ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಲೆಕ್ಕಿಸದೇ ‘ಕರ್ನಾಟಕ’ ಮಾಡಿದ ಅರಸು

Published 31 ಅಕ್ಟೋಬರ್ 2023, 23:30 IST
Last Updated 31 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ರಾಜ್ಯ ಎಂದಿದ್ದುದ್ದನ್ನು ‘ಕರ್ನಾಟಕ ರಾಜ್ಯ’ ಎಂದು ಬದಲಿಸಲು ಈ ಪ್ರಾಂತ್ಯದವರಿಂದಲೇ ವಿರೋಧವಿತ್ತು. ಅದ್ಯಾವುದನ್ನೂ ಲೆಕ್ಕಿಸದೇ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದವರು ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಮೈಸೂರು ಜಿಲ್ಲೆಯವರೇ ಆದ ಅವರ ದಿಟ್ಟ ನಡೆಯಿಂದಾಗಿ ನಾಡಿನ ಜನರ ಉಸಿರು–ಹೆಸರು ಒಂದಾಗುವಂತಾಯಿತು.

ಆ ನಾಯಕನ ಕ್ರಮದಿಂದಾಗಿ, ‘ಹೆಸರು ನಿರ್ದಿಷ್ಟ ಪ್ರಾಂತ್ಯವನ್ನು ಪ್ರತಿನಿಧಿಸುವಂತಿದೆ’ ಎಂಬ ಅಪಸ್ವರ ದೂರಾಯಿತು. ನಾಡಿನ ನಾವೆಲ್ಲರೂ ಒಂದೇ ಎಂಬ ಭಾವನೆಯೂ ಮೂಡಿತು. ಹೆಸರಾದ ಕರ್ನಾಟಕಕ್ಕೆ ಈಗ ಸುವರ್ಣ ಮಹೋತ್ಸವದ ಸಂಭ್ರಮ.

ಭೂಸುಧಾರಣೆ ಕಾಯ್ದೆ ಸೇರಿದಂತೆ ಸಮಾಜಮುಖಿ ಕಾನೂನುಗಳನ್ನು ತಂದ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದು. ‘ಅವರು ನಮ್ಮವರು’ ಎನ್ನುವುದು ಜಿಲ್ಲೆಯ ಜನರ ಹೆಮ್ಮೆ. ‘ಹೆಸರಾದ ಕರ್ನಾಟಕದ ಸುವರ್ಣ ಮಹೋತ್ಸವ’ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ವಿಶೇಷ.

ಕೊರಗು ದೂರ ಮಾಡಿದರು

ಕರ್ನಾಟಕ ಏಕೀಕರಣ ಹೋರಾಟವು ಸ್ವಾತಂತ್ರ್ಯ ಪೂರ್ವದಿಂದಲೂ ತೀವ್ರವಾಗಿತ್ತು. ಚದುರಿದ ಕನ್ನಡ ನುಡಿ ಉಸಿರಾಡುವವರೆಲ್ಲಾ ಒಂದಾಗಬೇಕು ಎಂಬ ತುಡಿತ, ಮಿಡಿತ ಎಲ್ಲೆಡೆಯೂ ಇತ್ತು. ಈ ನೆಲೆಯಲ್ಲಿ ಏಕೀಕರಣ ಹೋರಾಟಗಳು ನಡೆಯತೊಡಗಿದ್ದವು. ಒಗ್ಗೂಡಬೇಕೆನ್ನುವ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಅವರಿಗೂ ಸಮ್ಮತಿ ಇತ್ತು. ಸರ್ವರ ಸಂಘರ್ಷದ ಫಲಶ್ರುತಿ, ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಟ್ಟಾಗಿ ಮೈಸೂರು ರಾಜ್ಯದ ಉದಯವಾಯಿತು. ಆದರೂ ಏನೋ ಕಳೆದುಕೊಂಡ ಭಾವವಿತ್ತು. ಕನ್ನಡದ ಉಸಿರಿರುವರೆಲ್ಲಾ ಒಂದಾದರಾದರೂ ಇದಕ್ಕಿಟ್ಟಿರುವ ಮೈಸೂರು ರಾಜ್ಯ ಎಂಬ ಹೆಸರು ನಿರ್ದಿಷ್ಟ ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ ಎಂಬ ಅಪಸ್ವರ ಇದ್ದೇ ಇತ್ತು. ಇಂತಹ ಕೊರಗು ನೀಗಿಸಿದವರು ಹಾಗೂ ಅಪಸ್ವರ ದೂರ ಮಾಡಿದವರು ದೇವರಾಜ ಅರಸು.

ಅವರು ಕೈಗೊಂಡ ನಿರ್ಧಾರದಿಂದಾಗಿ ಕನ್ನಡಿಗರಲ್ಲಿ ರೋಮಾಂಚನ ಮೂಡಿತ್ತಲ್ಲದೇ, ನಾವೆಲ್ಲರೂ ಒಂದಾದೆವು ಎಂಬ ಭಾವವನ್ನೂ ಮೂಡಿಸಿತು.

ಅವರನ್ನು ಸ್ಮರಿಸಬೇಡವೇ?

ನಾಡಿಗೆ ಅಪಾರ ಕೊಡುಗೆ ನೀಡಿದ ಅರಸರನ್ನು ಸ್ಮರಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಗಳೇನೂ ನಡೆಸಿಲ್ಲ ಎಂಬ ಕೊರಗು ಅವರ ಅನುಯಾಯಿಗಳಲ್ಲಿದೆ. ಜಿಲ್ಲಾ ಕೇಂದ್ರವಾದ ಮೈಸೂರಿನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಅಭಿಮಾನಿಗಳು ಹಾಗೂ ಹೋರಾಟಗಾರರ ಬೇಡಿಕೆಯು ಇಂದಿಗೂ ಈಡೇರಿಲ್ಲ. ‘ಅರಸು ದಾರಿಯಲ್ಲಿ ನಡೆಯುತ್ತಿರುವೆ’ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದರೂ ಇತ್ತ ಗಮನಹರಿಸುವರೇ ಎಂಬ ನಿರೀಕ್ಷೆ ಜನರದ್ದಾಗಿದೆ.

‘ಉಳುವವನೇ ಭೂ ಒಡೆಯ’ ಎಂಬ ಕಾನೂನಿನ ಮೂಲಕ ಸಾವಿರಾರು ಜನರ ಪಾಲಿಗೆ ಹೊಸ ಬದುಕು ಕಟ್ಟಿಕೊಟ್ಟ ಅರಸರ ಹುಟ್ಟೂರು ಕಲ್ಲಹಳ್ಳಿ ಅಭಿವೃದ್ಧಿಯೂ ನಡೆದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕು ಎಂಟು ವರ್ಷ ಗತಿಸಿದರೂ ಪೂರ್ಣಗೊಂಡಿಲ್ಲ. 2015ರಲ್ಲಿ ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಹುಟ್ಟೂರು ಅಭಿವೃದ್ಧಿಗೆ ₹ 10 ಕೋಟಿ ಅನುದಾನದಲ್ಲಿ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಿಡುಗಡೆಯಾಗಿದ್ದು ₹ 7.5 ಕೋಟಿ ಮಾತ್ರ! ಅರಸು ಅವರ ಮನೆ ಪ್ರವಾಸಿ ತಾಣವಾಗಿ ರೂಪುಗೊಂಡೇ ಇಲ್ಲ. ಮಾದರಿ ಗ್ರಾಮವನ್ನಾಗಿಸಬೇಕು ಎಂಬ ಬೇಡಿಕೆಯೂ ಈಡೇರಿಲ್ಲ. ಅವರ ಮನೆಯನ್ನು ಸರ್ಕಾರ ಪಡೆದುಕೊಂಡು, ಯುವಜನರಿಗೆ ಅನುಕೂಲವಾಗುವಂತಹ ಗ್ರಂಥಾಲಯ ಮತ್ತು ಮ್ಯೂಸಿಯಂ ನಿರ್ಮಿಸಬೇಕು ಎಂಬ ಒತ್ತಾಯವೂ ಇದೆ.

ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆಯನ್ನು ಈ ವರ್ಷವೇ ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲೂ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು.
ಎಂ.ಡಿ. ಸುದರ್ಶನ್‌, ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮೈಸೂರಿನ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಅರಸು ಪ್ರತಿಮೆ ಪ್ರತಿಷ್ಠಾಪಿಸುವಂತೆ ಮುಖ್ಯಮಂತ್ರಿ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಇದು ತುರ್ತಾಗಿ ಆಗಬೇಕಿದೆ.
ಎ.ಎಚ್. ವಿಶ್ವನಾಥ್, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT