ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಲೆಯಲ್ಲಿ 16 ತಿಂಗಳಲ್ಲಿ 81 ರೈತರ ಆತ್ಮಹತ್ಯೆ

ಕೃಷಿ ಇಲಾಖೆಯಲ್ಲಿ ‘ವರದಿಯಾಗಿರುವ’ ಪ್ರಕರಣಗಳಿವು
Published 5 ಆಗಸ್ಟ್ 2023, 4:53 IST
Last Updated 5 ಆಗಸ್ಟ್ 2023, 4:53 IST
ಅಕ್ಷರ ಗಾತ್ರ

ಮೈಸೂರು: ದೇಶದ ಬೆನ್ನೆಲುಬಾದ ಕೃಷಿಗೆ ಆಧಾರ ಸ್ತಂಭವಾಗಿರುವ ರೈತರು ಸಾಲದ ಬಾಧೆ, ಸರಿಯಾದ ಬೆಲೆ ಸಿಗದಿರುವುದು ಹಾಗೂ ಬೆಳೆ ಹಾನಿ ಮೊದಲಾದ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಜಿಲ್ಲೆಯಲ್ಲಿ ಮುಂದುವರಿದಿದೆ.

ಕೃಷಿ ಇಲಾಖೆಯಲ್ಲಿ ‘ವರದಿಯಾಗಿರುವ’ ಅಂಕಿ–ಅಂಶ ಗಮನಿಸಿದರೆ, ಸಾಲಿನಿಂದ ಸಾಲಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಜಾಗೃತಿ, ಸರ್ಕಾರದ ಪ್ರೋತ್ಸಾಹಕಾರಿ ಯೋಜನೆಗಳ ಬೆಂಬಲದ ಹೊರತಾಗಿಯೂ ಆತ್ಮಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಕೃಷಿಕರು ಪ್ರತಿ ವರ್ಷವೂ ಒಂದಿಲ್ಲೊಂದು ಕಾರಣದಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅವರ ಸಂಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿರುವುದು ಮತ್ತು ಸಾವಿನ ಮನೆಯ ಕದ ತಟ್ಟುವ ಮೂಲಕ ಕುಟುಂಬದವರನ್ನು ಅನಾಥರನ್ನಾಗಿಸುತ್ತಿರುವುದು ಅಂಕಿ–ಅಂಶಗಳಿಂದ ಕಂಡುಬರುತ್ತಿದೆ.

ಜಿಲ್ಲೆಯಲ್ಲಿ 2021–22ನೇ ಸಾಲಿನಲ್ಲಿ 74 ಮಂದಿ, 2022–23ರಲ್ಲಿ 75 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಇದರಲ್ಲಿ 46 ಮಾತ್ರವೇ ಅರ್ಹ ಎಂದು ಗುರುತಿಸಲಾಗಿದೆ! ಈ ಪೈಕಿ 42 ಪ್ರಕರಣಗಳಲ್ಲಿ ಮಾತ್ರವೇ ಆ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಹದಿಮೂರನ್ನು ತಿರಸ್ಕರಿಸಲಾಗಿದೆ. ಉಳಿದವು ಪರಿಶೀಲನೆ, ಸಂಬಂಧಿಸಿದ ಸಮಿತಿಯ ಮಂಡಿಸುವ ಹಂತದಲ್ಲಿವೆ. 2023–24ನೇ ಸಾಲಿನಲ್ಲಿ ಈವರೆಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಕಳವಳ ಮೂಡಿಸಿದೆ.

ಪಿರಿಯಾಪಟ್ಟಣದಲ್ಲಿ ಹೆಚ್ಚು: 2022–23ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಿದೆ (32). ಉಳಿದಂತೆ ಕೆ.ಆರ್.ನಗರ ತಾಲ್ಲೂಕಿನಲ್ಲಿ 17, ಹುಣಸೂರಿನಲ್ಲಿ 13, ಎಚ್‌.ಡಿ.ಕೋಟೆಯಲ್ಲಿ 5, ಮೈಸೂರಿನಲ್ಲಿ 5, ನಂಜನಗೂಡು ತಾಲ್ಲೂಕಿನಲ್ಲಿ 6 ಹಾಗೂ ತಿ.ನರಸೀಪುರದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. 2023–24ನೇ ಸಾಲಿನಲ್ಲಿ ಈವರೆಗೆ ಅಂದರೆ ನಾಲ್ಕೇ ತಿಂಗಳಲ್ಲಿ 6 ಮಂದಿ (ಕೆ.ಆರ್.ನಗರದಲ್ಲಿ 3, ಹುಣಸೂರಿನಲ್ಲಿ 2 ಹಾಗೂ ಪಿರಿಯಾಪಟ್ಟಣದಲ್ಲಿ ಒಬ್ಬರು) ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. 

‘ರೈತರು ಬೆಳೆಯುವ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಅವರಿಗೆ ಆರ್ಥಿಕವಾಗಿ ಬೇರೆ ಮೂಲಗಳಿಲ್ಲ. ಬೆಳೆ ವಿಫಲವಾದರೆ ಸಾಲ ಮಾಡಿ ಮತ್ತೊಂದು ಬೆಳೆ ಹಾಕುತ್ತಾರೆ. ಸಾಲದ ಬಾಧೆ ಹಲವು ಕಾರಣಗಳಿಂದ ಅವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಅವರಿಗೆ ನೆರವಾಗಲು ಯೋಜನೆಗಳನ್ನು ರೂಪಿಸಬೇಕು’ ಎಂಬ ಒತ್ತಾಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಬಸವರಾಜು ಅವರದು.

ಜಾಗೃತಿ ಮೂಡಿಸಬೇಕು: ‘ಕೆಲವರು, ಮಕ್ಕಳ ಮದುವೆಗಳನ್ನು ಆರ್ಥಿಕ ಶಕ್ತಿ ಮೀರಿ ವಿಜೃಂಭಣೆಯಿಂದ ಮಾಡುತ್ತಿರುವುದೂ ಸಾಲಕ್ಕೆ ಕಾರಣವಾಗುತ್ತಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಸಂಘ–ಸಂಸ್ಥೆಗಳಿಂದಲೂ ಈ ಕಾರ್ಯವಾಗಬೇಕು’ ಎನ್ನುತ್ತಾರೆ.

‘ರೈತರ ಆತ್ಮಹತ್ಯೆ ತಡೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಎಡಿಸಿ ಅಧ್ಯಕ್ಷತೆಯ ಸಮಿತಿಯಲ್ಲಿ ಅನುಮೋದನೆಯಾಗುವ ಪ್ರಕರಣದಲ್ಲಿ ಕುಟುಂಬಗಳಿಗೆ ಪರಿಹಾರ ಕೊಡಲಾಗುತ್ತಿದೆ. ಮಕ್ಕಳ ಶಾಲಾ ಪ್ರವೇಶ ಶುಲ್ಕ ಭರಿಸುವುದು, ಮನೆ ಒದಗಿಸುವುದು ಹಾಗೂ ₹ 5 ಲಕ್ಷ ಪರಿಹಾರ ನೀಡುವುದು ಮೊದಲಾದವು ನಡೆಯುತ್ತಿವೆ’ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT