ಮೈಸೂರು: ‘ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ₹ 5 ಕೋಟಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬೇನಾಮಿ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
‘ಅವರು ಯಾರ‍್ಯಾರ ಬಳಿ ಹಣ ಪಡೆದಿದ್ದಾರೆ, ಯಾರಿಗೆಲ್ಲ ಹೋಗಿದೆ ಎನ್ನುವುದನ್ನು ಸಿಸಿಬಿ ಪೊಲೀಸರು ಇನ್ನೆರಡು ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ಒಟ್ಟು 17 ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. ₹ 185 ಕೋಟಿಯ ವ್ಯವಹಾರ ನಡೆದಿದೆ. ಚೈತ್ರಾ ಕುಂದಾಪುರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಜೊತೆ ನೇರ ಸಂಪರ್ಕ ಹೊಂದಿದ್ದಾರೆ’ ಎಂದು ದೂರಿದರು.
‘ಮೈಸೂರು ಭಾಗದಲ್ಲೂ ಇಬ್ಬರು ಹಣ ನೀಡಿ ಕಳೆದುಕೊಂಡಿದ್ದಾರೆ. 9 ಜನರ ತಂಡದಿಂದ ವಂಚನೆಯ ಕೃತ್ಯ ನಡೆದಿದೆ. ಇವರೆಲ್ಲಾ ಬಿಜೆಪಿ ಹಾಗೂ ಅರ್‌ಎಸ್‌ಎಸ್ ಕಾರ್ಯಕರ್ತರು. ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಎಂದು ಹೇಳುವ ಬಿಜೆಪಿಯವರ ಬಣ್ಣ ಈ ಪ್ರಕರಣದಲ್ಲಿ ಬಯಲಾಗಿದೆ’ ಎಂದು ಆರೋಪಿಸಿದರು.
‘ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯೇ ಎನ್ನುವುದು ತನಿಖೆಯಾಗಬೇಕು. ಬಿಜೆಪಿಯ ಮುಖಂಡ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಭಾಷಣಕರ ಚಕ್ರವರ್ತಿ ಸೂಲಿಬೆಲೆ ಜೊತೆ ಚೈತ್ರಾ ಸಂಬಂಧವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು’ ಎಂದು ಹೇಳಿದರು.
‘ಚೈತ್ರಾ ಪಿಎಸ್‌ಐ ಹಾಗೂ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಆಕೆಗೆ ಜೈಲಿನಲ್ಲಿರುವ ಕೆಲವರೊಂದಿಗೆ ಸಂಪರ್ಕವಿದೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕ ತನಿಖೆ ನಡೆಸುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.