ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರು, ಅಂಗವಿಕಲರಿಗೆ ಉಚಿತ ಸಲಕರಣೆ: ವಿ.ಶ್ರೀನಿವಾಸ ಪ್ರಸಾದ್‌

ಫಲಾನುಭವಿಗಳ ಆಯ್ಕೆಗೆ ಜುಲೈ 24ರಿಂದ 29ವರೆಗೆ ಶಿಬಿರ
Last Updated 13 ಜುಲೈ 2022, 10:05 IST
ಅಕ್ಷರ ಗಾತ್ರ

ಮೈಸೂರು: ‘ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ–ಸಲಕರಣೆಗಳನ್ನು‌ ಉಚಿತವಾಗಿ ವಿತರಿಸಲು ಫಲಾನುಭವಿಗಳ ಆಯ್ಕೆಗಾಗಿ ತಪಾಸಣಾ ಶಿಬಿರಗಳನ್ನು ಜುಲೈ 24ರಿಂದ 29ವರೆಗೆ ಆಯೋಜಿಸಲಾಗಿದೆ’ ಎಂದು ಚಾಮರಾಜನಗರ ಸಂಸದ, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ ಸದಸ್ಯರೂ ಆಗಿರುವ ವಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

‘ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಕೃತಕ ಅಂಗಾಂಗ ತಯಾರಿಕಾ ನಿಗಮ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

‘ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಾರಥ್ಯದಲ್ಲಿ ದೇಶದ 36 ಲೋಕಸಭಾ ಕ್ಷೇತ್ರಗಳಲ್ಲಿ ಅಂಗವಿಕಲರು ಹಾಗೂ ಹಿರಿಯ‌ ನಾಗರಿಕರಿಗೆ ಅಗತ್ಯ ಸಾಧನಗಳನ್ನು ವಿತರಿಸುವ ಅತಿ ದೊಡ್ಡ ಕಾರ್ಯಕ್ರಮ ಇದಾಗಿದೆ. ರಾಜ್ಯದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದೆ. ಒಟ್ಟು 32 ಬಗೆಯ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಫಲಾಭವಿಗಳಿಗೆ ಮಿತಿ ಇಲ್ಲ. ಅಂಗವೈಕಲ್ಯದ ಪ್ರಮಾಣ ಗುರುತಿಸುವುದಕ್ಕಾಗಿ ನಡೆಸುವ ಶಿಬಿರಗಳಲ್ಲಿ ಆಯ್ಕೆಯಾಗುವ ಎಲ್ಲರಿಗೂ ಅವರಿಗೆ ಅಗತ್ಯ ಸಲಕರಣೆಗಳನ್ನು ಉಚಿತವಾಗಿ ಕೊಡಲಾಗುತ್ತದೆ’ ಎಂದು ಹೇಳಿದರು.

ನಂಜನಗೂಡಿನಲ್ಲಿ ವಿತರಣೆ:

'ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಶಿಬಿರ ನಡೆಯಲಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಬಿರ ನಡೆಸಲು ಕ್ರಮ ವಹಿಸಲಾಗಿದೆ. ಸಾವಿರಾರು ಮಂದಿ ಫಲಾನುಭವಿಗಳು ಸಿಗುತ್ತಾರೆ. ತಳಮಟ್ಟದಿಂದ ಗುರುತಿಸಿ, ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತ್ರಿಚಕ್ರವಾಹನ, ಕೃತಕ ಅಂಗಾಂಗಳು ಸೇರಿದಂತೆ ಅಗತ್ಯವಾದ ಎಲ್ಲ ಸಲಕರಣೆಗಳನ್ನೂ ಒದಗಿಸಲಾಗುತ್ತದೆ. ನಂಜನಗೂಡಿನಲ್ಲಿ ದೊಡ್ಡ ಮಟ್ಟದ ಸಮಾರಂಭವನ್ನು ಆಯೋಜಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿ ಸಲಕರಣೆಗಳನ್ನು ವಿತರಿಸಲಾಗುವುದು’ ಎಂದರು.

‘ಶಿಬಿರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ನಾಲ್ವರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅವರು ಅಂಗವೈಕಲ್ಯದ ಪ್ರಮಾಣವನ್ನು ಅಳೆಯುತ್ತಾರೆ. ಯಾವ ಸಲಕರಣೆಗಳು ಬೇಕು ಎಂಬುದನ್ನು ಪಟ್ಟಿ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಶಿಬಿರದ ಯಶಸ್ಸಿಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸಾವಿರಾರು ಮಂದಿಗೆ ಸೌಲಭ್ಯ ಕಲ್ಪಿಸುವುದಕ್ಕೆ ಸಿಕ್ಕಿರುವ ಸುವರ್ಣ ಅವಕಾಶವಿದು. ಇದನ್ನು ಬಳಸಿಕೊಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಸೂಚಿಸಿದರು.

ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಪಾಲ್ಗೊಂಡಿದ್ದರು.


ಎಲ್ಲೆಲ್ಲಿ ಶಿಬಿರ?

* ಜುಲೈ 24: ವರುಣಾ ಸರ್ಕಾರಿ ಶಾಲೆ.

* ಜುಲೈ 25: ಎಚ್‌.ಡಿ. ಕೋಟೆ ಬಸ್‌ ನಿಲ್ದಾಣ ಸಮೀಪದ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

* ಜುಲೈ 26: ಸರಗೂರಿನ ಹೆಣ್ಣು ಮಕ್ಕಳ ಸರ್ಕಾರಿ ಪ್ರೌಢಶಾಲೆ

* ಜುಲೈ 27: ತಿ.ನರಸೀಪುರದ ಬಿಇಒ ಕಚೇರಿ ಎದುರಿನ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ.

* ಜುಲೈ 28: ನಂಜನಗೂಡಿನ ಗುರುಭವನ ಆವರಣದ ನಾಗಮ್ಮ ಶಾಲೆ.

* ಜುಲೈ 29: ಬನ್ನೂರು ಸರ್ಕಾರಿ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT