ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಂಬೆಗಳ ತಯಾರಿ; ‘ಗಣಪತಿ ಮನೆ’ ಉಳಿಸಿದ ನಾಗರತ್ನಾ

ಸೃಜನಶೀಲ ಕಲೆ, ಲೆಕ್ಕಾಚಾರದಲ್ಲೂ ಎತ್ತಿದ ಕೈ
Published 8 ಮಾರ್ಚ್ 2024, 6:42 IST
Last Updated 8 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ಮೈಸೂರು: ‘ಗಣಪತಿ ಮಾಡುವ ಕೃಷ್ಣಮೂರ್ತಿಯವರ ಮನೆ ಅಂದರೆ ಚಿರಪರಿಚಿತ. 2019ರ ಸೆಪ್ಟೆಂಬರ್‌ನಲ್ಲಿ ಅವರು ತೀರಿಹೋದಾಗ, ದಿಕ್ಕೇ ತೋಚದ ಸ್ಥಿತಿ. ಅವರ ಹೆಸರು ಮರೆಯಾಗಬಾರದು ಎಂದು ನಾನು ಗಣಪತಿ ಮೂರ್ತಿ ಮಾಡಲು ಶುರುಮಾಡಿದೆ. ಮನೆನೂ ನಡೆಸಬೇಕಲ್ಲ?’

ಈ ಮಾತುಗಳು, ಸಂಸಾರದ ಹೊರೆಯೊಂದಿಗೆ ಗಂಡನ ಹೆಸರನ್ನು, ಕಲೆಯೊಂದಿಗಿನ ಪ್ರೇಮವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಇಲ್ಲಿನ ಗುಂಡೂರಾವ್‌ ನಗರದ ನಿವಾಸಿ ನಾಗರತ್ನಾ ಅವರದು.

30X40 ನಿವೇಶನದಲ್ಲಿ ಸಿಮೆಂಟ್‌ ಶೀಟ್‌ ಚಾವಣಿಯ ಅವರ ಮನೆಯನ್ನು ‘ಗಣಪತಿ ಮನೆ’ ಎಂದೇ ಜನರು ಕರೆಯುತ್ತಿದ್ದು, ಅಲ್ಲಿ ತಯಾರಾಗುವ ಮುದ್ದಾದ ಗಣಪತಿಗಳು, ನವರಾತ್ರಿ ಬೊಂಬೆಗಳನ್ನು ಖರೀದಿಸಲು ಹಬ್ಬ ಹರಿದಿನಗಳಲ್ಲಿ ಆಗಮಿಸುತ್ತಾರೆ.

ವಿವಿಧ ರೀತಿಯ ಗಣಪತಿ ಮೂರ್ತಿಗಳು, 35 ರೀತಿಯ ನವರಾತ್ರಿ ಬೊಂಬೆಗಳ ಸೆಟ್‌ಗಳನ್ನು ಸಿದ್ಧಪಡಿಸುವ ಅವರು ಕಲಾವಿದೆಯಾಗಿ, ವ್ಯಾಪಾರಿಯಾಗಿ ತನ್ನ ಮನೆ, ಮಕ್ಕಳನ್ನು ಉನ್ನತ ಸ್ಥಾನಕ್ಕೆ ತರಬೇಕೆಂಬ ಆಸೆಯ ಅಮ್ಮನಾಗಿಯೂ ದುಡಿಯುತ್ತಿದ್ದಾರೆ.

ತಾತನ ಕಾಲದ ಕಲೆ: ‘ನನ್ನ ತವರು ಮನೆ ನಂಜನಗೂಡು ರಸ್ತೆಯ ಚಿಕ್ಕಯ್ಯನ ಛತ್ರದಲ್ಲಿದೆ. 16ನೇ ವರ್ಷಕ್ಕೆ ಇಲ್ಲಿಗೆ ಮದುವೆ ಮಾಡಿಕೊಟ್ಟರು. ನಮ್ಮ ಮನೆಯವರ ತಾತನ ಕಾಲದಿಂದಲೇ ಗಣಪತಿ ಮೂರ್ತಿ ಮಾಡುವ ಕೆಲಸ ಆರಂಭವಾಗಿತ್ತು. ಅದಕ್ಕೂ ಹಿಂದೆ ನೀರಿನ ದೋಣಿಗಳನ್ನು ಮಾಡುತ್ತಿದ್ದರಂತೆ. ಪತಿ ಕೃಷ್ಣಮೂರ್ತಿ ಅವರು ಮೂರ್ತಿ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದರು. ಗಣಪತಿ, ನವರಾತ್ರಿ ಬೊಂಬೆಗಳನ್ನು ಮಾಡುವುದಕ್ಕೂ ಶುರು ಮಾಡಿದ್ದರು’ ಎಂದು ನಾಗರತ್ನ ಅವರು ನೆನಪಿಗೆ ಜಾರಿದರು.

‘ಮದುವೆ ಬಳಿಕ ನನ್ನನ್ನೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ಎಲ್ಲವನ್ನೂ ಕಲಿತೆ. ಈಗ ಇರುವ ಬೊಂಬೆಗಳ ಅಚ್ಚನ್ನು ಅವರೇ ಮಾಡಿ ಹೋಗಿದ್ದು, ಅದರಲ್ಲಿಯೇ ನಾನು ಮಾಡುತ್ತಿದ್ದೇನೆ. ದೊಡ್ಡ ಮಗ ರವಿನಂದನ್‌ ಖಾಸಗಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಾನೆ. ಕಿರಿ ಮಗ ವಿಜಯ್‌ಕುಮಾರ್‌ ನನಗೆ ಸಹಕಾರ ನೀಡುತ್ತಾನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಡೈರಿಯಿಂದ ಲೆಕ್ಕಾಚಾರ: ಗಂಡ ತೀರಿಹೋದ ಬಳಿಕ ನೋವಲ್ಲಿದ್ದೆ. ಒಬ್ಬಳೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಅವರ ನೆನಪು ಕಾಡುತ್ತಿತ್ತು. ಅಷ್ಟರಲ್ಲಿಯೇ ಕೋವಿಡ್‌ ಎದುರಾಗಿತ್ತು. ಆರ್ಥಿಕ ಸಂಕಷ್ಟದಿಂದ ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಬಳಿಕ ನಿಧಾನಕ್ಕೆ ಮೂರ್ತಿ ಮಾಡಲು ಆರಂಭಿಸಿದೆ. ಮನೆಯವರು ಮೂರ್ತಿಗಳ ಬೆಲೆಯನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. 96ನೇ ಇಸವಿಯಿಂದಲೂ ಡೈರಿಯಲ್ಲಿ ದರಗಳನ್ನು ಬರೆಯಲಾಗಿದ್ದು, ಮಾರುಕಟ್ಟೆಯನ್ನು ಗಮನಿಸಿ, ಪ್ರತಿವರ್ಷ ಅದಕ್ಕೆ ₹10– 20 ಸೇರಿಸಿ ಮಾರುತ್ತೇನೆ’ ಎಂದು ತಿಳಿಸಿದರು.

ಗಣಪತಿ ಮನೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಮದುವೆ ಬೊಂಬೆಗಳು
ಗಣಪತಿ ಮನೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಮದುವೆ ಬೊಂಬೆಗಳು

‘ಈ ಕಲೆಯ ಬಗ್ಗೆ ಆಸಕ್ತಿಯಿದೆ. ನವರಾತ್ರಿ ಸೆಟ್‌ ಮಾಡಲು ತುಂಬಾ ಅನುಭವ ಬೇಕಾಗುತ್ತದೆ. ಬೇರೆಯವರಿಗೂ ಕಲಿಸುವ ಆಸೆಯಿದೆ. ವರ್ಷವಿಡೀ ಕೆಲಸವಿದ್ದು, ನನಗೂ ಸಹಕಾರಕ್ಕೆ ಜನ ಬೇಕು. ಆದರೆ, ಹಣ ನೀಡಲು ಶಕ್ತಿ ಇಲ್ಲ. ಕೆಲಸ ಕಲಿಯಲು ಬಂದವರಿಗೆ ವ್ಯಾಪಾರ ವೃದ್ಧಿಯಾದರೆ ಅನುಕೂಲ ಮಾಡುತ್ತೇನೆ’ ಎಂದು ವಿಶ್ವಾಸದಿಂದ ಹೇಳಿದರು.

ನಾಗರತ್ನಾ
ನಾಗರತ್ನಾ
ಮಹಿಳೆಯರಿಗೆ ಕೆಲಸ ಕಲಿಸುವ ಆಸಕ್ತಿಯಿದೆ. ಈ ವೃತ್ತಿಯಿಂದಾಗಿ ನಾನು ಜೀವನ ನಿರ್ವಹಿಸಲು ಸಾಧ್ಯವಾಯಿತು
ನಾಗರತ್ನಾ ಬೊಂಬೆ ವ್ಯಾಪಾರಿ

‘ಮಾರುಕಟ್ಟೆಗೆ ಸಹಕರಿಸಿ’

‘ಬೊಂಬೆಗಳ ತಯಾರಿ ಹಾಗೂ ಮಾರಾಟ ವಿಸ್ತರಿಸಬೇಕು ಎಂಬ ಆಸಕ್ತಿಯಿದೆ. ಆದರೆ ಬಂಡವಾಳ ಹೂಡಲು ಧೈರ್ಯ ಸಾಕಾಗುತ್ತಿಲ್ಲ. ಮಾರುಕಟ್ಟೆಗೆ ಸಂಘ ಸಂಸ್ಥೆಗಳು ಸಹಕರಿಸಿದರೆ ಅನುಕೂಲವಾಗುತ್ತದೆ’ ಎಂದು ನಾಗರತ್ನಾ ಹೇಳಿದರು. ‘ಮನೆಯವರಿದ್ದಾಗ ವರ್ಷದಲ್ಲಿ ದೊಡ್ಡ ಅಳತೆಯ ಸುಮಾರು 900ರಷ್ಟು ಗಣಪತಿ ಮಾಡುತ್ತಿದ್ದೆವು. ಅವರಿಗೆ ಹಬ್ಬಗಳ ಸಂದರ್ಭದಲ್ಲಿ ಕೆಲ ಶಾಲೆಗಳ ಆವರಣದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಈಗ ನಾನು ವಿವಿಧ ಗಾತ್ರದ 600 ಗಣಪತಿ ಮೂರ್ತಿಗಳು ಹಾಗೂ ನವರಾತ್ರಿ ಬೊಂಬೆಗಳ ಸೆಟ್‌ಗಳನ್ನು ಮಾಡುತ್ತೇನೆ. ಅಷ್ಟಲಕ್ಷ್ಮಿ ದಶವಾತಾರ ಶ್ರೀನಿವಾಸ ಕಲ್ಯಾಣ ರಾವಣ ದರ್ಬಾರ್‌ ಗೋವರ್ಧನ ಗಿರಿ ಮಾಯಾ ಬಜಾರ್ ಹೀಗೆ ಹಲವು ಸೆಟ್‌ಗಳಿವೆ. ಆಸಕ್ತರು ನೇರವಾಗಿ ಖರೀದಿಸಬಹುದು’ ಎಂದರು. ಸಂಪರ್ಕ ಸಂಖ್ಯೆ: 98457 91295.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT