ಶನಿವಾರ, ನವೆಂಬರ್ 26, 2022
24 °C
ದಸರಾ ಉತ್ಸವಕ್ಕೆ ಚಾಲನೆ

ಮಹಿಳಾ ಸಬಲೀಕರಣಕ್ಕೆ ಕರ್ನಾಟಕ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದ್ಧೂರಿ ನಾಡಹಬ್ಬ ದಸರಾಕ್ಕೆ ಸೋಮವಾರ ಚಾಲನೆ ನೀಡಿದರು. ರಾಷ್ಟ್ರಪತಿ ಆದ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿ ಆಗಿದ್ದು ವಿಶೇಷ.

ಅಲ್ಲದೇ ದಸರಾ ಉತ್ಸವವನ್ನು ಉದ್ಘಾಟಿಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಅವರದು. ತಮ್ಮನ್ನು ಆಹ್ವಾನಿಸುವಾಗ ರಾಜ್ಯ ಸರ್ಕಾರ ನೀಡಿದ್ದ ಮೈಸೂರು ರೇಷ್ಮೆಸೀರೆಯನ್ನೇ ಉಟ್ಟುಕೊಂಡಿದ್ದ ಅವರು, ಸನ್ಮಾನಿಸಿದಾಗ ತೊಡಿಸಿದ ಮೈಸೂರು ಪೇಟವನ್ನು ಖುಷಿಯಿಂದ ಮುಟ್ಟಿ ಸಂಭ್ರಮಿಸಿದರು.

ಇದುವರೆಗೂ ರಾಜ್ಯಪಾಲರು, ಉಸ್ತುವಾರಿ ಸಚಿವರು, ರೈತರು, ಲೇಖಕರು, ನಟ-ನಟಿಯರು, ರಾಜಕಾರಣಿಗಳು, ವೈದ್ಯರು ಉತ್ಸವವನ್ನು ಉದ್ಘಾಟಿಸಿದ್ದರು. ಇದೇ ಮೊದಲಿಗೆ ದೇಶದ ಪ್ರಥಮ ಪ್ರಜೆಯ ಆಗಮನದಿಂದ ಬೆಟ್ಟವು ವಿಶೇಷವಾಗಿ ಕಳೆಗಟ್ಟಿತ್ತು. ಸೇರಿದ್ದ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತ್ತು.

ಬೃಹತ್‌ ವೇದಿಕೆಯ ಮೇಲೆ ಬೆಳ್ಳಿರಥದಲ್ಲಿ ಕುಳಿತ ನಾಡದೇವಿ ತಾಯಿ ಚಾಮುಂಡೇಶ್ವರಿಯ ಉತ್ಸವಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿ‌ ಅವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.‌

ನಂತರ ಮಾತನಾಡುತ್ತಾ, ‘ಭಕ್ತಿ, ಸಮಾನತೆ ಮತ್ತು ಮಹಿಳಾ ಸಬಲೀಕರಣದ ಐತಿಹಾಸಿಕ ಆದರ್ಶವು ಹೊರ ಹೊಮ್ಮಿದ ರಾಜ್ಯ ಕರ್ನಾಟಕ’ ಎಂದು ಮುರ್ಮು ಬಣ್ಣಿಸಿದರು.

‘ಶ್ರೀಮಂತ ಆಧ್ಯಾತ್ಮಿಕ ಪರಂಪರೆಯುಳ್ಳ ರಾಜ್ಯದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಮುಕ್ತಿಯ ಚಿಂತನೆಯ ಜೊತೆಗೆ ಎಲ್ಲ ಜಾತಿ ಜನರನ್ನೂ ಒಗ್ಗೂಡಿಸಿದ್ದರು. ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣ ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಷಯಗಳ ಚರ್ಚೆಗೆ ವೇದಿಕೆ ಒದಗಿಸಿದ್ದರು. ಆದಿ ಶಂಕರಾಚಾರ್ಯರು  ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿ
ದರು. ರಾಜ್ಯದಲ್ಲಿ ಭಕ್ತಿ ಮಾರ್ಗದ ಜೊತೆಗೆ ವಚನ ಗಾಯನ, ಕೇಳುವ ಪರಂಪರೆ ಇಂದಿಗೂ ಮುಂದುವರಿದಿದೆ’ ಎಂದರು.

‘ದಸರಾ ಭಾರತೀಯ ಸಂಸ್ಕೃತಿಯ ಹೆಮ್ಮೆ. ಮಹಿಳಾ ಶಕ್ತಿ ಗೌರವಿಸುವ ಉತ್ಸವ. ಪ್ರೀತಿ, ಕರುಣೆ, ಕಾಳಜಿ ಮತ್ತು ತ್ಯಾಗವೇ ಮೈವೆತ್ತ ಮಹಿಳೆಯು ಅನ್ಯಾಯ, ಅಧರ್ಮದ ವಿರುದ್ಧ ದುರ್ಗ, ಚಂಡಿಕಾ ಮತ್ತು ಚಾಮುಂಡಿಯ ಅವತಾರಗಳನ್ನು ಎತ್ತುತ್ತಾಳೆ. ಹೀಗಾಗಿಯೇ ನವರಾತ್ರಿಯಲ್ಲಿ ಮಹಿಳಾ ಶಕ್ತಿಯ ಆರಾಧನೆ ನಡೆಯುತ್ತದೆ. ಮಹಿಳಾ ಸಬಲೀಕರಣದ ಪ್ರಯತ್ನಗಳು ಹೆಚ್ಚಬೇಕು’ ಎಂದು ಹೇಳಿದರು.

'ಶತ್ರುಗಳ ವಿರುದ್ಧ ಹೋರಾಡಿದ ರಾಣಿ‌ ಅಬ್ಬಕ್ಕ,‌ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಮಾದರಿಗಳಾಗಿದ್ದಾರೆ. ಈಗಲೂ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಗಮನ ಸೆಳೆಯುವಂಥ ಸಾಧನೆ ಮಾಡಿದ್ದಾರೆ. ಇಷ್ಟಾಗಿಯೂ ಉತ್ತಮ ಸಮಾಜಕ್ಕಾಗಿ ಮಹಿಳೆಯರಿಗೆ ಇನ್ನಷ್ಟು ಅವಕಾಶಗಳು ದೊರಕಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು