ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವ್ಯಕ್ತಿ ಇನ್ನೊಬ್ಬರಿಗೆ ಘಾಸಿ ಮಾಡದಿರಲಿ’

Last Updated 3 ಡಿಸೆಂಬರ್ 2022, 8:52 IST
ಅಕ್ಷರ ಗಾತ್ರ

ಮೈಸೂರು: ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನೀಡಿರುವ ಹಕ್ಕು. ಅದನ್ನು ಚಲಾಯಿಸುವಾಗ ಎಚ್ಚರಿಕೆ ಇರಬೇಕು. ಇನ್ನೊಬ್ಬರಿಗೆ ನೋವಾಗದಂತೆ ಅಭಿವ್ಯಕ್ತಿಸುವ ಸೂಕ್ಷ್ಮತೆ ಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ರಂಗಾಯಣದಲ್ಲಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಹಿನ್ನೆಲೆಯಲ್ಲಿ ಶನಿವಾರ ‘ಚಿತ್ರಕಲಾ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯಾವುದೇ ಕಲಾವಿದ ಅಥವಾ ವಿಚಾರವಾದಿಗೆ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ದೇಶವು ನೀಡಿದೆ. ಆದರೆ, ನಮ್ಮ ನಂಬಿಕೆ, ಚಿಂತನೆಗಳ ಅಭಿವ್ಯಕ್ತಿಯು ಇನ್ನೊಬ್ಬರ ಹಕ್ಕು, ನಂಬಿಕೆಗೆ ಘಾಸಿ ಮಾಡಬಾರದು. ಸಿಟ್ಟು ಬಂದಾಗ ಭಾವನೆಗಳನ್ನು ಕೆರಳಿಸುವಂತೆ ವರ್ತಿಸಬಾರದು. ಈ ನೆಲದ ಗುಣವಾದ ಬಹುತ್ವ ಹಾಗೂ ಉದಾರತೆಯನ್ನು ಗೌರವಿಸಬೇಕು. ಆಗ ಮಾತ್ರ ನಮ್ಮ ಅಭಿವ್ಯಕ್ತಿಗೆ ಘನತೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ರಂಗ ಕಲೆಯಲ್ಲಿ ತೊಡಗಿಸಿಕೊಂಡವರು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗುತ್ತಾರೆ. ರಂಗಭೂಮಿಗೆ ಎಲ್ಲ ಕಡೆಯಿಂದಲೂ ಜ್ಞಾನ– ವಿಚಾರಗಳು ಹರಿದು ಬರುತ್ತವೆ. ಬಹುರೂಪಿ ರಂಗೋತ್ಸವಕ್ಕೆ ದೇಶದ ವಿವಿಧೆಡೆಗಳಿಂದ ಕಲಾವಿದರು, ತಂಡಗಳು ಬರುತ್ತಿದ್ದಾರೆ. ಎಲ್ಲರೊಂದಿಗೆ ಬೆರೆಯುವ ಅವಕಾಶ ಸಿಗುತ್ತಿದೆ’ ಎಂದರು.

‘ಯುವ ಕಲಾವಿದರಿಗೆ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೊಸತನಕ್ಕೆ ತೆರೆದುಕೊಂಡಾಗ ಸವಾಲು ಇದ್ದೇ ಇರುತ್ತದೆ. ಸೋಲನ್ನು ಕಾಯುವವರು ನಮ್ಮೆದುರು ಇದ್ದೇ ಇರುತ್ತಾರೆ. ಅವೆಲ್ಲವನ್ನು ಮೀರಿ ನಡೆಯಬೇಕು. ರಂಗಾಯಣ ಕ್ರಿಯಾಶೀಲ ವೇದಿಕೆಯಾಗಿದ್ದು, ಅದನ್ನು ಯುವ ಉತ್ಸಾಹಿಗಳು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಚಿತ್ರ ಕಲಾವಿದ ಎಲ್‌.ಶಿವಲಿಂಗಪ್ಪ ಮಾತನಾಡಿ, ‘ಸರ್ವ ಜನಾಂಗವನ್ನು ಒಳಗೊಂಡರೆ ಅದು ಭಾರತೀಯತೆ ಆಗುತ್ತದೆ. ವೈವಿಧ್ಯತೆ, ನಂಬಿಕೆಗಳನ್ನು ಕಾ‍ಪಾಡಿಕೊಳ್ಳಬೇಕು. ಎಲ್ಲವನ್ನು ಗ್ರಹಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು. ಮನಸ್ಸು ವಿಶಾಲಗೊಳಿಸಿಕೊಳ್ಳಬೇಕು. ಆಗ ಮಾತ್ರ ಕಲಾವಿದ ಆಗುತ್ತಾನೆ’ ಎಂದರು.

ಶಿಬಿರದಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ (ಕಾವಾ) 22 ವಿದ್ಯಾರ್ಥಿಗಳು ಪಾಲ್ಗೊಂಡರು.

ರಂಗಾಯಣ ಉಪನಿರ್ದೇಶಕರಾದ ನಿರ್ಮಲಾ ಮಠಪತಿ, ಕಾವಾ ಆಡಳಿತಾಧಿಕಾರಿ ಎಚ್‌.ಎಂ.ಜಯಶಂಕರ್, ‘ಬಹುರೂಪಿ’ ಸಂಚಾಲಕ ಜಗದೀಶ್‌ ಮನವಾರ್ತೆ ಇದ್ದರು.

‘ತುಕ್ಡೇ–ತುಕ್ಡೇ ಗ್ಯಾಂಗ್‌ ಇದೆ’: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ, ‘ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ ಮಾಡುವವರು ಕೆಲವೊಂದನ್ನು ಮಾತ್ರ ಹೇಳಿ, ಇನ್ನೊಂದಷ್ಟನ್ನು ಹೇಳಬಾರದು ಎನ್ನುತ್ತಾರೆ. ಅದು ಕೂಡ ಅಭಿವ್ಯಕ್ತಿಗೆ ಧಕ್ಕೆ ಅಲ್ಲವೇ’ ಎಂದು ‍ಪ್ರಶ್ನಿಸಿದರು.

‘ಅಭಿವ್ಯಕ್ತಿಯನ್ನು ಸಹಿಸದೇ ವಿರೋಧ ಮಾಡುವವರಿಗೆ ಸ್ವೀಕರಿಸುವ ಮನೋಭಾವವೇ ಇಲ್ಲ. ನಾಟಕ ನಿಲ್ಲಿಸಬೇಕೆಂದು ತಡೆ ಹಾಕುವುದು, ನಮ್ಮ ಹಕ್ಕಿನ ಮೇಲಿನ ಹಲ್ಲೆ ಆಗುವುದಿಲ್ಲವೇ? ನಿರ್ದಿಷ್ಟ ಧರ್ಮದ ಬಗ್ಗೆ ಮಾತ್ರ ಪ್ರಶ್ನಿಸಬೇಡಿ ಎನ್ನುವ ಜಾತ್ಯತೀತರು ಇದ್ದಾರೆ. ಭಾರತ ಮಾತೆಗೆ ಗೌರವ ನೀಡದ ‘ತುಕ್ಡೇ–ತುಕ್ಡೇ ಗ್ಯಾಂಗ್‌’ ಈಗಲೂ ಇದೆ’ ಎಂದರು.

‘ಎಂ.ಎಫ್‌.ಹುಸೇನ್‌ ಅವರು ದೇವತೆಗಳ ಬೆತ್ತಲೆ ಚಿತ್ರ ಬಿಡಿಸಿ ಅಭಿವ್ಯಕ್ತಿಯೆಂದರು. ಅದನ್ನು ವಿರೋಧಿಸದೇ ಭಾರತೀಯರು ಸಹಿಸಿಕೊಂಡರು. ಆದರೆ, ನಿರ್ದಿಷ್ಟ ಧರ್ಮದ ಮೇಲೆ ಅದೇ ಮಾದರಿಯಲ್ಲಿ ಬರೆದಿದ್ದರೆ ತಲೆ ಉರುಳುತ್ತದೆ. ನಮ್ಮ ಭಾವ ನಾಶವಾಗಿ ಹೋಗುವ ಭಯ ಮನೆ ಮಾಡಿದೆ. ಅದು ಕುಕ್ಕರ್‌ ಬಾಂಬ್‌ ಮೂಲಕ ಅಡುಗೆ ಮನೆಯನ್ನೂ ಪ್ರವೇಶಿಸಿದೆ’ ಎಂದು ಟೀಕಿಸಿದರು.

‘ಎಲ್ಲವನ್ನು ಗೌರವಿಸುವುದೇ ಸಮಾನತೆ. ಭಾರತೀಯತೆಯೇ ನಮ್ಮ ತಾಯಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT