಮುಖಿ ಆಗುತ್ತಿದ್ದಾರೆ. ಶ್ರೀಕಂಠೇಗೌಡ ಪದವೀಧರ ಕ್ಷೇತ್ರದಿಂದ ‌ಶಿಕ್ಷಕರ ಕ್ಷೇತ್ರಕ್ಕೆ ಕ್ಷೇತ್ರಾಂತರ ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಒಂದೇ ಪಕ್ಷದಲ್ಲಿ (ಜೆಡಿಎಸ್) ಅವರು ಇದ್ದರು. ಇಬ್ಬರೂ ಮಂಡ್ಯ ಜಿಲ್ಲೆಯವರು. ಈ ಕ್ಷೇತ್ರದಲ್ಲಿ ಬಿಜೆಪಿ ಈವರೆಗೆ ಒಮ್ಮೆಯೂ ಗೆದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT