ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಮೈಸೂರು ರಂಗಾಯಣದ ನೂತನ ನಿರ್ದೇಶಕ ಸತೀಶ್‌ ತಿಪಟೂರು ಅವರೊಂದಿಗೆ...

‘ಮನೆಮನೆಗೆ ರಂಗಾಯಣ’
Published 14 ಆಗಸ್ಟ್ 2024, 6:26 IST
Last Updated 14 ಆಗಸ್ಟ್ 2024, 6:26 IST
ಅಕ್ಷರ ಗಾತ್ರ

ಮೈಸೂರು: ವರ್ಷದಿಂದಲೂ ತೆರವಾಗಿದ್ದ ಇಲ್ಲಿನ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಸತೀಶ್‌ ತಿಪಟೂರು ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಅವರು 25 ವರ್ಷಗಳಿಂದ ‘ಭೂಮಿ ಥಿಯೇಟರ್‌’ ಮೂಲಕ ರಂಗಭೂಮಿಗೆ ಕಾಣ್ಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ 1971ರ ಜ.29ರಂದು ಕಲಾ ಕುಟುಂಬದಲ್ಲಿ ಜನಿಸಿದ ಸತೀಶ್, ಕಲ್ಪತರು ತಾಂತ್ರಿಕ ವಿದ್ಯಾಲಯದಲ್ಲಿ ‘ಕಂಪ್ಯೂಟರ್ ಸೈನ್ಸ್’ ಪದವಿ ಪಡೆದಿದ್ದಾರೆ. ನಂತರ ರಂಗಭೂಮಿಗೆ ಹೊರಳಿದ ಅವರು, ಬೆಂಗಳೂರಿನ ‘ಅಭಿನಯ ತರಂಗ’ ಕಲಾಶಾಲೆ, ಹೆಗ್ಗೋಡಿನ ನೀನಾಸಂನಲ್ಲಿ ಪದವಿ ಪಡೆದಿದ್ದಾರೆ.

‘ಚಮ್ಮಾರನ ಹೆಂಡತಿ’, ‘ಚಿತ್ರದ ಬೆನ್ನು’, ‘ಗೋಡೆಗಳು’, ‘ಸಾಹೇಬರು ಬರುತ್ತಾರೆ’, ‘ಆಮನಿ’, ‘ನೀಲಿ ಕುದುರೆ’, ‘ಹಕ್ಕಿ ಹಾಡು’, ‘ಮಣ್ಣಿನ ಮನೆ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿರುವ ಅವರು, ‘ಹಗ್ಗದಕೊನೆ’, ‘ಬೆಕ್ಕುಬಾವಿ’, ‘ಸಾಂಬಶಿವ ಪ್ರಹಸನ’, ‘ಭಟ್ಟರ ಮಗಳು’, ‘ಮಾಸತಿ’, ‘ಅಹಲ್ಯೆ’, ‘ಮೃಚ್ಛಕಟಿಕ’, ‘ಈ ನರಕ ಈ ಪುಲಕ’ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

‘ಮಣ್ಣಿನ ಬಂಡಿಯಲ್ಲಿ ಫುಕುವೋಕಾ– ರಂಗಕೃಷಿಯ ಆತ್ಮಾವಲೋಕನ’, ‘ಮಣ್ಣಿನ ಮನೆ’ ಅವರ ಪ್ರಕಟಿತ ನಾಟಕಗಳು.

ರಂಗಾಯಣ, ನೀನಾಸಂ, ಆದಿಮ, ಕಿನ್ನರಮೇಳ, ಮೂಡಲಪಾಯ ಯಕ್ಷಗಾನ ಕೇಂದ್ರ, ಥಿಯೇಟರ್ ಸಮುರಾಯ್ಸ್ ಸೇರಿದಂತೆ ಹಲವು ರಂಗ ಸಂಸ್ಥೆಗಳಿಗೆ ನಿರ್ದೇಶಕ, ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿರುವ ಅವರು, ಸಮಾಜವಾದಿ ಚಳವಳಿಗಳಲ್ಲೂ ಗುರುತಿಸಿಕೊಂಡಿದ್ದವರು. ಹೊಸ ಜವಾಬ್ದಾರಿ ಹೆಗಲೇರಿರುವ ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಪ್ರ

ರಂಗಾಯಣ ನಿರ್ದೇಶಕರಾಗಿ ನಿಮ್ಮ ಕನಸುಗಳೇನು?

ಬಹುತ್ವದ ನೆಲೆಯಲ್ಲಿ ಮನೆಮನೆಗೆ ರಂಗಾಯಣವನ್ನು ಕೊಂಡೊಯ್ಯುವುದು ನನ್ನ ಆಶಯ. ಕಾಲದ ಅಗತ್ಯಕ್ಕೆ ತಕ್ಕಂತೆ ರಂಗ ಭಾಷೆ ರೂಪಿಸಬೇಕು. ಕಲಾವಿದರು, ತಂತ್ರಜ್ಞರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನು ನಿರ್ಮಿಸಬೇಕು. ರಂಗಾಯಣದ ಸಮುದಾಯೀಕರಣ ಆಗಬೇಕಿದೆ.

ಪ್ರ

ಭಾರತೀಯ ರಂಗ ಶಿಕ್ಷಣ ಕೇಂದ್ರದ ಮೂಲಕ ನಿಮ್ಮ ಯೋಜನೆಗಳೇನು?

ಹೊಸ ರಂಗಪಠ್ಯಗಳು ರೂಪುಗೊಳ್ಳಬೇಕು. ನಟ, ಕಲಾವಿದ ಕೌಶಲಕ್ಕೆ ಸಾಮಾಜಿಕ ಮನ್ನಣೆ ಸಿಗಬೇಕು. ಅವರಲ್ಲಿ ವಿಮರ್ಶೆ, ತರ್ಕ, ವಿನ್ಯಾಸ ಪ್ರಜ್ಞೆಯನ್ನು ಬೆಳೆಸಬೇಕು. ತಂತ್ರಜ್ಞಾನವೇ ಮುಖ್ಯವೆಂದಾಗಿರುವ ಕಾಲದಲ್ಲಿ ನಾಟಕಗಳನ್ನು ನೋಡುವಂತೆ ಮಾಡಬೇಕೆಂದರೆ ಹೊಸ ನಟರು, ಕಲಾವಿದರು, ತಂತ್ರಜ್ಞರನ್ನು ರೂಪಿಸಬೇಕು. ಇಂಟಿಗ್ರೇಟೆಟ್‌ ಕೋರ್ಸ್‌ಗಳಿಗೆ ಈ ಕಾಲದ ಪಠ್ಯಗಳನ್ನು ಸೇರಿಸಬೇಕು. 

ಪ್ರ

ಪ್ರಶ್ನಿಸಿದ ಕಲಾವಿದರನ್ನು ಈ ಹಿಂದೆ ಹೊರ ಹಾಕಲಾಗಿತ್ತು. ಹವ್ಯಾಸಿಗಳೂ ರಂಗಾಯಣದಿಂದ ದೂರ ಉಳಿದಿದ್ದರು. ಅವರು ಬರುವಂತೆ ಮಾಡುವಿರೇ?

ಅಭಿವ್ಯಕ್ತಿಯನ್ನು ಹೊಸಕಿ ಹಾಕುವುದು ರಂಗಭೂಮಿಯ ತತ್ವವಲ್ಲ. ಪ್ರಶ್ನಿಸುವವರನ್ನು ಗೌರವಿಸಬೇಕು. ಅವರ ಅಭಿಪ್ರಾಯವನ್ನು ಆಲಿಸುವ ಗುಣವಿರಬೇಕು. ಅದೇ ಬಹುತ್ವದ ಮೂಲ ತತ್ವ. ನೆಲದ ಸಂವಿಧಾನದ ಆಶಯ. ಅತ್ಯುತ್ತಮ ಕಲಾವಿದರು, ನಟರು, ತಂತ್ರಜ್ಞರು ರಂಗಾಯಣದಲ್ಲಿದ್ದಾರೆ. ಎಲ್ಲ ರಂಗಮನಸ್ಸುಗಳ ಜೊತೆಗೂಡಿಯೇ ನಾಟಕ ಕಟ್ಟಬೇಕು. ಹವ್ಯಾಸಿಗಳೂ ರಂಗಭೂಮಿ ಉಳಿಸಿದ್ದಾರೆ. ರಂಗಾಯಣದ ರಥದ ಮಿಣಿಯನ್ನು ಎಲ್ಲರೂ ಸೇರಿಯೇ ಎಳೆಯಬೇಕು. ಇನ್ನು ಎರಡ್ಮೂರು ದಿನದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವೆ.

ಪ್ರ

ನಿಮ್ಮ ಮುಂದಿರುವ ಸವಾಲುಗಳೇನು?

ರಂಗಾಯಣವು ಎಲ್ಲರನ್ನೂ ಒಳಗೊಳ್ಳುವ ಮುಕ್ತ ವಿಶ್ವವಿದ್ಯಾಲಯವಾಗಬೇಕು. ಹೊಸ ಪ್ರೇಕ್ಷಕರನ್ನು ಕರೆತರಬೇಕು. ಬಹುಸಂಖ್ಯಾತ ಸಮುದಾಯವನ್ನು ತಲುಪಬೇಕು. ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಬೇಕು. ನಿರ್ಲಕ್ಷಿತ ಸಮುದಾಯಗಳ ಕಥನ– ಕಾವ್ಯಗಳು ಸಂಸ್ಕೃತಿಗಳನ್ನು ವೇದಿಕೆಗೆ ತರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT