ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಂದರಲ್ಲಿ ತ್ಯಾಜ್ಯ: ಪಾಲಿಕೆ ‘ದಂಡಾಸ್ತ್ರ’

ಹಸಿ, ಒಣ ತ್ಯಾಜ್ಯ ಕಡ್ಡಾಯವಾಗಿ ವಿಂಗಡಿಸಿ ಕೊಡಲು ಸೂಚನೆ
Published 29 ಮೇ 2024, 15:37 IST
Last Updated 29 ಮೇ 2024, 15:37 IST
ಅಕ್ಷರ ಗಾತ್ರ

ಮೈಸೂರು: ‘ಸಾರ್ವಜನಿಕರು ಹಸಿ ಹಾಗೂ ಒಣ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು. ಇಲ್ಲದಿದ್ದಲ್ಲಿ ದಂಡ ಶುಲ್ಕ ವಿಧಿಸಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತೆ ಎನ್.ಎನ್. ಮಧು ತಿಳಿಸಿದ್ದಾರೆ.

ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದಲ್ಲಿ ಮೊದಲ ಬಾರಿಗೆ ವಿಧಿಸಲಾಗುವ ದಂಡ ಹಾಗೂ ಪುನರಾವರ್ತನೆ ಮಾಡಿದಲ್ಲಿ ವಿಧಿಸಲಾಗುವ ದಂಡದ ವಿವರವನ್ನು ನೀಡಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವುದು, ಇದರಿಂದ ನಗರದಲ್ಲಿನ ವಾತಾವರಣ ಹಾಳಾಗುತ್ತಿರುವುದನ್ನು ತಪ್ಪಿಸಲು ‘ದಂಡಾಸ್ತ್ರ’ ಪ್ರಯೋಗಿಸಲು ಪಾಲಿಕೆ ಮುಂದಾಗಿದೆ.

ಸಾರ್ವಜನಿಕ ರಸ್ತೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆಟದ ಮೈದಾನ, ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಸ್ವಚ್ಛತೆ ಕಾಪಾಡುವುದು ವಿಫಲವಾದಲ್ಲಿ ಮೊದಲನೇ ಬಾರಿಗೆ ₹ 500 ದಂಡ ಶುಲ್ಕ ವಿಧಿಸಲಾಗುವುದು. ಪುನರಾವರ್ತನೆ ಮಾಡಿದಲ್ಲಿ ₹ 1ಸಾವಿರ ದಂಡ ಕಟ್ಟಬೇಕಾಗುತ್ತದೆ.

ಕಸ ಸುಡುವವರಿಗೆ: ಸಕ್ರಮ ಪ್ರಾಧಿಕಾರದಿಂದ ಹೊರಡಿಸಲಾದ ಅಧಿಸೂಚನೆ, ಬೈಲಾ, ಸುತ್ತೋಲೆ ಅಥವಾ ಸಾರ್ವಜನಿಕ ಪ್ರಕಟಣೆಯ ಅನ್ವಯ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಬೇಕು. ಹಸಿ ಕಸ, ಒಣ ಕಸ, ಕೈತೋಟದ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ಇತರ ಕಸವನ್ನು ವಿಂಗಡಿಸಿ ತ್ಯಾಜ್ಯ ಸಂಗ್ರಹಕಾರರಿಗೆ ನೀಡದಿದ್ದಲ್ಲಿ ನಿವಾಸಿಗಳಿಗೆ ಮೊದಲ ಬಾರಿಗೆ ₹ 200, ಪುನರಾವರ್ತನೆಯಾದರೆ ₹ 500 ಹಾಗೂ ವಾಣಿಜ್ಯ ಉದ್ದಿಮೆದಾರರಿಗೆ ಮೊದಲಿಗೆ ₹ 500 ಹಾಗೂ ಪುನರಾವರ್ತನೆ ಆದಲ್ಲಿ ₹ 1ಸಾವಿರ ದಂಡ ವಿಧಿಸಲಾಗುತ್ತದೆ.

ಎಲ್ಲ ರೀತಿಯ ಚರಂಡಿಗಳಲ್ಲಿ ಬಿಸಾಡುವವರು ಮೊದಲನೇ ಬಾರಿಗೆ ₹ 500 ಹಾಗೂ ಪುನರಾವರ್ತನೆಯಾದಲ್ಲಿ ₹ 1ಸಾವಿರ ದಂಡ ಕಟ್ಟಬೇಕಾಗುತ್ತದೆ.

ರಸ್ತೆ ಬದಿಯಲ್ಲಿ ಎಲೆ ತ್ಯಾಜ್ಯ ಸುಡುವವರು ಕ್ರಮವಾಗಿ ₹ 200 ಹಾಗೂ ₹500, ಪ್ಲಾಸ್ಟಿಕ್‌ ವಸ್ತುಗಳು ಮತ್ತು ಒಣ ತ್ಯಾಜ್ಯ ಸುಡುವವರು ಕ್ರಮವಾಗಿ ₹ 500 ಹಾಗೂ ₹ 1ಸಾವಿರ, ಇ–ತ್ಯಾಜ್ಯ ಸುಟ್ಟರೆ ಕ್ರಮವಾಗಿ ₹ 1ಸಾವಿರ ಹಾಗೂ ₹ 5ಸಾವಿರ ದಂಡ ತೆರಬೇಕಾಗುತ್ತದೆ.

ಭಾರಿ ತ್ಯಾಜ್ಯ ಉತ್ಪಾದಕರಿಗೆ ಹೆಚ್ಚು: ಭಾರಿ ತ್ಯಾಜ್ಯ ಉತ್ಪಾದಕರಾದ (ಬಲ್ಕ್‌ ವೇಸ್ಟ್‌ ಜನರೇಟರ್ಸ್‌) ಹಾಸ್ಟೆಲ್, ಹೋಟೆಲ್‌ ಅಥವಾ ರೆಸ್ಟೋರೆಂಟ್, ವಿದ್ಯಾಸಂಸ್ಥೆಗಳು, ಕಲ್ಯಾಣ ಮಂಟಪಗಳು, ಮಾಲ್‌ಗಳು, ವಾಣಿಜ್ಯ ಕಟ್ಟಡಗಳು, ಕೋಚಿಂಗ್ ಸೆಂಟರ್, ಸರ್ಕಾರಿ ಕಚೇರಿಗಳು, ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ, ವಸ್ತುಪ್ರದರ್ಶನ ಇತ್ಯಾದಿ ಸ್ಥಳಗಳಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಪ್ರತ್ಯೇಕ ಸ್ಥಳದಲ್ಲಿ ಜೈವಿಕ ಅಥವಾ ವೈಜ್ಞಾನಿಕವಾಗಿ ಸಂಸ್ಕರಿಸದಿದ್ದಲ್ಲಿ ₹20ಸಾವಿರ (ಮೊದಲ ಬಾರಿಗೆ), ಪುನರಾವರ್ತನೆಯಾದಲ್ಲಿ ₹50ಸಾವಿರ ದಂಡ ಕಟ್ಟಬೇಕಾಗುತ್ತದೆ.

ಕಟ್ಟಡ ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ (ಇದಕ್ಕಾಗಿಯೇ ಹಂಚ್ಯಾ ಸಾತಗಳ್ಳಿ ‘ಎ’ ವಲಯದ ಸಿಎ ನಿವೇಶನ ಸಂಖ್ಯೆ–5ರಲ್ಲಿ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು) ಹಾಕದಿದ್ದಲ್ಲಿ ₹5ಸಾವಿರ (ಮೊದಲ ಬಾರಿ) ಹಾಗೂ ಪುನರಾವರ್ತನೆ ಆದಲ್ಲಿ ₹ 10ಸಾವಿರ ದಂಡ ವಿಧಿಸಲಾಗುವುದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಸಾರ್ವಜನಿಕರು ಮೂಲದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ ನೀಡದಿದ್ದಲ್ಲಿ ಪೌರಕಾರ್ಮಿಕರು ಯಾವುದೇ ಕಾರಣಕ್ಕೂ ಕಸವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT