ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಕೊಡಿಸದಿದ್ದರೆ ವಿಧಾನಸೌಧದೆದುರು ಪ್ರತಿಭಟನೆ: ಕುರುಬೂರು ಶಾಂತಕುಮಾರ್

Published 17 ಸೆಪ್ಟೆಂಬರ್ 2023, 7:07 IST
Last Updated 17 ಸೆಪ್ಟೆಂಬರ್ 2023, 7:07 IST
ಅಕ್ಷರ ಗಾತ್ರ

ಮೈಸೂರು: ‘ಪ್ರತಿ ಟನ್‌ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ₹ 150 ಬಾಕಿಯನ್ನು ಸೆ.30ರೊಳಗೆ ಕೊಡಿಸಬೇಕು ಹಾಗೂ ಪ್ರಸಕ್ತ ಸಾಲಿನ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ದರ) ಏರಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ವಿಧಾನಸೌಧದ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

‘ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಸಭೆ ನಡೆಸಿದ್ದರೂ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇನ್ನೂ ಕೆಲವು ದಿನ ಕಾದು ನೋಡುತ್ತೇವೆ. ನಿರ್ಲಕ್ಷ್ಯ ಮುಂದುವರಿಸಿದರೆ ಸರ್ಕಾರಕ್ಕೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕಾಗುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಎಚ್ಚರಿಕೆ ನೀಡಿದರು.

‘ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಬೆಳೆ ಕೂಡ ಒಣಗುತ್ತಿದ್ದು, ಶೇ 40ರಷ್ಟು ಇಳುವರಿ ಕಡಿಮೆಯಾಗಿದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸಲು ಪೈಪೋಟಿ ನಡೆಸುತ್ತಿವೆ. ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವ ಕಾರಣ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ ಏರಿದೆ. ಆದರೆ, ಎಫ್‌ಆರ್‌ಪಿಯನ್ನು ಹೋದ ವರ್ಷಕ್ಕಿಂತ ಕೇವಲ ₹ 100 ಏರಿಸಿ ₹ 3,150 (ಟನ್‌ಗೆ) ನಿಗದಿಪಡಿಸಿ ಅನ್ಯಾಯ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಎಥೆನಾಲ್‌ ಉತ್ಪಾದಿಸಿ ಹೆಚ್ಚು ಲಾಭ ಗಳಿಸುತ್ತಿವೆ. ಆದರೆ, ಬೆಳೆಗಾರರಿಗೆ ನ್ಯಾಯ ಸಿಕ್ಕಿಲ್ಲ’ ಎಂದು ದೂರಿದರು.

ಸಾಲ ಮನ್ನ ಮಾಡಿ:

‘ಮಳೆ ಬಾರದೇ ತತ್ತರಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರಾಜ್ಯ ಸರ್ಕಾರವು ಬರಗಾಲ ಘೋಷಿಸಿದರೆ ಸಾಲದು. ಬರಪೀಡಿತ ತಾಲ್ಲೂಕುಗಳ ರೈತರ ಸಾಲವನ್ನು ಸಂ‍ಪೂರ್ಣ ಮನ್ನಾ ಮಾಡಬೇಕು. ಬೆಳೆ ನಷ್ಟ ಪರಿಹಾರವಾಗಿ ಪ್ರತಿ ಎಕರೆಗೆ ₹ 25ಸಾವಿರ ನೀಡಬೇಕು. ರೈತರಿಗೆ ಅಕ್ಕಿ, ರಾಗಿ, ಗೋಧಿ ಹಾಗೂ ಬೇಳೆ ವಿತರಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು– ಮೇವು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್ ಪೂರೈಸಿ, ಬೆಳೆದು ನಿಂತಿರುವ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ನೆರವಾಗಬೇಕು’ ಎಂದು ಒತ್ತಾಯಿಸಿದರು.

‘ಕಾವೇರಿ ಜಲಾನಯನ ಪ್ರದೇಶದ ವಸ್ತುಸ್ಥಿತಿಯನ್ನು ಅರಿಯಲು ಕರ್ನಾಟಕ ಜಲ ಸಂರಕ್ಷಣ ಸಮಿತಿಯ ಹತ್ತು ಜನರ ಪರಣಿತರ ನಿಯೋಗ ಸದ್ಯದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ನೀರಿನ ಲಭ್ಯತೆ, ರೈತರ ಬೆಳೆ ನಷ್ಟ ಅಂದಾಜು ಮೊದಲಾದ ವಿಷಯಗಳ ಅಧ್ಯಯನ ನಡೆಸಲಿದೆ’ ಎಂದು ತಿಳಿಸಿದರು.

ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ಹೆಗ್ಗೂರು ರಂಗರಾಜ್, ಕಾಟೂರು ಮಹದೇವಸ್ವಾಮಿ ಮತ್ತು ಮಾರ್ಬಳ್ಳಿ ನೀಲಕಂಠಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT