ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಮರ್ಥವಾಗಿ ಬರೆಯುವ ಲೇಖಕಿಯರು

ಲೇಖಿಕಾ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ವಸುಮತಿ ಉಡುಪ
Published 29 ಮೇ 2024, 15:37 IST
Last Updated 29 ಮೇ 2024, 15:37 IST
ಅಕ್ಷರ ಗಾತ್ರ

ಮೈಸೂರು: ‘ಈಗಿನ ಲೇಖಕಿಯರು ಯಾರಿಗೂ ಕಡಿಮೆ ಇಲ್ಲ. ಸಮರ್ಥವಾಗಿ ಮತ್ತು ಸಂಕೋಚ, ಮುಜುಗರ ಮೀರಿ ಬರೆಯುತ್ತಿದ್ದಾರೆ’ ಎಂದು ಲೇಖಕಿ ವಸುಮತಿ ಉಡುಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕವಯಿತ್ರಿ ಸುಚಿತ್ರಾ ಹೆಗಡೆ ಅವರ ಪ್ರಶ್ನೆಗೆ ಮೇಲಿನಂತೆ ಅವರು ಉತ್ತರಿಸಿದರು.

‘ಸ್ತ್ರೀ ಸಾಹಿತ್ಯಕ್ಕೆ ವಿಮರ್ಶೆಯಿಂದ ಅನ್ಯಾಯವಾಗಿದೆಯೇ’ ಎಂದು ಲೇಖಕಿ ಸಹನಾ ಕಾಂತಬೈಲು ಪ್ರಶ್ನೆಗೆ, ‘ಮಹಿಳಾ ಸಾಹಿತ್ಯವನ್ನು ಪುರುಷರು ಒಪ್ಪಿಕೊಂಡರೆ ಅವರ ಪಾರಮ್ಯ ಒಪ್ಪಿಕೊಂಡಂತೆ. ಹೀಗಾಗಿ ಮಹಿಳಾ ಸಾಹಿತ್ಯ ಒಳ್ಳೆಯದೋ, ಕೆಟ್ಟದ್ದೋ ಎಂದು ತೀರ್ಮಾನಿಸುವುದು ಕಾಲ ಹಾಗೂ ಓದುಗರು’ ಎಂದು ಪ್ರತಿಕ್ರಿಯಿಸಿದರು.

‘‌ಪ್ರೌಢಶಾಲೆ ಓದುವಾಗ ಕವನ ಬರೆದೆ. ಆಮೇಲೆ ಕಥೆಗಳತ್ತ ವಾಲಿದೆ. ಪ್ರೌಢಶಾಲೆ ಮುಗಿಯುವುದರೊಳಗೆ ನೋಟ್‌ಬುಕ್ ತುಂಬಾ ಕಥೆಗಳನ್ನು ಬರೆದಿದ್ದೆ. 18ನೇ ವಯಸ್ಸಿಗೇ ಮದುವೆಯಾಗಿ ಶಿವಮೊಗ್ಗದಲ್ಲಿದ್ದೆ. ಆಗ ಹಳ್ಳಿ ಹುಡುಗಿಯ ಸಂಕೋಚವಿತ್ತು, ಮುಗ್ಧತೆ ಇತ್ತು’ ಎಂದು ಸುನಂದಾ ಅವರ ಪ್ರಶ್ನೆಗೆ ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಿಕಾ ಸಾಹಿತ್ಯ ವೇದಿಕೆ ಸಂಚಾಲಕಿ ಶೈಲಜಾ ಸುರೇಶ್ ಮಾತನಾಡಿದರು.

ಲೇಖಕಿ ಡಾ.ವೀಣಾ ಭಾರತಿ ಕಾರ್ಯಕ್ರಮ ಉದ್ಘಾಟಿಸಿದರು. ತ್ರಿಶಲಾ ಬ್ರಹ್ಮಯ್ಯ ಅವರ ‘ಸಮ್ಯಕ್ ದೀಪ್ತಿ’ ಕೃತಿಯನ್ನು ಎಚ್.ಎ.ಪಾರ್ಶ್ವನಾಥ್, ಎಂ.ಆರ್.ಮಂದಾರವಲ್ಲಿ ಅವರ ‘ದಿವ್ಯ ಚಿಕಿತ್ಸೆ’ ಕೃತಿಯನ್ನು ಲೇಖಕಿ ಸುಧಾ ಶರ್ಮಾ ಚವತ್ತಿ ಹಾಗೂ ಟಿ.ಆರ್.ಉಷಾರಾಣಿ ಅವರ ‘ಸಕ್ಕರೆ ಮಿಠಾಯಿ’ ಕೃತಿಯನ್ನು ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಬಿಡುಗಡೆ ಮಾಡಿ ಮಾತನಾಡಿದರು.

2023ನೇ ಸಾಲಿನ ಲೇಖಿಕಾ ಪುಸ್ತಕ ಪ್ರಶಸ್ತಿಗಳನ್ನು ಗಣೇಶ ಅಮೀನಗಡ ಹಾಗೂ ಗೀತಾ ಸೀತಾರಾಂ‌ ಅವರಿಗೆ ಪ್ರದಾನ ಮಾಡಲಾಯಿತು. ವಾಣಿ ಕೌಟುಂಬಿಕ ಕಥಾಸ್ಪರ್ಧೆಯಲ್ಲಿ ವಿಜೇತರಾದ ರಾಧಿಕಾ ಗುಜ್ಜಾರ್, ಸುಚಿತ್ರಾ ಹೆಗಡೆ ಹಾಗೂ ಲತಾ ಹೆಗಡೆ ಅವರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT