ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬಿಕೋ ಎನ್ನುತ್ತಿದೆ ಭತ್ತ ಖರೀದಿ ಕೇಂದ್ರ

ಜಿಲ್ಲೆಯಲ್ಲಿ 16 ಕೇಂದ್ರಗಳು ಸ್ಥಾಪನೆ; ಮುಕ್ತ ಮಾರುಕಟ್ಟೆಯಲ್ಲಿಯೇ ಉತ್ತಮ ದರ
ಸುಧೀರ್‌ಕುಮಾರ್‌ ಎಚ್‌.ಕೆ
Published 28 ಡಿಸೆಂಬರ್ 2023, 7:34 IST
Last Updated 28 ಡಿಸೆಂಬರ್ 2023, 7:34 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಸಲು ಸರ್ಕಾರ ತೆರೆದಿರುವ ನೋಂದಣಿ ಕೇಂದ್ರದತ್ತ ರೈತರು ಮುಖಮಾಡುತ್ತಿಲ್ಲ. ಒಟ್ಟು 16 ಕೇಂದ್ರಗಳನ್ನು ಡಿ.18ರಿಂದಲೇ ತೆರೆಯಲಾಗಿದ್ದರೂ, ಕೇವಲ 18 ರೈತರು ನೋಂದಣಿಯಾಗಿದ್ದಾರೆ.

ಬರದ ಸಮಸ್ಯೆಯಿಂದ ಜಿಲ್ಲೆಯಲ್ಲಿ ಭತ್ತ ಉತ್ಪಾದನೆಯು ಈ ವರ್ಷ ಕುಸಿದಿದ್ದು, ನೀರಾವರಿ ಇದ್ದವರು ಮಾತ್ರ ಭತ್ತ ನಾಟಿ ಮಾಡಿದ್ದಾರೆ. ಈ ಬಾರಿ ಕೇವಲ 76,950 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಬೇಡಿಕೆ ಹೆಚ್ಚಿದ್ದು, ಮುಕ್ತ ಮಾರುಕಟ್ಟೆಯಲ್ಲಿಯೇ ರೈತರು ಮಾರಾಟಕ್ಕೆ ಮುಂದಾಗಿದ್ದಾರೆ.

‘ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ಬಾರಿ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ ₹2,183 ಹಾಗೂ ಗ್ರೇಡ್ ಎ ಭತ್ತಕ್ಕೆ ₹2,203 ದರ ನಿಗದಿಪಡಿಸಲಾಗಿದೆ. ಪ್ರತಿ ಎಕರೆಗೆ 20 ಕ್ವಿಂಟಲ್‍ನಂತೆ ಒಬ್ಬ ರೈತರಿಂದ ಗರಿಷ್ಠ 40 ಕ್ವಿಂಟಲ್ ಭತ್ತವನ್ನು ಸರ್ಕಾರ ಖರೀದಿಸಲಿದೆ’ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕಿ ಡಿ.ಎನ್‌.ಮಮತಾ ತಿಳಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಹೊರಗಡೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಭತ್ತಕ್ಕೆ ₹2,800ಕ್ಕೂ ಹೆಚ್ಚು ಬೆಲೆ ಇದೆ. ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚೇ ಸಿಗುತ್ತಿದೆ. ಹೀಗಾಗಿ, ರೈತರು ನೇರವಾಗಿ ಅಲ್ಲಿಯೇ ಮಾರಾಟ ಮಾಡುತ್ತಿದ್ದಾರೆ’ ಎಂದರು.

‘ಎಲ್ಲ ತಾಲ್ಲೂಕುಗಳ ಎಪಿಎಂಸಿ ಕೇಂದ್ರಗಳ ಆವರಣಗಳಲ್ಲಿ ಹಾಗೂ ಅಗತ್ಯ ಪ್ರದೇಶಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕಳೆದ ಸಾಲಿಗಿಂತ ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಸಿದ್ದಾರೆ. ಇನ್ನೂ ಜ.15ರವರೆಗೂ ನೋಂದಣಿ ನಡೆಯತ್ತದೆ. ಉತ್ಪಾದನೆ ಕಡಿಮೆ ಇರುವುದರಿಂದ ಈ ಬಾರಿ ನೋಂದಣಿಯಲ್ಲಿ ಯಾವುದೇ ಮಿತಿಯನ್ನು ನಮಗೆ ನೀಡಿಲ್ಲ’ ಎಂದರು.

ನಿಯಮ, ಅವೈಜ್ಞಾನಿಕ ದರ: ‘ಖರೀದಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ದರ ನಿಗದಿ ಮಾಡುವುದಿಲ್ಲ. ನಮ್ಮ ಕೊನೆಯ ಆಯ್ಕೆಯಾಗಿ ಅದನ್ನು ನೋಡುವ ಸ್ಥಿತಿಯಿದೆ. ಖರೀದಿಗೆ ಮಿತಿ ಹಾಕುವುದು, ನಿಧಾನಗತಿಯ ಹಣ ಸಂದಾಯ, ಗುಣಮಟ್ಟದ ಹೆಸರಲ್ಲಿ ಅನಗತ್ಯ ಒತ್ತಡಗಳು ಅದನ್ನು ಆಕರ್ಷಣೀಯವಾಗಿಸಿಲ್ಲ. ಮಾರುಕಟ್ಟೆಯಲ್ಲಿ ಅಲ್ಲಿಗಿಂತ ಕನಿಷ್ಟ ₹700ಕ್ಕೂ ಹೆಚ್ಚು ಹಣ ದೊರೆಯುವಾಗ ಕೇಂದ್ರಗಳತ್ತ ಯಾರು ಹೋಗುತ್ತಾರೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ತಿಳಿಸಿದರು.

ಅಹಿಂದ ಜವರಪ್ಪ 
ಅಹಿಂದ ಜವರಪ್ಪ 
ಭತ್ತ ಖರೀದಿ ಕೇಂದ್ರ ಗ್ರಾಹಕ ಸ್ನೇಹಿಯಾಗಿಲ್ಲ. ಮುಕ್ತ ಮಾರುಕಟ್ಟೆ ಮೋಸದ ಜಾಲ ಸರ್ಕಾರ ಎರಡೂ ಕಡೆ ರೈತರ ಹಿತ ಕಾಯಬೇಕು
ಅಹಿಂದ ಜವರಪ್ಪ ಮೈಸೂರು ಎಪಿಎಂಸಿ ಮಾಜಿ ಉಪಾಧ್ಯಕ್ಷ
‘ಇಳುವರಿ ಚೆನ್ನಾಗಿದೆ’
‘ಭತ್ತಕ್ಕೆ ಕಟ್ಟು ಪದ್ಧತಿಯಲ್ಲಿ ನೀರು ಕೊಟ್ಟಿರುವುದರಿಂದ ಉತ್ತಮ ಇಳುವರಿ ಬಂದಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ತಿಳಿಸಿದರು. ‘ಬರದ ಹಿನ್ನೆಲೆಯಲ್ಲಿ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಬಹುದು.ಆದರೆ ಇಳುವರಿಯಲ್ಲಿ ಕೊರತೆಯಾಗಿಲ್ಲ. ಉತ್ಪಾದನೆ ಪ್ರಮಾಣವನ್ನೂ ಇನ್ನಷ್ಟೇ ಅಂದಾಜಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT